ವಿಜಯಪುರ: ಸರ್ಕಾರಿ ಆಸ್ಪತ್ರೆ ಅಂದ್ರೆ ಸಾಕು ಜನಾ ಮೂಗು ಮುರಿಯುತ್ತಾರೆ. ಅಂತಹದರಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಜನ್ರು ಛೀ.. ಥೂ.. ಎನ್ನುವಂತಹ ಕೆಲಸ ನಡೆಯುತ್ತಿದೆ.
ನಗರದ ಜಿಲ್ಲಾ ಆಸ್ಪತ್ರೆ ಹಿಂಭಾಗದಲ್ಲಿರುವ ಶವಾಗಾರದ ಎದುರು ದಿನನಿತ್ಯ ಮಾಂಸದ ತುಂಡುಗಳು ಬೀಳುತ್ತಿವೆ. ಪ್ರತಿದಿನ ನಡೆಯುವ ಶಸ್ತ್ರಚಿಕಿತ್ಸೆಯಲ್ಲಿ ತೆಗೆಯುವ ದೇಹದ ಅಂಶಗಳೋ ಅಥವಾ ಸತ್ತ ವ್ಯಕ್ತಿಯ ಶವಪರೀಕ್ಷೆ ವೇಳೆ ಕತ್ತರಿಸಿದ ಮಾಂಸದ ತುಂಡುಗಳೋ ಗೊತ್ತಿಲ್ಲ. ಆದರೆ ಅವುಗಳನ್ನು ನಿಯಮಬದ್ಧವಾಗಿ ಆಸ್ಪತ್ರೆ ನಿರ್ವಹಣೆ ಮಾಡಬೇಕಿದೆ. ಆದ್ರೆ ಎಲ್ಲ ನಿಯಮವನ್ನು ಗಾಳಿಗೆ ತೂರಿ ಇಲ್ಲಿನ ಆಸ್ಪತ್ರೆಯ ಶವಾಗಾರದ ಮುಂದೆ ದೇಹದ ತುಣುಕುಗಳನ್ನು ಎಸೆಯಲಾಗುತ್ತಿದೆ.
ಮಾಂಸದ ತುಂಡನ್ನು ತಿನ್ನಲು ಹಂದಿ, ನಾಯಿಗಳು ಮುಗಿ ಬೀಳುತ್ತಿವೆ. ಶವಪರೀಕ್ಷೆ ಕಾನೂನಿನ ನಿಯಮದಂತೆ ನಡೆಸಬೇಕು. ಅಲ್ಲದೆ ಎಲ್ಲೆಂದರಲ್ಲಿ ಹೀಗೆ ಸತ್ತ ವ್ಯಕ್ತಿಗಳ ದೇಹದ ಭಾಗವನ್ನು ಎಸೆಯಬಾರದು. ಆದರೂ ಸಹ ಅದು ಹೇಗೆ ಇಲ್ಲಿನ ಸಿಬ್ಬಂದಿ ಇಷ್ಟೊಂದು ಬೇಜವಾಬ್ದಾರಿಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ ಎನ್ನುವುದೆ ಎಲ್ಲರಿಗೂ ಯಕ್ಷಪ್ರಶ್ನೆಯಾಗಿದೆ. ಈ ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಸಿಬ್ಬಂದಿಯ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.