– ಶಿಕ್ಷಕ ಬಿ.ಕೊಟ್ರೇಶ್ ವಿನೂತನ ಪ್ರಯೋಗಕ್ಕೆ ರಾಷ್ಟ್ರೀಯ ಪ್ರಶಸ್ತಿ ಗರಿ
ರಾಯಚೂರು: ಸರ್ಕಾರಿ ಶಾಲೆಗಳು ಅಂದ್ರೆ ಮೂಗುಮುರಿಯುವವರೇ ಹೆಚ್ಚು. ಆದರೆ ರಾಯಚೂರಿನ ಸಿಂಧನೂರು ತಾಲೂಕಿನ ಬೆಳಗುರ್ಕಿ ಗ್ರಾಮದ ವಿದ್ಯಾರ್ಥಿಗಳು ಒಂದು ಹೆಜ್ಜೆ ಮುಂದೇ ಹೋಗಿ ಯಾವ ಖಾಸಗಿ ಶಾಲೆಯ ಮಕ್ಕಳು ಮಾಡದ ಕೆಲಸವನ್ನ ಮಾಡುತ್ತಿದ್ದಾರೆ. ಪೆನ್ಸಿಲ್ ಅನ್ನೋ ಶಾಲಾ ಪತ್ರಿಕೆಯನ್ನು ಹೊರತಂದು ಗ್ರಾಮಸ್ಥರು ಓದುವಂತೆ ಮಾಡಿದ್ದಾರೆ. ಶಾಲೆಯ ಶಿಕ್ಷಕ ಬಿ.ಕೊಟ್ರೇಶ್ ನೇತೃತ್ವದಲ್ಲಿ ಹೊಸ ಪ್ರಯತ್ನಕ್ಕೆ ಮುಂದಾದ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕರು ಪೆನ್ಸಿಲ್ ದ್ವೈಮಾಸ ಪತ್ರಿಕೆಯನ್ನ ಹೊರತರುತ್ತಿದ್ದಾರೆ.
Advertisement
ವಿದ್ಯಾರ್ಥಿಗಳಿಗೆ ಮೀಸಲಾಗಿರುವ ಈ ಪತ್ರಿಕೆಯಲ್ಲಿ ಶೈಕ್ಷಣಿಕ ವಿಚಾರಗಳ ಬಗ್ಗೆ ಶಿಕ್ಷಕರ ಒಂದೆರಡು ಲೇಖನಗಳು ಬರೆದ್ರೆ, ಉಳಿದೆಲ್ಲಾ ಸುದ್ದಿ, ಲೇಖನಗಳನ್ನ ಮಕ್ಕಳೆ ಬರೆಯುತ್ತಾರೆ. ಗ್ರಾಮದ ಸಮಸ್ಯೆಗಳು, ವಿಶೇಷತೆಗಳು, ಸಂದರ್ಶನಗಳು ಸೇರಿ ವಿವಿಧ ಲೇಖನಗಳನ್ನ ಮಕ್ಕಳಿಂದಲೇ ಬರೆಸುತ್ತಾರೆ. ಮಕ್ಕಳ ಈ ಪೆನ್ಸಿಲ್ ಪತ್ರಿಕೆ ವರದಿಗಳಿಂದ ಸ್ಥಳೀಯ ಜನಪ್ರತಿನಿಧಿಗಳು ಎಚ್ಚೆತ್ತು ಕೆಲಸ ಮಾಡಿದ್ದು ಇದೆ. ವಿದ್ಯಾರ್ಥಿಗಳ ಬುದ್ದಿ ಶಕ್ತಿ ಹೆಚ್ವಿಸುವ ನಿಟ್ಟಿನಲ್ಲಿ ವಿನೂತನ ಪ್ರಯೋಗಕ್ಕೆ ಕೈಹಾಕಿದ ಶಿಕ್ಷಕರು ಯಶಸ್ವಿಯಾಗಿ ಪತ್ರಿಕೆಯನ್ನು ಮುಂದುವರಿಸುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಪತ್ರಿಕೆಯನ್ನ ಹೊರತರಲಾಗುತ್ತಿದ್ದು, ಮೊದಲೆಲ್ಲಾ ಮುದ್ರಣ ವೆಚ್ಚವನ್ನ ಶಿಕ್ಷಕರೇ ಬರಿಸುತ್ತಿದ್ದರು. ಈಗ ಗ್ರಾಮಸ್ಥರು ಸಹಾಯಕ್ಕೆ ಮುಂದಾಗಿದ್ದಾರೆ. ಪಾಠದ ಜೊತೆ ಮಕ್ಕಳಲ್ಲಿ ಪತ್ರಿಕೆಯ ಮೂಲಕ ಸೃಜನಾತ್ಮಕತೆ ಬೆಳೆಸಲು ಶಿಕ್ಷಕರು ಪ್ರಯತ್ನ ನಡೆಸಿದ್ದಾರೆ.
