ಮಂಡ್ಯ: ಮಕ್ಕಳಾಗುತ್ತವೆ ಎಂಬ ಮೂಢನಂಬಿಕೆಯಿಂದ ಅರಣ್ಯ ಪ್ರದೇಶಕ್ಕೆ ಬೆಂಕಿ ಇಟ್ಟ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕರಿಘಟ್ಟ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಭಾನುವಾರ ಕರಿಘಟ್ಟದಲ್ಲಿ ಶ್ರೀ ವೆಂಕಟರಮಣ ಜಾತ್ರೆ ನಡೆದಿತ್ತು. ಜಾತ್ರೆಯ ಸಂದರ್ಭದಲ್ಲಿ ಅರಣ್ಯಕ್ಕೆ ಬೆಂಕಿ ಇಟ್ಟರೆ ಮಕ್ಕಳಾಗುತ್ತವೆ ಎಂದು ಜನ ನಂಬಿದ್ದು, ವರ್ಷಾನು ವರ್ಷಗಳಿಂದ ಇದು ನಡೆದುಕೊಂಡು ಬಂದಿದೆ. ಹೀಗಾಗಿ ಮಕ್ಕಳಿಲ್ಲದವರು ಕರಿಘಟ್ಟ ವೆಂಕಟರಮಣಸ್ವಾಮಿ ಜಾತ್ರೆ ನಡೆಯುವ ಕೆಲವು ದಿನ ಮುಂಚೆ ಅಥವಾ ನಂತರ ಅರಣ್ಯಕ್ಕೆ ಬೆಂಕಿ ಇಡುವುದು ಮಾಮೂಲು ಪದ್ಧತಿಯಂತೆ ನಡೆದುಕೊಂಡು ಬಂದಿದೆ.
Advertisement
Advertisement
ಇದರಿಂದ ಪ್ರತಿ ವರ್ಷ ನೂರಾರು ಎಕರೆ ಅರಣ್ಯ ಪ್ರದೇಶ ನಾಶವಾಗುತ್ತಾ ಬಂದಿದೆ. ಹೀಗಾಗಿ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಕಳೆದ ನಾಲ್ಕೈದು ವರ್ಷಗಳಿಂದ ಅಗ್ನಿಶಾಮಕ ಸಿಬ್ಬಂದಿ, ಪರಿಸರ ಪ್ರೇಮಿಗಳು ಅರಣ್ಯಕ್ಕೆ ಬೆಂಕಿ ಇಡದಂತೆ ಮನವಿ ಮಾಡಿ ಮೂಢನಂಬಿಕೆ ಹೋಗಲಾಡಿಸಲು ಯತ್ನಿಸಿದ್ದಾರೆ. ಆದ್ರೆ ತಮ್ಮ ನಂಬಿಕೆ ಬಿಡಲೊಪ್ಪದ ಕೆಲವರು ಯಾರಿಗೂ ತಿಳಿಯದಂತೆ ಸೋಮವಾರ ಅರಣ್ಯಕ್ಕೆ ಬೆಂಕಿ ಹಾಕಿದ್ದಾರೆ.
Advertisement
ಇದರಿಂದ ಹತ್ತಾರು ಎಕರೆ ಅರಣ್ಯ ನಾಶವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು, ಪರಿಸರ ಪ್ರೇಮಿಗಳು ಪುನಃ ಈ ರೀತಿ ಘಟನೆ ಮರುಕಳಿಸದಂತೆ ಸಾರ್ವಜನಿಕರಿಗೆ ಮನವಿ ಮಾಡುತ್ತಿದ್ದಾರೆ.