-ಪ್ರವಾಹ ಇಳಿದು ತಿಂಗಳಾದ್ರೂ ಆಗಿಲ್ಲ ಸೇತುವೆ ದುರಸ್ತಿ ಕಾರ್ಯ
ಮಡಿಕೇರಿ: ಪ್ರವಾಹದಲ್ಲಿ ಕೊಚ್ಚಿಹೋಗಿದ್ದ ಸೇತುವೆ ಬಿಟ್ಟೆರೆ ಬೇರೆ ಮಾರ್ಗವಿಲ್ಲದೆ, ಅಲ್ಲಲ್ಲಿ ಕಿತ್ತುಹೋಗಿ ದುಸ್ಥಿತಿಯಲ್ಲಿರುವ ತೂಗು ಸೇತುವೆ ಮೇಲೆಯೇ ನೂರಾರು ಜನರು ಭಯದಿಂದ ಓಡಾಟ ನಡೆಸುತ್ತಿದ್ದಾರೆ.
ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಕಣಿವೆ ತೂಗುಸೇತುವೆ ಪ್ರವಾಹಕ್ಕೆ ಮುಳುಗಡೆಯಾಗಿತ್ತು. ಆದ್ದರಿಂದ ಸೇತುವೆಯ ಕೆಳಭಾಗ ಅಲ್ಲಲ್ಲಿ ಕಿತ್ತು ಹೋಗಿದೆ. ಯಾವಾಗ ಬೇಕಾದರು ಬೀಳುವ ಪರಿಸ್ಥಿತಿಯಲ್ಲಿದೆ. ಕೊಡಗು ಮತ್ತು ಮೈಸೂರು ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಕಣಿವೆ ತೂಗುಸೇತುವೆ ಇದಾಗಿದ್ದು, ಚನ್ನಕೇಶವಪುರ, ದಿಂಡಗಾಡು, ಅಂಬಲಾರೆ ಸೇರಿ 13 ಗ್ರಾಮಗಳಿಗೆ ಸಂಪರ್ಕ ಸೇತುವೆ ಆಗಿದೆ. ಆದ್ದರಿಂದ ಬೇರೆ ಮಾರ್ಗವಿಲ್ಲದೆ ಜನರು ಇದರ ಮೇಲೆ ಭಯದಿಂದ, ಜೀವ ಕೈಯಲ್ಲಿ ಹಿಡಿದುಕೊಂಡು ಸಾಗುತ್ತಿದ್ದಾರೆ.
Advertisement
Advertisement
ಈಗಲೂ ಕಾವೇರಿ ನದಿ ಮೈದುಂಬಿ ಹರಿಯುತ್ತಿದ್ದು, ಸ್ವಲ್ಪ ಯಾಮಾರಿ ಜಾರಿಬಿದ್ದರೆ ಜನರು ನೇರವಾಗಿ ನೀರು ಪಾಲಾಗುತ್ತಾರೆ. ಅಲ್ಲದೆ ಬೇರೆ ಮಾರ್ಗವಿಲ್ಲದ ಕಾರಣಕ್ಕೆ ಕೂಡಿಗೆ, ಹೆಬ್ಬಾಲೆಯ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಇದೇ ಸೇತುವೆ ಮೂಲಕ ಹಾದು ಹೋಗುತ್ತಾರೆ.
Advertisement
Advertisement
ಜಿಲ್ಲೆಯಲ್ಲಿ ಪ್ರವಾಹ ಇಳಿದು ತಿಂಗಳಾದರೂ ಸರ್ಕಾರ ಪ್ರವಾಹ ಸಂತ್ರಸ್ತರ ನೆರವಿಗೆ ಸರಿಯಾಗಿ ಸ್ಪಂದಿಸಿಲ್ಲ. ಜನ ಕಷ್ಟ ಪಡುತ್ತಿದ್ದಾರೆ ಎಂದು ತಿಳಿದಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಇತ್ತ ಗಮನ ಕೊಟ್ಟಿಲ್ಲ. ತೂಗು ಸೇತುವೆ ದುರಸ್ಥಿ ಕಾರ್ಯವನ್ನು ಕೂಡ ಮಾಡಿಸಿಲ್ಲ. ಆದ್ದರಿಂದ ಸ್ಥಳೀಯರು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಸಿಡಿದೆದ್ದಿದ್ದಾರೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸೇತುವೆ ದುರಸ್ತಿ ಕಾರ್ಯ ಮಾಡಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.