Advertisement
ಒಟ್ಟು 310 ವಿದ್ಯಾರ್ಥಿಗಳಿರುವ ಶಾಲೆಯಲ್ಲಿ ಎಂಟು ಜನ ಶಿಕ್ಷಕರಿದ್ದಾರೆ. ಕೇವಲ ಪಠ್ಯ ಶಿಕ್ಷಣಕ್ಕೆ ಗಂಟು ಬೀಳದೆ ಹೊಸ ಹೊಸ ಪ್ರಯೋಗಕ್ಕೆ ಮುಂದಾಗುತ್ತಿರುವುದಕ್ಕೆ ಮಕ್ಕಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಶಿಕ್ಷಕ ಬಿ.ಕೊಟ್ರೇಶ್ ಎಲ್ಲಾ ಶಿಕ್ಷಕರು ಹಾಗೂ ಗ್ರಾಮಸ್ಥರ ಸಹಾಯ ಪಡೆದು ಶಾಲೆಯ ವಾತಾವರಣವನ್ನೇ ಬದಲಿಸಿದ್ದಾರೆ. ಶಾಲೆ ಬಿಟ್ಟ ಮಕ್ಕಳನ್ನ ಶಾಲೆಗೆ ಕರೆತರಲು ನಾನಾ ಯೋಜನೆಗಳನ್ನ ಜಾರಿಗೆ ತರುವ ಸರ್ಕಾರ ಇಂತಹ ಉತ್ಸಾಹಿ ಶಿಕ್ಷಕರ ಯಶಸ್ವಿ ಪ್ರಯೋಗಗಳಿಗೆ ಮನ್ನಣೆ ಕೊಡಬೇಕಿದೆ.
Advertisement
Advertisement
ಗುಜರಾತಿನ ಬರೋಡಾದ ಮಹಾರಾಜ್ ಸಯ್ಯಾಜಿರಾವ್ ವಿವಿ ಕೊಡಮಾಡುವ ಯೂತ್ ಐಕಾನ್ ಯುಗಾಂತರ -2020 ರಾಷ್ಟಮಟ್ಟದ ಪ್ರಶಸ್ತಿಗೆ ಶಿಕ್ಷಕ ಕೊಟ್ರೇಶ್ ಆಯ್ಕೆಯಾಗಿದ್ದಾರೆ. ಪೆನ್ಸಿಲ್ ಪತ್ರಿಕೆಯ ಮೂಲಕ ಗ್ರಾಮದಲ್ಲಾದ ಬದಲಾವಣೆ ಹಾಗೂ ಮಕ್ಕಳ ಪತ್ರಿಕೆಯಿಂದ ಗ್ರಾಮಸ್ಥರ ಮೇಲಾದ ಪ್ರಭಾವ ಹಿನ್ನೆಲೆ ಶಿಕ್ಷಕ ಕೊಟ್ರೇಶ್ ರನ್ನ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.