ಬೆಂಗಳೂರು: ವಿಧಾನ ಪರಿಷತ್ (Legislative Councils) ಕಲಾಪದಲ್ಲಿಂದು `ಪೇ ಸಿಎಂ’ (PayCM) ವಿಷಯ ಸದ್ದು ಗದ್ದಲಕ್ಕೆ ಕಾರಣವಾಯ್ತು. ಪ್ರತಿಪಕ್ಷ – ಆಡಳಿತ ಪಕ್ಷಗಳ ನಡುವೆ ಭಿತ್ತಿ ಪ್ರದರ್ಶನಕ್ಕೆ ವೇದಿಕೆಯಾಯಿತು.
ಗದ್ದಲದಲ್ಲೇ ಕಲಾಪ ನಡೆಸಿದ ಸಭಾಪತಿಗಳು ವಿಶ್ವವಿದ್ಯಾಲಯ (University) ಬಿಲ್ ಪಾಸ್ ಮಾಡಿದ್ದಕ್ಕೆ ಸಭಾಪತಿ ಪೀಠವನ್ನು ಮುತ್ತಿಗೆ ಹಾಕಿ ಮೇಜು ಕುಟ್ಟಿ ಕಾಂಗ್ರೆಸ್ (Congress) ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಗದ್ದಲ ಹೆಚ್ಚಾದ ಹಿನ್ನಲೆಯಲ್ಲಿ ಕಲಾಪವನ್ನು ಸಭಾಪತಿಗಳು ಮುಂದೂಡಿದರು. ಇದನ್ನೂ ಓದಿ: 50 ಪಿಯುಸಿ ಕಾಲೇಜುಗಳಿಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್- ಸಿಎಂ ತವರು ಕ್ಷೇತ್ರಕ್ಕೆ ಬಂಪರ್ ಕೊಡುಗೆ
Advertisement
Advertisement
ವಿಧಾನ ಪರಿಷತ್ ಕಲಾಪ ಪ್ರಾರಂಭವಾದ ಕೂಡಲೇ ವಿಪಕ್ಷ ನಾಯಕ ಹರಿಪ್ರಸಾದ್ (BK Hariprasad) ಪೇ ಸಿಎಂ (CM) ಪ್ರಕರಣದಲ್ಲಿ ನಮ್ಮ ಕಾರ್ಯಕರ್ತರನ್ನ ಉಗ್ರಗಾಮಿಗಳ ರೀತಿ ರಾತ್ರೋ ರಾತ್ರಿ ಬಂಧಿಸಿದ್ದಾರೆ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಅಂತ ಒತ್ತಾಯ ಮಾಡಿದರು.
Advertisement
ಇದಕ್ಕೆ ಸಚಿವ ಆರಗ ಜ್ಞಾನೇಂದ್ರ (Araga Jnanendra) ಉತ್ತರಿಸಿ, ಕಾನೂನು ಎಲ್ಲರಿಗೂ ಒಂದೇ. ಸಿಎಂ ಬಗ್ಗೆ ಹೀಗೆ ಮಾಡಿದರೆ ಸಹಿಸೋಕೆ ಆಗುತ್ತಾ? ತಪ್ಪು ಮಾಡಿರೋರಿಗೆ ಶಿಕ್ಷೆ ಆಗುತ್ತೆ ಎಂದರು. ಈ ವೇಳೆ ಗದ್ದಲ ಗಲಾಟೆ ಪ್ರಾರಂಭವಾಯ್ತು. ಸಚಿವ ಅಶೋಕ್ (Minister Ashok) ಇದು ಕಾಂಗ್ರೆಸ್ (Congress) ನ ಹೇಡಿತನ ಅಂತ ಆಕ್ರೋಶ ಹೊರ ಹಾಕಿದರು. ಇದನ್ನೂ ಓದಿ: ಮಸೀದಿಯಲ್ಲಿ ಮುಸ್ಲಿಂ ಮುಖಂಡರನ್ನು ಭೇಟಿಯಾದ RSS ಮುಖ್ಯಸ್ಥ ಮೋಹನ್ ಭಾಗವತ್
Advertisement
ಈ ವೇಳೆ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಳಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು ಘೋಷಣೆ ಕೂಗಿದರು. ಗದ್ದಲ ಗಲಾಟೆ ಹಿನ್ನಲೆಯಲ್ಲಿ ಕಲಾಪವನ್ನ 10 ನಿಮಿಷಗಳ ಕಾಲ ಸಭಾಪತಿಗಳು ಮುಂದೂಡಿದರು.
