ಕರಾಚಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಬಯಸಿದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ಕಥೆ ಕೊನೆಗೊಳ್ಳಬಹುದು ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ರಮೀಝ್ ರಾಜಾ (Ramiz Raja) ಹೇಳಿದ್ದಾರೆ.
ಪಾಕಿಸ್ತಾನದ ಸೆನೆಟ್ ಸ್ಟ್ಯಾಂಡಿಂಗ್ ಸಮಿತಿಯ ಮುಂದೆ ಮಾತನಾಡಿದ ರಾಜಾ, ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ಒಟ್ಟು ಹಣದಲ್ಲಿ ಶೇಕಡ 90 ರಷ್ಟು ಬಿಸಿಸಿಐನಿಂದ ಬರುತ್ತದೆ ಎಂದು ಗಮನಸೆಳೆದರು.
ಪಿಸಿಬಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ICC) ಆರ್ಥಿಕ ನೆರವಿನಿಂದ ಬದುಕುತ್ತಿದೆ. ಆದರೆ ಐಸಿಸಿಯ ಶೇ.90ರಷ್ಟು ಆದಾಯವು ಭಾರತದಿಂದ ಬರುತ್ತದೆ. ಇದು ಭಯ ಹುಟ್ಟಿಸುವ ನೈಜ ಸಂಗತಿ ಎಂದು ರಾಜಾ ಹೇಳಿದರು. ಇದನ್ನೂ ಓದಿ: ಇಶನ್ ಕಿಶನ್, ಸೂರ್ಯಕುಮಾರ್ ಸ್ಫೋಟಕ ಆಟ – ಮುಂಬೈಗೆ 42 ರನ್ ಜಯ
ಐಸಿಸಿ ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯಂತೆ. ವಿಶ್ವ ಕ್ರಿಕೆಟನ್ನು ಭಾರತೀಯ ಉದ್ಯಮಿಗಳು ನಿಯಂತ್ರಿಸುತ್ತಾರೆ. ಭವಿಷ್ಯದಲ್ಲಿ ಪಾಕಿಸ್ತಾನಕ್ಕೆ (Pakistan) ಸಹಾಯ ಮಾಡಬೇಡಿ ಎಂದು ಭಾರತದ ಪ್ರಧಾನಿ ಹೇಳಿದರೆ ನಾವು ಏನು ಮಾಡೋಣ ಎಂದು ಪ್ರಶ್ನಿಸಿದರು. ಐಸಿಸಿಯ ಮೇಲೆ ಹೆಚ್ಚು ಅವಲಂಬಿಸದೆ ಪಿಸಿಬಿ ತನ್ನದೇ ಆದ ಆದಾಯವನ್ನು ಗಳಿಸಲು ಹೊಸ ಮಾರ್ಗಗಳನ್ನು ಹುಡುಕಬೇಕು ಎಂದು ಹೇಳಿದರು. ಪಾಕಿಸ್ತಾನ-ನ್ಯೂಜಿಲ್ಯಾಂಡ್ ಸರಣಿಯನ್ನು ಪುನರಾರಂಭಿಸಲು ಮಾತುಕತೆಗಳು ನಡೆಯುತ್ತಿದೆ ಎಂದರು.
ಪಾಕಿಸ್ತಾನಕ್ಕೆ ಬಂದ ನಂತರ ಸರಣಿಯನ್ನು ರದ್ದುಗೊಳಿಸುವ ನ್ಯೂಜಿಲ್ಯಾಂಡ್ ಕ್ರಮವನ್ನು ಒಪ್ಪಲಾಗದು. ಇಲ್ಲಿಯವರೆಗೆ, ಸರಣಿಯನ್ನು ಏಕೆ ರದ್ದುಗೊಳಿಸಿದರು ಎಂದು ಅವರು ನಮಗೆ ತಿಳಿಸಿಲ್ಲ. ಈಗ ಅವರು ಸರಣಿಯನ್ನು ಇನ್ನೊಂದು ತಿಂಗಳಿಗೆ ಮುಂದೂಡಲು ಪ್ರಯತ್ನಿಸುತ್ತಿದ್ದಾರೆ ಎಂದು ರಮೀಜ್ ರಾಜ ಹೇಳಿದರು.