ಉಡುಪಿ: ರಾಮಮಂದಿರ ವಿಚಾರದಲ್ಲಿ ಸಂಧಾನಕ್ಕೆ ಸೂಚಿಸಿರುವ ಸುಪ್ರೀಂ ಕೋರ್ಟ್ ಆದೇಶವನ್ನು ಪೇಜಾವರ ಸ್ವಾಮೀಜಿ ಸ್ವಾಗತಿಸಿದ್ದಾರೆ. ಈ ಬಗ್ಗೆ ತಮ್ಮ ಅಭಿಪ್ರಾಯವನ್ನು ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಂಧಾನ ವಿಚಾರದಲ್ಲಿ ನನಗೆ ನನಗೆ ಎರಡು ಅಭಿಪ್ರಾಯಗಳಿದ್ದು, ದೇವರು ಇದ್ದಾನೋ ಇಲ್ಲವೋ ಎಂಬ ಬಗ್ಗೆ ಸಂಧಾನ ಬೇಕಾಗಿಲ್ಲ ಎಂಬುವುದು ನನ್ನ ಅಭಿಪ್ರಾಯ. ರಾಮಮಂದಿರ ಅಯೋಧ್ಯೆಯಲ್ಲಿ ಇದ್ದದ್ದು ದೇವರಿದ್ದಷ್ಟೇ ನಿಶ್ಚಿತ. ಈ ನಿಶ್ಚಿತವಾಗಿರುವುದರ ಬಗ್ಗೆ ಮತ್ತೆ ಸಂಧಾನ ಏತಕ್ಕೆ? ಆದರೂ ಸುಪ್ರೀಂ ಕೋರ್ಟ್ ಸಂಧಾನಕ್ಕೆ ಸೂಚಿಸಿದೆ. ಸಂಧಾನ ಸಂಘರ್ಷವಿಲ್ಲದೆ ಯಶಸ್ವಿಯಾಗಲಿ. ಮುಸಲ್ಮಾನರು ಮತ್ತು ಹಿಂದುಗಳಿಗೆ ಅಸಮಾಧಾನ ಆಗದಂತೆ ಸಂಧಾನವಾಗಲಿ ಎಂದರು.
ಒಂದೊಮ್ಮೆ ಸಂಧಾನದಲ್ಲಿ ಸಮಸ್ಯೆ ಬಗೆಹರಿಯದಿದ್ದರೆ ಕೋರ್ಟ್ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು. ಸಂಧಾನ ಎರಡೂ ಸಮುದಾಯಕ್ಕೆ ಸಮ್ಮತವಾಗಿರಬೇಕು. ಆದರೆ ಇಬ್ಬರಿಗೂ ಸಮ್ಮತವಾಗುವ ಸಂಧಾನ ಆಗುವ ಬಗ್ಗೆ ನನಗೆ ಸಂಶಯವಿದೆ. ಸಂಧಾನ ಆಗದಿದ್ದರೆ ನ್ಯಾಯದ ರೀತಿಯಲ್ಲಿ ಮಂದಿರ ನಿರ್ಮಾಣ ಆಗಲಿ ಎಂದರು.
ಸಂಧಾನ ಸಮಿತಿಯಲ್ಲಿರುವ ರವಿಶಂಕರ್ ಗುರೂಜಿ ಪ್ರಯತ್ನಕ್ಕೆ ಸಂಪೂರ್ಣ ಬೆಂಬಲವಿದೆ. ರವಿಶಂಕರ್ ಗುರೂಜಿಗೆ ಈಗ ಹೆಚ್ಚು ಬೆಲೆ ಬಂದಿದೆ. ರಾಮಮಂದಿರ ನಿರ್ಮಾಣ ವಿಳಂಬವಾಗಬಾರದು. ಈ ಹಿಂದೆ ವೈಯಕ್ತಿಕವಾಗಿ ರವಿಶಂಕರ್ ಗುರೂಜಿ ಅವರು ಪ್ರಯತ್ನ ನಡೆಸಿದ್ದರು. ಆದರೆ ಇದು ಅಧಿಕೃತವಾಗಿದೆ. ನ್ಯಾಯಾಲಯದ ಮೂಲಕ ಬಂದಿರುವುದರಿಂದ ಅವರಿಗೆ ಹೆಚ್ಚು ಬಲ ಬಂದಿದೆ. ಆದರೆ ಇದು ವಿಳಂಬ ಮಾಡುವುದು ಬೇಡ ಎಂದು ಕಿವಿ ಮಾತು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv