ಹಾವೇರಿ: ಮಾನಸಿಕ ಅಸ್ವಸ್ಥನಾಗಿ ಬಳಲುತ್ತಾ ಮನೆಯಲ್ಲೇ ವಾಸವಾಗಿದ್ದ ವ್ಯಕ್ತಿಯನ್ನು ರಕ್ಷಿಸಿ ಪೊಲೀಸರು ಮತ್ತು ಅಧಿಕಾರಿಗಳು ಚಿಕಿತ್ಸೆಗೆ ಎಂದು ಜಿಲ್ಲಾಸ್ಪತ್ರೆಗೆ ದಾಖಲಿಸಿದ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಆಡೂರು ಗ್ರಾಮದಲ್ಲಿ ನಡೆದಿದೆ.
ಸಿದ್ದಪ್ಪ ರೇವಣ(40) ಮಾನಸಿಕ ಅಸ್ವಸ್ಥ ವ್ಯಕ್ತಿಯಾಗಿದ್ದು, ಇವರು 2002ರಲ್ಲಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಚಿನ್ನದ ಪದಕದೊಂದಿಗೆ ಎಂ.ಕಾಂ ಪದವಿ ಪಡೆದಿದ್ದರು. ಆದರೆ ಕಳೆದ ಕೆಲವು ವರ್ಷಗಳಿಂದ ಯಾವುದೋ ಕಾರಣಕ್ಕೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಾ ಮನೆಯಲ್ಲೇ ತಂದೆಯೊಂದಿಗೆ ವಾಸವಾಗಿದ್ದರು.
Advertisement
ಇದೀಗ ಸಿದ್ದಪ್ಪ ಅವರ ಆರೋಗ್ಯದ ಪರಿಸ್ಥಿತಿ ಹದಗೆಡುತ್ತಾ ಬಂದಿದ್ದರಿಂದ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಆಡೂರು ಠಾಣೆ ಪೊಲೀಸರು ಮತ್ತು ಆರೋಗ್ಯ ಇಲಾಖೆಯವರು ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಸಿದ್ದಪ್ಪರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿದೆ ಎನ್ನಲಾಗಿದೆ. ಸಿದ್ದಪ್ಪರೊಂದಿಗೆ ಅವರ ತಂದೆಯೂ ಆಸ್ಪತ್ರೆಯಲ್ಲಿದ್ದು ಮಗನನ್ನು ನೋಡಿಕೊಳ್ಳುತ್ತಿದ್ದಾರೆ.