ಗದಗ: ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೊಬ್ಬ ಅಣ್ಣನ ಹೆಂಡತಿಯನ್ನು ಎಳೆದಾಡಿ ಹಿಗ್ಗಾಮುಗ್ಗಾ ಥಳಿಸಿರುವ ಅಮಾನವೀಯ ಘಟನೆ ಗದಗ ತಾಲೂಕಿನ ಕಳಸಾಪೂರ ತಾಂಡದಲ್ಲಿ ನಡೆದಿದೆ.
ಸೋಮವಾರ ಸಂಜೆ ವೇಳೆ ಮೈದುನನ ಅಟ್ಟಹಾಸಕ್ಕೆ ಮಹಿಳೆ ಸಂಗೀತಾ ಲಮಾಣಿ ಗದಗ ಜಿಲ್ಲಾ ಆಸ್ಪತ್ರೆಯಲ್ಲಿ ನರಳಾಡುವಂತಾಗಿದೆ. ಘಟನೆಯ ವೇಳೆ ಸಂಗೀತಾ ಅವರು ಮನೆಯಲ್ಲಿ ಒಬ್ಬರೇ ಇದ್ದರು. ಮಂಚದಲ್ಲಿ ಮಲಗಿಕೊಂಡಿದ್ದ ವೇಳೆ ಮೈದುನ ಸುರೇಶ್ ಲಮಾಣಿ, ಎದ್ದೇಳಿ ಅಂತಾ ಅತ್ತಿಗೆಗೆ ಹೇಳಿ ಆಕೆಯ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ ಎಂದು ಗಾಯಾಳು ಪತಿ ಹಾಗೂ ಅತ್ತೆ ಆರೋಪ ಮಾಡಿದ್ದಾರೆ.
ಮೈದುನನ ಹಲ್ಲೆಯಿಂದ ಸಂಗೀತಾರ ಬಾಯಿ, ಕೈ, ಬೆನ್ನು, ಎದೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಗದಗ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಂಗೀತಾ ಅವರನ್ನು ಬಿಡಿಸಲು ಬಂದವರಿಗೆ ಸುರೇಶ್ ಲಾಂಗ್, ಮಚ್ಚುಗಳನ್ನ ತೋರಿಸಿ ಬೆದರಿಸಿ ರೌಡಿಯಂತೆ ವರ್ತಿಸಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಕುರಿತು ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.