Connect with us

Districts

ಅಷ್ಟ ಮಠದ ಹಿರಿಯ ಯತಿ, ನಾಡಿನ ಹಿರಿಯ ವಿದ್ವಾಂಸ ಪೇಜಾವರ ಶ್ರೀ ಕೃಷ್ಣೈಕ್ಯ

Published

on

ಉಡುಪಿ: ಅಷ್ಟ ಮಠದ ಹಿರಿಯ ಯತಿ, ನಾಡಿನ ಹಿರಿಯ ವಿದ್ವಾಂಸ, ಅಸ್ಪೃಶ್ಯತೆ ವಿರುದ್ಧ ಹೋರಾಡಿದ್ದ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ(88) ವಿಧಿವಶರಾಗಿದ್ದಾರೆ.

ಶ್ರೀಗಳ ಕೊನೆಯ ಆಸೆಯಂತೆ ಅವರನ್ನು ಇಂದು ವೆಂಟಿಲೇಟರ್ ಸಹಿತ ಅಂಬುಲೆನ್ಸ್ ಮೂಲಕ ಪೇಜಾವರ ಮಠದ ಆವರಣದಲ್ಲಿರುವ ಅಧೋಕ್ಷಜ ಮಠಕ್ಕೆ ಆಸ್ಪತ್ರೆಯಿಂದ ಶಿಫ್ಟ್ ಮಾಡಲಾಗಿತ್ತು. ಅಲ್ಲಿ ಅವರಿಗೆ 6 ಮಂದಿ ವೈದ್ಯರ ತಂಡ ಚಿಕಿತ್ಸೆ ನೀಡುತ್ತಿತ್ತು. ಆದರೆ ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮಠದಲ್ಲಿಯೇ ಶ್ರೀಗಳು ಕೃಷ್ಣೈಕ್ಯರಾದರು.

ರಕ್ತದೊತ್ತಡ, ಮಧುಮೇಹ, ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಶ್ರೀಗಳು ಕಳೆದ ಶುಕ್ರವಾರ ಬೆಳಗಿನ ಜಾವ 5 ಗಂಟೆಗೆ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ 9 ದಿನಗಳಿಂದ ಐಸಿಯುನಲ್ಲೇ ಚಿಕಿತ್ಸೆ ನೀಡಲಾಗುತಿತ್ತು.

ವಿಶ್ವೇಶತೀರ್ಥ ಸ್ವಾಮೀಜಿಯ ಆರೋಗ್ಯ ಗುರುವಾರದಿಂದಂದ ಹೆಚ್ಚೇನೂ ಸುಧಾರಣೆಯಾಗಿರಲಿಲ್ಲ. ಆರೋಗ್ಯ ಸ್ಥಿತಿ ಗಂಭೀರ ಸ್ಥಿತಿಯಲ್ಲಿದೆ ಎಂದು ಕೆಎಂಸಿ ವೈದ್ಯರು ತಿಳಿಸಿದ್ದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀಗಳನ್ನು ಭೇಟಿ ಮಾಡಲು ಬರುವುದು ಬೇಡ ಎಂದು ಗಣ್ಯರಲ್ಲಿ ವೈದ್ಯರು ಮನವಿ ಮಾಡಿದ್ದರು. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯ ತಜ್ಞ ವೈದ್ಯರಿಬ್ಬರು ಮಣಿಪಾಲಕ್ಕೆ ಆಗಮಿಸಿ ಸಲಹೆ ನೀಡುತ್ತಿದ್ದರು. ಮಣಿಪಾಲದ ತಜ್ಞ ವೈದ್ಯರ ತಂಡವು ದಿಲ್ಲಿಯ ಏಮ್ಸ್ ತಜ್ಞರ ಸಂಪರ್ಕದಲ್ಲಿದ್ದರೂ ಶುಕ್ರವಾರದಿಂದ ದೇಹ ಚೇತರಿಕೆ ಹಾಗೂ ಚಿಕಿತ್ಸೆಗೆ ಸ್ಪಂದನೆ ನೀಡುತ್ತಿರಲಿಲ್ಲ.

ಪೇಜಾವರ ಶ್ರೀಗಳು ಜ್ವರವಿದ್ದರೂ ಡಿ.19ರ ಗುರುವಾರ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಪುತ್ತೂರಿನ ರಾಮಕುಂಜ, ಉಡುಪಿ ಸಮೀಪದ ಪಾಜಕದಲ್ಲಿರುವ ಆನಂದತೀರ್ಥ ವಿದ್ಯಾಲಯದ ವಾರ್ಷಿಕೋತ್ಸವದಲ್ಲಿ ಭಾಗವಹಿಸಿದ್ದರು. ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಡಿ.22ರ ತನಕ ಪ್ರತಿದಿನ ಸಂಜೆ 5.30ಕ್ಕೆ ಪೇಜಾವರ ಶ್ರೀಗಳಿಂದ ಮಹಾಭಾರತದ ಉಪಾಖ್ಯಾನಗಳು ವಿಷಯವಾಗಿ ಉಪನ್ಯಾಸ ಕಾರ್ಯಕ್ರಮ ನಿಗದಿಯಾಗಿತ್ತು. ಹೀಗಾಗಿ ಗುರುವಾರ ಉಪನ್ಯಾಸ ನೀಡಿದ್ದರು.

ಆದರೆ ಜ್ವರ ಕಡಿಮೆಯಾಗದ ಹಿನ್ನೆಲೆಯಲ್ಲಿ ಉಡುಪಿಯ ಖಾಸಗಿ ಆಸ್ಪತ್ರೆಗೆ ತೆರಳಿದ್ದು, ಶುಕ್ರವಾರ ಬೆಳಗ್ಗೆ ಮಣಿಪಾಲ ಕೆಎಂಸಿಯ ತೀವ್ರ ನಿಗಾ ಘಟಕಕ್ಕೆ(ಐಸಿಯು) ದಾಖಲಾಗಿದ್ದರು. 15, 16ನೇ ಶತಮಾನದಲ್ಲಿಸೋದೆ ಶ್ರೀವಾದಿರಾಜತೀರ್ಥ ಶ್ರೀಪಾದರು ನಾಲ್ಕು ಪರ್ಯಾಯ ಪೂರೈಸಿ, ಐದನೇ ಪರ್ಯಾಯವನ್ನು ಶಿರಸಿಯ ಸೋಂದಾದಲ್ಲಿ ನಡೆಸಿದ್ದರೆ, 89ರ ಹರೆಯದ ಪೇಜಾವರ ಶ್ರೀಪಾದರು ಶ್ರೀಕೃಷ್ಣನ ಪೂಜೆಯ ದ್ವೈವಾರ್ಷಿಕ ಪರ್ಯಾಯವನ್ನು ಐದು ಬಾರಿ ಪೂರೈಸಿದ ಏಕೈಕ ಯತಿಯಾಗಿದ್ದಾರೆ.

ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆರೋಗ್ಯವನ್ನು ಪ್ರಧಾನಿ ಮೋದಿ ವಿಚಾರಿಸಿ ಶೀಘ್ರ ಗುಣಮುಖರಾಗಲೆಂದು ಹಾರೈಸಿದ್ದರು. ಪೇಜಾವರ ಶ್ರೀಗಳ ಆಪ್ತ ಕಾರ್ಯದರ್ಶಿ ಟಿ.ಪಿ. ಅನಂತ್ ಅವರಿಗೆ ದೂರವಾಣಿ ಕರೆ ಮಾಡಿ ಪೇಜಾವರ ಶ್ರೀಗಳ ಆರೋಗ್ಯದ ಸ್ಥಿತಿಗತಿಯ ವಿವರ ಕೇಳಿದ್ದರು.

Click to comment

Leave a Reply

Your email address will not be published. Required fields are marked *