ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗ ಎಂದ ಕ್ಷಣ ವೀರವನಿತೆ ಒನಕೆ ಓಬವ್ವಳ ಸಾಹಸ ಕಣ್ಮುಂದೆ ಬರುತ್ತೆ. ಆಕೆ ಹೈದರಾಲಿ ಸೈನಿಕರ ವಿರುದ್ಧ ಒನಕೆ ಹಿಡಿದು ವೀರಾವೇಶದಿಂದ ಹೋರಾಡಿ ಕೋಟೆಯನ್ನು ರಕ್ಷಿಸಿದ ಸಾಹಸವನ್ನು ದುರ್ಗದ ಜನರು ಎಂದಿಗೂ ಮರೆಯಲು ಸಾಧ್ಯವಿಲ್ಲ. ಆದರೆ ಚಿತ್ರದುರ್ಗ ಜಿಲ್ಲಾಡಳಿತಕ್ಕೆ ಮಾತ್ರ ಆ ಓಬವ್ವಳ ನೆನಪೇ ಇಲ್ಲದಂತಾಗಿದೆ.
ರಾಜ್ಯ ಸರ್ಕಾರ ಪ್ರತಿಷ್ಠೆಯ ಪ್ರಶ್ನೆಯಾಗಿ ಟಿಪ್ಪು ಜಯಂತಿಯನ್ನು ಹಠ ಹಿಡಿದು ಮಾಡುತ್ತಿದೆ. ಆದರೆ ಅದೇ ಟಿಪ್ಪುವಿನ ತಂದೆ ಹೈದರಾಲಿಯ ಸೈನ್ಯವನ್ನು ದುರ್ಗಾದ ಏಳುಸುತ್ತಿನ ಕೋಟೆಯಿಂದ ಹಿಮ್ಮೆಟ್ಟಿಸಿದ ವೀರ ವನಿತೆ ಒನಕೆ ಓಬವ್ವಳನ್ನು ಮರೆತೇ ಬಿಟ್ಟಿದೆ. ಚಿತ್ರದುರ್ಗ ಜಿಲ್ಲಾಡಳಿತ 2012 ಮತ್ತು 2015ರಲ್ಲಿ ಒನಕೆ ಓಬವ್ವಳ ಜಯಂತಿ ಆಯೋಜಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ.
ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ಛಲವಾದಿ ಗುರುಪೀಠದ ಬಸವನಾಗಿದೇವ ಶರಣರು ಓಬವ್ವನ ವಿಗ್ರಹಕ್ಕೆ ಹೂಮಾಲೆ ಹಾಕಿ ಪೂಜೆ ಸಲ್ಲಿಸಿ ಸಾಂಕೇತಿಕವಾಗಿ ಒನಕ ಓಬವ್ವಳ ಸ್ಮರಣೆ ಮಾಡಿದರು. ಒನಕೆ ಓಬವ್ವ ಸ್ಮಾರಕ ಮತ್ತು ಜಯಂತಿ ಶೀಘ್ರದಲ್ಲೇ ಜಾರಿ ಮಾಡುವಂತೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ ಅವರನ್ನು ಕೇಳಿದರೆ ಈ ಬಗ್ಗೆ ಚರ್ಚಿಸಲು ಶೀಘ್ರದಲ್ಲಿ ಸಭೆ ಕರಿತೀವಿ. ಸ್ಮಾರಕ ನಿರ್ಮಾಣ ಜಯಂತಿ ಮಾಡಲು ಕ್ರಮ ಕೈಗೊಳ್ತೇವೆ ಎಂದು ಭರವಸೆ ನೀಡಿದ್ದಾರೆ.
ಜೀವದ ಹಂಗು ತೊರೆದು ಹೋರಾಡಿದ್ದ ಒನಕೆ ಓಬವ್ವಳನ್ನು ಸ್ಮರಿಸಬೇಕಾಗಿರುವುದು ಸರ್ಕಾರದ ಕರ್ತವ್ಯ. ಇನ್ನಾದರು ಸರ್ಕಾರ ಈ ಕಡೆ ಗಮನ ಹರಸಲಿ ಎನ್ನುವುದು ಕೋಟೆ ನಾಡಿನ ಜನರ ಆಗ್ರಹವಾಗಿದೆ.