– ಸೂಕ್ತ ರಕ್ಷಣೆಗೆ ಕೋಲಾರ ಜನರ ಪಟ್ಟು
ಕೋಲಾರ: ನಮ್ಮ ರಾಷ್ಟ್ರಪಕ್ಷಿಯನ್ನ ಚಿತ್ರಗಳಲ್ಲಷ್ಟೆ ಕಾಣಬೇಕೆನ್ನುವಷ್ಟರ ಮಟ್ಟಿಗೆ ಅವುಗಳ ಸಂತತಿ ಕಡಿಮೆಯಾಗಿದೆ. ಆದ್ರೆ ಬಯಲು ಸೀಮೆಯಲ್ಲಿ ನೀರಿಲ್ಲದೆ ಬೆಳೆಗಳು ಒಣಗಿದ್ರೂ ರೈತರು ಪಕ್ಷಿಗಳನ್ನು ಉಳಿಸುತ್ತಿದ್ದಾರೆ. ಹಿಂಡು ಹಿಂಡಾಗಿ ಹಲವು ವರ್ಷಗಳಿಂದ ನೆಲೆ ನಿಂತಿರುವ ಪ್ರೀತಿಯ ಪಕ್ಷಿಗಳಿಗೆ ಸೂಕ್ತ ರಕ್ಷಣೆ ನೀಡಬೇಕು ಅನ್ನೋ ಒತ್ತಾಯ ಕೇಳಿಬರುತ್ತಿದೆ.
ಕೋಲಾರ, ಬಂಗಾರಪೇಟೆ, ಮಾಲೂರು ತಾಲೂಕಿನ ಹಲವು ಗ್ರಾಮಗಳಲ್ಲಿ ರಾಷ್ಟ್ರೀಯ ಪಕ್ಷಿಗಳು ಹಿಂಡು ಹಿಂಡಾಗಿ ಹುಳ-ಹುಪ್ಪಟೆಗಳನ್ನ ತಿನ್ನುತ್ತಾ, ಕಾಳು-ಕಡ್ಡಿಯನ್ನ ಆರಿಸುತ್ತಾ, ಓಡಾಡುತ್ತಾ ಹಲವು ವರ್ಷಗಳಿಂದ ನೂರಾರು ನವಿಲುಗಳು ಇಲ್ಲಿ ನೆಲೆ ನಿಂತಿವೆ. ಇದಕ್ಕೂ ಮೊದಲು ಈ ನವಿಲುಗಳು ಟೇಕಲ್ ಸುತ್ತ ಮುತ್ತಲ ಬೆಟ್ಟಗಳಲ್ಲಿ ವಾಸವಾಗಿದ್ದವು.
Advertisement
Advertisement
ಆದ್ರೆ ಇತ್ತೀಚೆಗೆ ಬೆಟ್ಟಗಳಲ್ಲಿ ಕಲ್ಲು ಗಣಿಗಾರಿಕೆ ಹೆಚ್ಚಾಗಿರುವುದರಿಂದ ಹೊಲ, ಗದ್ದೆ, ಪೊದೆಗಳಲ್ಲಿ ತಮ್ಮ ಬದುಕು ಸವೆಸುತ್ತಿವೆ. ಸದ್ಯ ಅವುಗಳಿಗೆ ಆಹಾರ ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇವುಗಳಿಗೆ ಅರಣ್ಯ ಇಲಾಖೆ ಪರ್ಯಾಯ ವ್ಯವಸ್ಥೆ ಮಾಡಬೇಕು ಅನ್ನೋದು ಗ್ರಾಮಸ್ಥರ ಒತ್ತಾಯಿಸುತ್ತಿದ್ದಾರೆ ಅಂತ ಪೊಲೀಸ್ ಇಲಾಖೆ ಉದ್ಯೋಗಿ ನಾರಾಯಣಸ್ವಾಮಿ ತಿಳಿಸಿದ್ದಾರೆ.
