ಚಿಕ್ಕಬಳ್ಳಾಪುರ: ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿಯಾದ ಪರಿಣಾಮ ಹಾಲೆಲ್ಲಾ ರಸ್ತೆ ಪಾಲಾಗಿರುವ ಘಟನೆ ಚಿಕ್ಕಬಳ್ಳಾಪುರ ನಗರದ ಹೊರವಲಯದ ವಾಪಸಂದ್ರ ಸೇತುವೆ ಬಳಿ ನಡೆದಿದೆ
ಸಾದಲಿ ಗ್ರಾಮದ ಹಾಲು ಶೀತಲೀಕರಣ ಕೇಂದ್ರದಿಂದ ಹಾಲನ್ನ ಯಲಹಂಕದ ಕೆಎಂಎಫ್ ನ ಮದರ್ ಡೈರಿಗೆ ಟ್ಯಾಂಕರ್ ಮೂಲಕ ಸಾಗಿಸಲಾಗುತ್ತಿತ್ತು. ಆದರೆ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ವಾಪಸಂದ್ರ ಸೇತುವೆ ಕೆಳಭಾಗದ ತಿರುವಿನಲ್ಲಿ ಉರುಳಿಬಿದ್ದಿದೆ. ಹಾಲಿನ ಟ್ಯಾಂಕರ್ ಪಲ್ಟಿಯಾದ ಕಾರಣ ಟ್ಯಾಂಕರ್ ನಲ್ಲಿದ್ದ ಬಹುತೇಕ ಹಾಲು ರಸ್ತೆಪಾಲಾಗಿದೆ. ರಸ್ತೆಯ ತುಂಬೆಲ್ಲಾ ಹಾಲಿನ ಹೊಳೆಯೇ ಹರಿದಿದೆ.
Advertisement
Advertisement
ಘಟನೆಯಲ್ಲಿ ಟ್ಯಾಂಕರ್‍ನ ಚಾಲಕ ಕ್ಲೀನರ್ ಸೇರಿದಂತೆ ನಾಲ್ವರು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ. ಸದ್ಯಕ್ಕೆ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಹಾಲು ರಸ್ತೆ ಪಾಲಾಗುತ್ತಿದ್ದನ್ನು ಗಮನಿಸಿದ ಜನರು ಬಿಂದಿಗೆ, ಬಾಟಲ್ ಮತ್ತು ಕ್ಯಾನ್‍ಗಳಲ್ಲಿ ತುಂಬಿಸಿಕೊಂಡು ಸಂತೋಷದಿಂದ ಹೋಗಿದ್ದಾರೆ.
Advertisement
ಸಾದಲಿ ಶೀತಲೀಕರಣ ಕೇಂದ್ರದಿಂದ ರಾಷ್ಟ್ರೀಯ ಹೆದ್ದಾರಿ 7 ರ ಮುಖಾಂತರ ಚಿಕ್ಕಬಳ್ಳಾಪುರ, ದೇವನಹಳ್ಳಿ ಮಾರ್ಗದಿಂದ ಯಲಹಂಕಕ್ಕೆ ಸಂಚರಿಸುತ್ತಿತ್ತು. ಆದರೆ ವಾಪಸಂದ್ರ ಸೇತುವೆ ಬಳಿ ಚಿಕ್ಕಬಳ್ಳಾಪುರ ನಗರದೊಳಗೆ ಪ್ರವೇಶ ಮಾಡಿದೆ. ಅಸಲಿಗೆ ಚಿಕ್ಕಬಳ್ಳಾಪುರ ನಗರದೊಳಗೆ ಪ್ರವೇಶ ಮಾಡದೆ ನೇರವಾಗಿ ಯಲಹಂಕಕ್ಕೆ ತೆರಳಬಹುದಿತ್ತು. ಆದರೆ ಟ್ಯಾಂಕರ್ ಚಾಲಕನ ಹಣದ ಆಸೆಗೆ ಮಾರ್ಗ ಮಧ್ಯೆ ಚಿಕ್ಕಬಳ್ಳಾಪುರ ನಗರಕ್ಕೆ ಪ್ರಯಾಣಿಕರನ್ನ ಹತ್ತಿಸಿಕೊಂಡಿದ್ದಾನೆ. ಅವರನ್ನ ಇಳಿಸುವ ಸಲುವಾಗಿಯೇ ಚಾಲಕ ಚಿಕ್ಕಬಳ್ಳಾಪುರ ನಗರದತ್ತ ಪ್ರವೇಶ ಮಾಡಿದ್ದಾನೆ. ಈ ವೇಳೆ ದುರದೃಷ್ಟವಶಾತ್ ಚಿಕ್ಕಬಳ್ಳಾಪುರ ನಗರ ಪ್ರವೇಶದ ಆರಂಭದ ತಿರುವಿನಲ್ಲಿ ಟ್ಯಾಂಕರ್ ಪಲ್ಟಿಯಾಗಿದೆ.
Advertisement
ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಕ್ರೇನ್ ಸಹಾಯದಿಂದ ಟ್ಯಾಂಕರ್‍ನ್ನು ತೆರವುಗೊಳಿಸಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.