ಪಾಟ್ನಾ: ನೂರಾರು ಜನ ಯಾವುದೇ ಭಯವಿಲ್ಲದೆ ಕೈಯಲ್ಲಿ ಹಾವುಗಳನ್ನ ಹಿಡಿದುಕೊಂಡು ಮೆರವಣಿಗೆ ಸಾಗುತ್ತಿರುವ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ.
ಅದರಲ್ಲೂ ಈ ವಿಡಿಯೋದ ಬಗ್ಗೆ ಕೆಲವು ಯೂಟ್ಯೂಬ್ ಚಾನೆಲ್‍ಗಳು ಮತ್ತೊಂದು ಬಗೆಯದ್ದೇ ವಿವರಣೆ ನೀಡಿವೆ. ಬಿಹಾರದ ರತ್ನಪುರಿ ಗ್ರಾಮದಲ್ಲಿ ಮನೆ ನಿರ್ಮಿಸಲು ಪಾಯ ತೋಡುವಾಗ ಸಾವಿರಾರು ವರ್ಷಗಳಷ್ಟು ಹಳೆಯದಾದ 160 ಕೆಜಿ ತೂಕದ ಚಿನ್ನದ ಶಿವನ ವಿಗ್ರಹ ಸಿಕ್ಕಿದೆ. ಈ ವಿಗ್ರಹದ ಸುತ್ತ ಸಾವಿರಾರು ಹಾವುಗಳು ಪತ್ತೆಯಾಗಿದ್ದು, ವಿಗ್ರಹವನ್ನ ಕಾವಲು ಕಾಯುತ್ತಿದ್ದವು. ಅದನ್ನ ಜನರು ಹಿಡಿದುಕೊಂಡು ಮೆರವಣಿಗೆ ಹೊರಟಿದ್ದಾರೆ. ಇದೊಂದು ಪವಾಡ ಎಂದು ವಿಡಿಯೋದ ವಿವರಣೆಯಲ್ಲಿ ಹೇಳಲಾಗಿದ್ದು, ಕೆಲವು ವೆಬ್‍ಸೈಟ್‍ಗಳಲ್ಲೂ ಇದೇ ರೀತಿ ವರದಿಯಾಗಿದೆ. ಆದ್ರೆ ಈ ಸುದ್ದಿ ಎಷ್ಟು ಸತ್ಯ ಎಂಬುದನ್ನ ಗಮನಿಸಬೇಕಾಗುತ್ತದೆ.
ಯಾಕಂದ್ರೆ ಕಳೆದ ವಾರ ಬಿಹಾರದಲ್ಲಿ ಶ್ರಾವಣ ಅಮಾವಾಸ್ಯೆಯ ಪ್ರಯುಕ್ತ ಜನರು ಕೈಯಲ್ಲಿ ಹಾವುಗಳನ್ನ ಹಿಡಿದು ಮೆರವಣಿಗೆ ಹೋಗುತ್ತಿರುವ ಬಗ್ಗೆ ಸುದ್ದಿ ಸಂಸ್ಥೆಯೊಂದು ಫೋಟೋವೊಂದನ್ನ ಪ್ರಕಟಿಸಿತ್ತು. ಕೆಲವು ಮಾಧ್ಯಮಗಳು ಕೂಡ ನಾಗ ಪಂಚಮಿ ಪ್ರಯುಕ್ತ ಜನ ಹಾವು ಹಿಡಿದು ಮೆರವಣಿಗೆ ಹೋಗುತ್ತಿರುವ ಬಗ್ಗೆ ವರದಿ ಮಾಡಿದ್ದವು. ಯೂಟ್ಯೂಬ್‍ನಲ್ಲಿ ಬಿಹಾರದ ನಾಗ ಪಂಚಮಿ ಎಂದು ಹುಡುಕಿದ್ರೆ ಇಂತಹ ಸಾಕಷ್ಟು ಹಳೆಯ ವಿಡಿಯೋಗಳು ಸಿಗುತ್ತವೆ. ಬಿಹಾರದಲ್ಲಿ ನಾಗ ಪಂಚಮಿ ಸಂದರ್ಭದಲ್ಲಿ ಈ ರೀತಿ ಹಾವುಗಳನ್ನ ಕೈಯಲ್ಲಿ ಹಿಡಿದು ಮೆರವಣಿಗೆ ಮಾಡ್ತಾರೆ.
ಇದೇ ವಿಡಿಯೋವನ್ನ ಬಳಸಿ ಶಿವನ ವಿಗ್ರಹ ಕಾಯುತ್ತಿದ್ದ ಹಾವುಗಳಿವು ಎಂದು ಹೇಳಿರಬಹುದು. ಆದ್ರೆ ಶಿವನ ಚಿನ್ನದ ವಿಗ್ರಹ ನಿಜವಾಗಿಯೂ ಪತ್ತೆಯಾಗಿದ್ಯಾ ಅಥವಾ ಈ ಫೋಟೋ ಹಿಂದೆ ಬೇರೆಯದ್ದೇ ಕಥೆಯಿದ್ಯಾ? ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿ ಇಲ್ಲ.
https://www.youtube.com/watch?v=tLrjOcqeNo4
https://www.youtube.com/watch?v=BUCuaMs4Vqs