Advertisement
Advertisement
ದನ-ಕರುಗಳ ಜೊತೆಯಲ್ಲೇ ಕಾಲ ಕಳೆಯುವ ನವಿಲುಗಳು ಗ್ರಾಮದ ಜನರಿಗಂತೂ ತಮ್ಮ ಮನೆಯ ಪಕ್ಷಿ ಎನ್ನುವಂತಾಗಿದೆ. ಇವು ಎಲ್ಲಿ ಯಾರ ಹೊಲದಲ್ಲಿ ಹೋದ್ರು, ಯಾರೂ ಅವುಗಳಿಗೆ ತೊಂದರೆ ಮಾಡೋದಿಲ್ಲ. ಅವುಗಳ ರಕ್ಷಣೆಗೆ ಸದಾಕಾಲ ಸಿದ್ಧರಾಗಿರುತ್ತಾರೆ. ಹಾಗೊಮ್ಮ ಹೀಗೊಮ್ಮೆ ನವಿಲುಗಳನ್ನು ಬೇಟೆಯಾಡಲು ಬರುವ ಬೇಟೆಗಾರರಿಗೆ ಗ್ರಾಮಸ್ಥರು ಕಟ್ಟಿಹಾಕಿ ಗೂಸಾ ನೀಡಿ ಎಚ್ಚರಿಕೆ ಕೂಡ ನೀಡಿದ್ದಾರೆ. ಮಾತ್ರವಲ್ಲ ಇವನ್ನ ಬೇಟೆಯಾಡಲು ಬಂದವರನ್ನ ಪೊಲೀಸರಿಗೆ ಹಿಡಿದುಕೊಟ್ಟಿರುವ ಘಟನೆಗಳು ಕೂಡಾ ಇವೆ. ಹಾಗಾಗಿ ಇಲ್ಲಿ ನವಿಲುಗಳ ಬೇಟೆಗೆಂದು ಬರುವ ಬೇಟೆಗಾರರಿಗೆ ಅರಣ್ಯ ಇಲಾಖೆ ಹಾಗೂ ಪೊಲೀಸರಿಗಿಂತ ಗ್ರಾಮಸ್ಥರ ಭಯವೇ ಹೆಚ್ಚಾಗಿದೆ. ಬರ ಎದುರಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ಅರಣ್ಯ ಇಲಾಖೆ ಕೂಡ ಕಾಡು ಪ್ರಾಣಿಗಳಿಗಾಗಿ ನೀರಿನ ವ್ಯವಸ್ಥೆ ಹಾಗೂ ಆಹಾರದ ಪರ್ಯಾಯ ವ್ಯವಸ್ಥೆಗಳನ್ನ ಮಾಡುತ್ತಿದೆ ಅಂತ ಅರಣ್ಯಾಧಿಕಾರಿ ಚಕ್ರಪಾಣಿ ಹೇಳಿದ್ದಾರೆ.
ಒಟ್ಟಿನಲ್ಲಿ ರಾಷ್ಟ್ರಪಕ್ಷಿ ನವಿಲಿಗೆ ರಕ್ಷಣೆ ಇಲ್ಲದಂತಾಗಿ, ಅನಾಥವಾಗಿ ತುತ್ತು ಅನ್ನ-ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅವನತಿ ಅಂಚಿನಲ್ಲಿರುವ ನವಿಲುಗಳ ಸಂತತಿ ಉಳಿಸುವ ಜೊತೆಗೆ ಅವುಗಳ ರಕ್ಷಣೆಗೆ ಅರಣ್ಯ ಇಲಾಖೆ ಹಾಗೂ ಸರ್ಕಾರ ಕ್ರಮ ತೆಗೆದುಕೊಂಡು ನವಿಲುಗಳು ಗರಿಬಿಚ್ಚಿ ಕುಣಿಯುವಂತೆ ಮಾಡಬೇಕಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv