ಬೆಂಗಳೂರು: ಪೆನ್‍ಡ್ರೈವ್ ಪ್ರಕರಣ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣಗೆ (Prajwal Revanna) ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಎಫ್‍ಐಆರ್ ಮಾಡಲು ಎಸ್‍ಐಟಿ ಅಧಿಕಾರಿಗಳು ಸಜ್ಜಾಗಿದ್ದಾರೆ.
ಸಂತ್ರಸ್ತೆಯೊಬ್ಬರ ಹೇಳಿಕೆ ಆಧರಿಸಿ ಮತ್ತೊಂದು ಎಫ್‍ಐಆರ್ ಗೆ ಸಿದ್ಧತೆ ನಡೆಸುತ್ತಿದ್ದಾರೆ. ಅತ್ಯಾಚಾರ ಪ್ರಕರಣ ದಾಖಲು ಮಾಡಲು ವಿಶೇಷ ತನಿಖಾ ತಂಡ SIT) ಅಧಿಕಾರಿಗಳು ತಯಾರಿ ನಡೆಸುತ್ತಿದ್ದಾರೆ. ಈಗಾಗಲೇ ಪ್ರಜ್ವಲ್ ರೇವಣ್ಣ ವಿರುದ್ಧ ಎರಡು ಅತ್ಯಾಚಾರ ಪ್ರಕರಣಗಳು ದಾಖಲಾಗಿದೆ. ಒಂದು ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಇದೀಗ ಮತ್ತೊಂದು ಅತ್ಯಾಚಾರ ಪ್ರಕರಣ ದಾಖಲಿಸಲು ತಯಾರಿ ನಡೆಸುತ್ತಿದ್ದು, ಇಂದು ಸಂಜೆ ಮತ್ತೊಂದು ಎಫ್‍ಐಆರ್ ಆಗೋ ಸಾಧ್ಯತೆ ಇದೆ.
ಮೇ 8 ರಂದು ಪ್ರಜ್ವಲ್ ರೇವಣ್ಣ ವಿರುದ್ಧ ಮೂರನೇ ಎಫ್‍ಐಆರ್ ದಾಖಲಿಸಲು ಮುಂದಾಗಿದ್ದಾರೆ. ಮೂರನೇ ಎಫ್‍ಐಆರ್ ನಲ್ಲಿ ಒಂದಕ್ಕಿಂತ ಒಂದು ಕಠಿಣ ಸೆಕ್ಷನ್ ಗಳ ಅಡಿಯಲ್ಲಿ ದಾಖಲಿಸಲಾಗುತ್ತದೆ. ಐಪಿಸಿ ಸೆಕ್ಷನ್ 376(2)(ಎನ್) (ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ), 376(2)(ಕೆ) (ಮಹಿಳೆ ಮೇಲೆ ಪದೇ ಪದೇ ಅತ್ಯಚಾರ), 354(ಎ) (ಲೈಂಗಿಕ ಅನುಕೂಲಕ್ಕಾಗಿ ಬೇಡಿಕೆ), 354(ಬಿ) (ಬಟ್ಟೆ ಹಿಡಿದು ಎಳೆದಾಡಿದ ಆರೋಪ), 354(ಸಿ) (ಖಾಸಗಿ ಚಿತ್ರಗಳನ್ನ ಸೆರೆ ಹಿಡಿದು ವೀಕ್ಷಣೆ ಮಾಡುವುದು, ಆಕೆಯ ಒಪ್ಪಿಗೆ ಇಲ್ಲದೆ ಪ್ರಸಾರ ಮಾಡುವುದು), 506 (ಬೆದರಿಕೆ ಹಾಕುವುದು), ಹೀಗೆ ಮೂರನೇ ಎಫ್‍ಐಆರ್ ನಲ್ಲಿ ಕಠಿಣ ಸೆಕ್ಷನ್ ಗಳನ್ನ ಎಸ್‍ಐಟಿ ಹಾಕಿದೆ.