ದಾವಣಗೆರೆ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಅರ್ಧ ಕ್ಯಾಬಿನೆಟ್ ರಚನೆಯಾಗಿದ್ದು, ಈ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಸಿಎಂ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ದಾವಣಗೆರೆ ಜಿಲ್ಲೆಯಲ್ಲಿ ಆರು ಜನ ಬಿಜೆಪಿ ಶಾಸಕರಿದ್ದರೂ ಸಚಿವ ಸ್ಥಾನ ಸಿಗಲಿಲ್ಲ. ಈ ಹಿನ್ನೆಲೆಯಲ್ಲಿ ಜನ ಸಿಎಂ ವಿರುದ್ಧ ಕಿಡಿ ಕಾರುತ್ತಿದ್ದಾರೆ. ದಾವಣಗೆರೆಯ 8 ಕ್ಷೇತ್ರದಲ್ಲಿ 6 ಬಿಜೆಪಿ 2 ಕಾಂಗ್ರೆಸ್ ಸ್ಥಾನ ಪಡೆದಿವೆ. ಆದರೆ ಮುಖ್ಯಮಂತ್ರಿ ಜಿಲ್ಲೆಗೆ ತಾಮ್ರದ ಚೆಂಬು ನೀಡಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಜನ ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ.
ರಾಜ್ಯ ಸಚಿವ ಸಂಪುಟ ರಚನೆಯಾದ ಹಿನ್ನೆಲೆಯಲ್ಲಿ ಸಾಕಷ್ಟು ಜನ ಶಾಸಕರು ಅಸಮಾಧಾನ ಹೊರ ಹಾಕಿದ್ದಾರೆ. ಅದರಂತೆ ದಾವಣಗೆರೆಯ ಹೊನ್ನಾಳಿ ಕ್ಷೇತ್ರದ ಶಾಸಕ ರೇಣುಕಾಚಾರ್ಯ ಅವರ ಕಾರ್ಯಕರ್ತರು ಕೂಡ ಅಸಮಧಾನ ಹೊರ ಹಾಕಿದ್ದು, ಈ ಬಾರಿ ನಮ್ಮ ನಾಯಕನಿಗೆ ಸಚಿವ ಸ್ಥಾನ ನೀಡದೇ ಇರುವುದು ಒಂದು ಕಡೆ ನೋವಾಗಿದೆ ಎಂದು ಹೇಳಿದ್ದರು. ಆದರೆ ರೇಣುಕಾಚಾರ್ಯ ಅವರು ಯಾವತ್ತೂ ಸಚಿವ ಸ್ಥಾನಕ್ಕೆ ಆಸೆ ಪಟ್ಟವರಲ್ಲ. ಕೇವಲ ಕಾರ್ಯಕರ್ತರ ಆಸೆಯಾಗಿತ್ತು. ಯಡಿಯೂರಪ್ಪನವರು ಸಿಎಂ ಆದರೆ ಸಾಕು ನಾನು ಸಚಿವನಾದಂತೆ ಎಂದು ಹೇಳುತ್ತಿದ್ದರು. ಇದೀಗ ಅವರಿಗೂ ಸಚಿವ ಸ್ಥಾನ ಕೈ ತಪ್ಪಿರುವುದು ಜನರ ಆಕ್ರೋಸಕ್ಕೆ ಕಾರಣವಾಗಿದೆ.