ಬೆಂಗಳೂರು: ಅತ್ಯಾಚಾರಿ ಆರೋಪಿ ಪ್ರಜ್ವಲ್ ರೇವಣ್ಣಗೆ (Prajwal Revanna) ಇಂದು ಮೆಡಿಕಲ್ ಟೆಸ್ಟ್ ನಡೆಸಲಾಯಿತು.
ಎಸ್‍ಐಟಿ ಅಧಿಕಾರಿಗಳು ಅಂಬುಲೆನ್ಸ್ ನಲ್ಲಿ ಮೆಡಿಕಲ್ ಟೆಸ್ಟ್ ಗೆ (Medical Test) ಕರೆದೊಯ್ದರು. ಬಳಿಕ ಬೌರಿಂಗ್ ಆಸ್ಪತ್ರೆಯಲ್ಲಿ ಜನರಲ್ ಚೆಕಪ್ ಜೊತೆಗೆ ವಿಶೇಷ ಮೆಡಿಕಲ್ ಟೆಸ್ಟ್ ಗೆ ಪ್ರಜ್ವಲ್ ರೇವಣ್ಣ ಅವರನ್ನು ಒಳಪಡಿಸಲಾಯಿತು.
ಕೋರ್ಟಿಗೆ ಸಬ್ಮಿಟ್ ಮಾಡಲು ಮೂರ್ನಾಲ್ಕು ರೀತಿಯ ಟೆಸ್ಟ್ ಗಳಿಗೆ ಪೊಲೀಸರು ರಿಕ್ವೆಸ್ಟ್ ಮಾಡಿದ್ದರು. ಪೊಲೀಸರು ರಿಕ್ವೆಸ್ಟ್ ಕೊಟ್ಟಿರುವ ಟೆಸ್ಟ್ ಗಳನ್ನು ವೈದ್ಯರು ಮಾಡಿದ್ದಾರೆ. ಮೆಡಿಕಲ್ ಕಾಲೇಜಿನ ಡೀನ್, ಸೂಪರಿಂಡೆಂಟ್ ಸಮ್ಮುಖದಲ್ಲಿ ಈ ಟೆಸ್ಟ್ ನಡೆಸಲಾಯಿತು.
ಇದೇ ವೇಳೆ ಅತ್ಯಾಚಾರಕ್ಕೆ ಸಂಬಂಧಿಸಿದ ಟೆಸ್ಟ್ ಬಗ್ಗೆಯೂ ಪೊಲೀಸರು ಮನವಿ ಮಾಡಿಕೊಂಡರು. ಹೀಗಾಗಿ ಪೊಲೀಸರ ಮನವಿ ಮೇರೆಗೆ ವೈದ್ಯರು ಕೆಲವು ಸ್ಯಾಂಪಲ್‍ಗಳನ್ನು ಸಂಗ್ರಹಿಸಿದ್ದಾರೆ. ಈ ಮೂಲಕ ಸ್ಥಳ ಮಹಜರಿಗೂ ಮುನ್ನ ವಿವಿಧ ಟೆಸ್ಟ್ ಗಳನ್ನ ಮಾಡಿ ಸಾಕ್ಷ್ಯ ಸಂಗ್ರಹಿಸಲು ಎಸ್‍ಐಟಿ ಮುಂದಾಗಿದೆ.
ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ವೈದ್ಯರು, ಕೋರ್ಟ್‍ಗೆ ನೀಡಬೇಕಾಗಿರುವ ಮೂರ್ನಾಲ್ಕು ರೀತಿಯ ಟೆಸ್ಟ್‍ಗಳನ್ನು ಮಾಡಿದ್ದೇವೆ. ಈ ಟೆಸ್ಟ್ ನ ರಿಪೋರ್ಟ್‍ಗಳನ್ನು ಎಸ್‍ಐಟಿ ಅಧಿಕಾರಿಗಳಿಗೆ ಕೊಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.