– ಮಂತ್ರ ಪಠಿಸಿ, ಮುದ್ರೆ ಒತ್ತಿದ ಪೇಜಾವರ ಶ್ರೀ
ಉಡುಪಿ: ಉಡುಪಿ ಶ್ರೀಕೃಷ್ಣ ಮಠದಲ್ಲಿ ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಗೆ ವೈಷ್ಣವ ದೀಕ್ಷೆ ನೀಡಲಾಗಿದೆ. ಪರ್ಯಾಯ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಅವರು ಈ ದೀಕ್ಷೆಯನ್ನು ನೀಡಿದ್ದು ವೈಷ್ಣವತ್ವಕ್ಕೆ ಆದರದಿಂದ ಬರಮಾಡಿಕೊಂಡರು.
Advertisement
ಉಡುಪಿಯ ಪಡುಬಿದ್ರೆ ಮೂಲದ ಪಾಂಡು ಎಂಬವರು ದೀಕ್ಷೆ ನೀಡಬೇಕೆಂದು 3-4 ಬಾರಿ ಸ್ವಾಮೀಜಿ ಅವರನ್ನು ಭೇಟಿಯಾಗಿ ತಮ್ಮ ಮನದ ಇಚ್ಛೆಯನ್ನು ಹೇಳಿಕೊಂಡಿದ್ದರು. ಆದ್ರೆ ಸ್ವಾಮೀಜಿ ಅವರು ದೀಕ್ಷೆ ನೀಡುವ ಕಾರ್ಯವನ್ನು ಕೆಲ ತಿಂಗಳ ಕಾಲ ಮುಂದೆ ಹಾಕುತ್ತಾ ಬಂದಿದ್ದರು. ಇದೀಗ ದೀಕ್ಷೆ ಪಡೆಯಲು ಪಾಂಡು ಪರಿಪೂರ್ಣವಾಗಿ ಪಕ್ವವಾಗಿದ್ದಾರೆ ಎಂದು ತಿಳಿದ ಮೇಲೆ ಸ್ವಾಮೀಜಿ ಅವರು ವೈಷ್ಣವ ದೀಕ್ಷೆಯನ್ನು ಧಾರೆಯೆರೆದಿದ್ದಾರೆ.
Advertisement
ಕೃಷ್ಣ ಮಠದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ದೀಕ್ಷಾ ಮಂತ್ರಗಳನ್ನು ಪಠಿಸಿ, ಹೋಮ ನಡೆಸಿ, ಶಂಖ ಮತ್ತು ಚಕ್ರವನ್ನು ಯಜ್ಞದಲ್ಲಿ ಬಿಸಿ ಮಾಡಿ ಪಾಂಡು ಅವರ ತೋಳುಗಳ ಮೇಲೆ ಮುದ್ರೆ ಹಾಕಲಾಯ್ತು. ಮುದ್ರೆ ಹಾಕಿದ ನಂತರ ಕೆಲ ಧಾರ್ಮಿಕ ವಿಧಿ-ವಿಧಾನಗಳನ್ನು ಸ್ವಾಮೀಜಿ ಬೋಧಿಸಿದರು. ನಂತರ ನವಗ್ರಹ ಕಿಂಡಿಯ ಮೂಲಕ ಪಾಂಡು ಅವರು ಶ್ರೀಕೃಷ್ಣನ ದರ್ಶನ ಮಾಡಿದರು.
Advertisement
Advertisement
ಈ ಸಂದರ್ಭ ಮಾಧ್ಯಮಗಳ ಜೊತೆ ಮಾತನಾಡಿದ ವಿಶ್ವೇಶತೀರ್ಥ ಸ್ವಾಮೀಜಿ, ದಲಿತ ಸಮಾಜಕ್ಕೆ ಸೇರಿದ ವ್ಯಕ್ತಿಗೆ ಅವರ ಅಪೇಕ್ಷೆಯಂತೆ ವೈಷ್ಣವ ದೀಕ್ಷೆ ನೀಡಿದ್ದೇನೆ. ಹಿಂದುಳಿದವರು, ದಲಿತರು ಸಮಾಜದಲ್ಲಿ ಯಾರು ಅಪೇಕ್ಷೆ ಪಟ್ಟು ಬಂದರೂ ವೈಷ್ಣವ ದೀಕ್ಷೆ, ಭಕ್ತಿ ದೀಕ್ಷೆಯನ್ನು ಕೊಡುತ್ತೇನೆ. ಮಂತ್ರ ಜಪವನ್ನು ಬೋಧನೆ ಮಾಡಿ ಶಂಖ- ಚಕ್ರದ ಮುದ್ರೆಯನ್ನು ಇಟ್ಟು ದೀಕ್ಷೆ ನೀಡಿದ್ದೇನೆ. ಮುಂದೆ ಅವರು ವೈಷ್ಣವರಂತೆ ವಿಷ್ಣುವಿನ ಹಾಗೂ ಶ್ರೀಕೃಷ್ಣನ ಅನುಯಾಯಿಯಾಗುತ್ತಾರೆ ಎಂದು ಹೇಳಿದರು.
ಮಧ್ವಾಚಾರ್ಯರು ಹೇಳಿದಂತೆ ಈ ದೀಕ್ಷೆ ಪಡೆದವರು ಬ್ರಾಹ್ಮಣರಿಗೆ ಸಮಾನ. ದೀಕ್ಷೆ ಪಡೆದವರನ್ನು ಸಮಾಜದಲ್ಲಿ ಯಾರನ್ನೂ ಕೀಳಾಗಿ ನೋಡಬಾರದು. ವೈಷ್ಣವ ದೀಕ್ಷೆ ಪಡೆದವರಿಗೆ ಸಮಾಜದಲ್ಲಿ ಗೌರವ ಹೆಚ್ಚುತ್ತದೆ ಎಂದು ಹೇಳಿದರು.
ಅಸ್ಪøಶ್ಯತೆ ನಿವಾರಣೆಗೆ ವೈಷ್ಣವ ದೀಕ್ಷೆಯೂ ಒಂದು ಮಾರ್ಗ. ಸಮಾಜದಲ್ಲಿನ ಮೇಲು ಕೀಳೆಂಬ ಅಸಮಾನತೆ ಇದರಿಂದ ಹೋಗಲಾಡಿಸಬಹುದು. ಬಯಸಿ ಬಂದ್ರೆ ಹಾಗೂ ಅಪೇಕ್ಷೆ ಪಟ್ಟರೆ ಮುಂದೆಯೂ ನಾನು ದೀಕ್ಷೆ ನೀಡಲು ಸಿದ್ಧ ಎಂದು ಹೇಳಿದರು.