‘ಹರೀಶ ವಯಸ್ಸು 36′ ಹೀಗೊಂದು ಸಿನಿಮಾ ತನ್ನ ವಿಭಿನ್ನ ಟೈಟಲ್ ಮೂಲಕವೇ ಸಖತ್ ಸುದ್ದಿಯಲ್ಲಿದೆ. ಬಿಡುಗಡೆಯಾಗಿರುವ ಫಸ್ಟ್ ಲುಕ್ ಪೋಸ್ಟರ್ ಟೈಟಲ್ ಹೆಚ್ಚಿಸಿದ್ದ ಕುತೂಹಲವನ್ನು ಇನ್ನಷ್ಟು ದುಪ್ಪಟ್ಟಾಗಿಸಿದೆ. ವಿಭಿನ್ನ ಕಥಾಹಂದರ ಒಳಗೊಂಡ ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಪದ್ಮವಿಭೂಷಣ ಪುರಸ್ಕೃತ ಡಾ. ವಿರೇಂದ್ರ ಹೆಗ್ಗಡೆ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಸಾಥ್ ನೀಡಿದ್ರು. ಇದೀಗ ಚಿತ್ರತಂಡ ಕರುನಾಡ ರತ್ನ ಪುನೀತ್ ರಾಜ್ ಕುಮಾರ್ ಹಾಡಿರುವ ಚಿತ್ರದ ಹಾಡಿನ ಮೇಕಿಂಗ್ ವೀಡಿಯೋ ಬಿಡುಗಡೆ ಮಾಡಿ ಸುದ್ದಿಯಲ್ಲಿದೆ.
ನಟನೆ ಜೊತೆಗೆ ಹಲವಾರು ಸಿನಿಮಾಗಳ ಹಾಡಿಗೆ ಅಪ್ಪು ದನಿಯಾಗುತ್ತಿದ್ರು. ಅಪ್ಪು ಕೈಯಲ್ಲಿ ಒಂದು ಹಾಡು ಹಾಡಿಸಬೇಕು ಎಂದು ಬಂದವರಿಗೆ ಅವರ ಆಸೆ ನೆರವೇರಿಸಿ ಕಳುಹಿಸುತ್ತಿದ್ರು ಯುವರತ್ನ. ಇಂದು ಪ್ರೀತಿಯ ಪವರ್ ಸ್ಟಾರ್ ನಮ್ಮೊಂದಿಗಿಲ್ಲ. ಆದರೆ ಅವರು ಹಲವಾರು ಸಿನಿಮಾಗಳ ಹಾಡಿಗೆ ದನಿಯಾಗಿದ್ದಾರೆ. ಆ ಹಾಡುಗಳೆಲ್ಲ ಈಗ ಒಂದೊಂದಾಗಿ ಬಿಡುಗಡೆಯಾಗುತ್ತಿವೆ. ಇದೀಗ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿರುವ ಹರೀಶ ವಯಸ್ಸು 36 ಚಿತ್ರತಂಡ ಅಪ್ಪು ದನಿಯಾಗಿರುವ ‘ಹರಿಶಣ್ಣಂಗೆ ವಯಸ್ಸು ಮೂವತ್ತಾರು’ ಹಾಡಿನ ಮೇಕಿಂಗ್ ವೀಡಿಯೋ ಬಿಡುಗಡೆ ಮಾಡಿದೆ. ಅಪ್ಪು ದನಿಯಲ್ಲಿ ಮೂಡಿ ಬಂದ ಈ ಹಾಡಿಗೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಹುಟ್ಟೂರಿಗೆ ನೆರವಾದ ಸೋನು ಸೂದ್-1,000 ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಣೆ
ಗುರುರಾಜ್ ಜೇಷ್ಠ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಹರೀಶ ವಯಸ್ಸು 36 ಚಿತ್ರ ಸದ್ಯ ಸ್ಯಾಂಡಲ್ ವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ಯೋಗೀಶ್ ಶೆಟ್ಟಿ ನಾಯಕ ನಟನಾಗಿ ನಟಿಸುತ್ತಿದ್ದು, ರಿಷಭ್ ಶೆಟ್ಟಿ ನಿರ್ದೇಶನದಲ್ಲಿ ಮೂಡಿ ಬಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಸಿನಿಮಾದಲ್ಲಿ ಜೋಸೆಫ್ ಪಾತ್ರಧಾರಿಯಾಗಿ ನಟಿಸಿದ್ದ ಮಂಜೇಶ್ವರದ ಯೋಗೀಶ್ ಶೆಟ್ಟಿ ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟನಾಗಿ ನಟಿಸುತ್ತಿದ್ದಾರೆ. ಇನ್ನು ಚಿತ್ರದ ನಿರ್ದೇಶಕರಾದ ಗುರುರಾಜ್ ಜೇಷ್ಠ ಕೂಡ ಮೂಲತಃ ಮಂಗಳೂರಿನವರೇ ಆದ್ರಿಂದ ಇದೊಂದು ಕರಾವಳಿ ಪ್ರತಿಭೆಗಳೆಲ್ಲ ಸೇರಿ ಮಾಡುತ್ತಿರುವ ಅಚ್ಚ ದೇಸಿ ಸೊಗಡಿನ ಸಿನಿಮಾ ಎಂದರೂ ತಪ್ಪಾಗೋದಿಲ್ಲ. ಯುವಕನೋರ್ವ ಹುಡುಗಿ ಹುಡುಕಲು ಪರದಾಡುವ ಅಂಶವನ್ನು ಕಾಮಿಡಿ ಎಳೆಯಲ್ಲಿ ಕಟ್ಟಿಕೊಡುವ ಕಥಾಹಂದರವನ್ನು ಈ ಸಿನಿಮಾ ಒಳಗೊಂಡಿದೆ. ಶ್ವೇತಾ ಅರೆಹೊಳೆ ನಾಯಕಿಯಾಗಿ ನಟಿಸಿದ್ದು, ಹಿರಿಯ ನಟ ಉಮೇಶ್, ಪ್ರಕಾಶ್ ತುಮಿನಾಡು ಒಳಗೊಂಡಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ.
ಚಿತ್ರಕ್ಕೆ ಮೋಹನ್ ಪಡ್ರೆ ಛಾಯಾಗ್ರಹಣವಿದೆ. ನಿರ್ದೇಶಕ ಗುರುರಾಜ್ ಜೇಷ್ಠ ಅವರೇ ಚಿತ್ರಕ್ಕೆ ಸಂಗೀತ ನೀಡಿದ್ದು, ಸಂಪೂರ್ಣ ಸಿನಿಮಾವನ್ನು ಕರಾವಳಿ ಭಾಗದಲ್ಲಿಯೇ ಚಿತ್ರೀಕರಿಸಲಾಗಿದೆ. ಶಿರಡಿ ಸಾಯಿ ಬಾಲಾಜಿ ಫಿಲ್ಮ್ಸ್ ಬ್ಯಾನರ್ ನಡಿ ಲಕ್ಷ್ಮೀಕಾಂತ್ ರಾವ್, ತ್ರಿಲೋಕ್ ಕುಮಾರ್, ಆರ್ ದೀಪಾ, ಶ್ರೀದೇವಿ ಹಾಗೂ ರಜಿನಿ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದನ್ನೂ ಓದಿ: ಕತ್ರಿನಾ ಕೈಫ್ ವಜ್ರ ಖಚಿತ ಮಾಂಗಲ್ಯ ಸರದ ಬೆಲೆ ಎಷ್ಟು ಗೊತ್ತಾ?