ಕಲಾಪ ಪುನರಾರಂಭಗೊಳ್ಳುತ್ತಿದ್ದಂತೆ ಮಾತನಾಡಿದ ಜೆಡಿಎಸ್ (JDS) ಸದಸ್ಯ ಭೋಜೇಗೌಡ ಮಾತನಾಡುತ್ತಾ, ಸಾಮಾಜಿಕ ಜಾಲತಾಣದ ವೈರಲ್ ವಿಷಯ ಮತ್ತು ಬಿಜೆಪಿ ಎದುರೇಟು ಎನ್ನುವ ಕುರಿತು ಕ್ಯೂಆರ್ ಕೋಡ್ ವಿಚಾರ ಚರ್ಚೆಗೆ ಬಂದಿರೋದು ಕಿಡಿಗೇಡಿಗಳ ಕೃತ್ಯ. ನನ್ನ ಹೆಸರಲ್ಲಿ ಕ್ಯೂಆರ್ ಕೋಡ್ ಮಾಡಿದರೆ ನಾವು ಪ್ರಶ್ನೆ ಮಾಡಬಾರದಾ? ಇಂತಹ ಕಿಡಿಗೇಡಿಗಳ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ರಾಜ್ಯದಲ್ಲಿ ಹೊಸ ಕಾನೂನು ಜಾರಿಯಾಗಿದೆ – ಲಂಚ ತಿಂದರೆ ಅಪರಾಧವಲ್ಲ, ಲಂಚ ತಿಂದದ್ದನ್ನು ಹೇಳಿದರೆ ಅಪರಾಧ: ಸಿದ್ದು
ಈ ವೇಳೆ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ, ಭೋಜೇಗೌಡ ಹೇಳಿಕೆಗೆ ಸಹಮತ ವ್ಯಕ್ತಪಡಿಸುತ್ತೇನೆ. ಪೇ-ಸಿಎಂ ಹೆಸರಿನಲ್ಲಿ ಇಂತಹ ಕೃತ್ಯ ಸರಿಯಲ್ಲ. ಸಿದ್ದರಾಮಯ್ಯ (Siddaramaiah) ಮತ್ತು ಡಿಕೆಶಿ (DK Shivakumar) ಯದ್ದು ಕ್ಯೂಆರ್ (QR Code) ಕೋಡ್ ಮಾಡಲಾಗಿದೆ. ಅದರ ವಿರುದ್ಧ ಯಾಕೆ ಕ್ರಮ ಇಲ್ಲ ಎಂದಿದ್ದಾರೆ. ನೀವು ದೂರು ಕೊಡಿ ಕ್ರಮ ಕೈಗೊಳ್ಳುತ್ತೇವೆ ಎಂದರು. ಗೌರವ ಉಳಿದರೆ ಎಲ್ಲರದ್ದೂ ಉಳಿಯಲಿದೆ ಹೋದರೆ ಎಲ್ಲರದ್ದೂ ಹೋಗಲಿದೆ. ಹೀಗಾದರೆ ಸಾರ್ವಜನಿಕ ಜೀವನದಲ್ಲಿರಲು ಸಾಧ್ಯವಿಲ್ಲ. ನಾವೆಲ್ಲರೂ ಇಲ್ಲಿ ಒಂದೇ. ಸಿಎಂ ಅವರನ್ನೇ ಹೀಗೆ ಮಾಡಿದರೆ ಹೇಗೆ. ಚಾರಿತ್ರ‍್ಯವಧೆ ನೋಡಿಕೊಂಡು ಕೂರಬೇಕಾ? ನಿಮ್ಮ ಕಡೆಯವರ ಬಗ್ಗೆ ಕ್ರಮ ಇಲ್ಲ ಎಂದರೆ ದೂರು ಕೊಡಿ ಕ್ರಮ ಕೈಗೊಳ್ಳೋಣ ಎಂದರು.
ಸಿಎಂ ಇಷ್ಟು ಹಣ ಹಾಕು ಎಂದರೆ ಬೇರೆ-ಬೇರೆ ವೇದಿಕೆ ಇದೆ ಅಲ್ಲಿ ಮಾಡಲಿ. ಸಾರ್ವಜನಿಕವಾಗಿ ಈ ರೀತಿ ಮಾಡಿದರೆ ಹೇಗೆ? ನಾಳೆ ಹರಿಪ್ರಸಾದ್‌ಗೆ ಹೀಗೆ ಮಾಡಿದರೂ ಕ್ರಮ ಕೈಗೊಳ್ಳಬೇಕಲ್ಲವೇ? ಎಂದು ಪ್ರಶ್ನಿಸಿದರು. ನಾವು ನೀವು ಜಗಳ ಆಡುವುದು ಬೇರೆ ಸಾರ್ವಜನಿಕವಾಗಿ, ನಗ್ನವಾಗಬೇಕಾ? ಸಿನಿಮಾ, ನಾಟಕದಲ್ಲಿ ಹರಿಕಥೆಯಲ್ಲಿ ಕುಳಿತು ಟೀಕೆ ಮಾಡುವುದೇ ಶಾಸಕ, ಸಚಿವರನ್ನೇ. ನಮ್ಮ ಗೌರವವನ್ನು ಇನ್ನಷ್ಟು ಕೆಳಕ್ಕೆಳೆಯುವುದು ಬೇಡ ಎಂದರು.
ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಹರಿಪ್ರಸಾದ್, ಹಿಂದೆ ನಮ್ಮ ಸರ್ಕಾರದ ವೇಳೆ ಸಿದ್ದರಾಮಯ್ಯರನ್ನ ನಿದ್ದೆರಾಮಯ್ಯ ಎಂದಾಗ ನಿಮ್ಮನ್ನು ಬಂಧಿಸಿದ್ದವಾ? 10 ಪರ್ಸೆಂಟ್ ಎಂದಾಗ ವಿಶ್ವಗುರುವನ್ನು ಬಂಧಿಸಿದ್ದರಾ? ಬಿ.ಟಿ ಲಲಿತಾ ನಾಯಕ್‌ರಿಗೆ 9 ಕೊಲೆ ಪತ್ರ ಬಂದಿರುವ ಬಗ್ಗೆ ಹೈಗ್ರೌಂಡ್ಸ್ ಠಾಣೆಯಲ್ಲಿ (Police Station) ದೂರು ದಾಖಲಿಸಿದ್ದಾರೆ. ಸಿದ್ದರಾಮಯ್ಯ, ಕುಮಾರಸ್ವಾಮಿ (HD Kumaraswamy), ಹರಿಪ್ರಸಾದ್ ಕೊಲ್ಲುತ್ತೇವೆ ಎಂದು ಮೂರು ಪತ್ರದಲ್ಲಿದ್ದರೂ ಏನು ಕ್ರಮ ಕೈಗೊಂಡಿದ್ದೀರಾ. ಈಗ ಈ ವಿಚಾರದಲ್ಲಿ ದೂರು ಕೊಡಿ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಿದ್ದೀರಾ? ಹಿಂದೆಲ್ಲಾ ಏನು ಕ್ರಮ ಕೈಗೊಂಡಿದ್ದೀರಾ ಎಂದು ಪ್ರಶ್ನಿಸಿದರು. ನಮ್ಮ ಸಾಮಾಜಿಕ ಜಾಲತಾಣದವರೇನು ಉಗ್ರರಾ ರಾತ್ರೋರಾತ್ರಿ ಮನೆಯವರನ್ನು ಹೆದರಿಸಿ ಬಂಧಿಸಿದ್ದೀರಲ್ಲ ಎಂದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಚರ್ಚೆ ಮಾಡುವುದಿದ್ದರೆ ನೋಟಿಸ್ ಕೊಡಲಿ. ಪ್ರಶ್ನೋತ್ತರ ನಿಲ್ಲಿಸಿ ಚರ್ಚೆಗೆ ಅವಕಾಶ ಬೇಡ ಎಂದರು. ಇದಕ್ಕೆ ಪ್ರತಿಯಾಗಿ ಹರಿಪ್ರಸಾದ್, 40 ಪರ್ಸೆಂಟ್ ಬಗ್ಗೆ ಅರ್ಧ ಗಂಟೆ ಚರ್ಚೆಗೆ ಸಿದ್ದ ಎಂದು ಸಿಎಂ ಹೇಳಿದ್ದಾರೆ ಎಂದರು. ಇದಕ್ಕೆ ಉತ್ತರಿಸಿದ ಸಿಎಂ, ಇಂದು ನಾಳೆ ಸದನ ಇದೆ 40 – 100 ಪರ್ಸೆಂಟ್ ಎಲ್ಲ ಚರ್ಚೆಗೆ ಸಿದ್ಧರಿದ್ದೇವೆ ಎಂದು ತಿರುಗೇಟು ನೀಡಿದ್ದರು.
ಈ ವೇಳೆ ಮಾತನಾಡಿದ ಹರಿಪ್ರಸಾದ್, ಮೂರಲ್ಲ ಹತ್ತು ತಲೆಮಾರು ಚರ್ಚೆ ಆಗಲಿ. ಅಮಾಯಕರನ್ನು ರಾತ್ರಿ 2 ಗಂಟೆಗೆ ಬಂಧಿಸಿದ್ದಾರೆ ಎಂದರು. ಇದಕ್ಕೆ ಬಿಜೆಪಿ ಸದಸ್ಯರು ಯಾರು ಅಮಾಯಕರು ಎಂದು ಟಾಂಗ್ ನೀಡಿದರೆ, ನೀವು ನ್ಯಾಯಾಧೀಶರಾ? ಎಂದು ಹರಿಪ್ರಸಾದ್ ಪ್ರಶ್ನಿಸಿದರು.
ಸದನದಲ್ಲಿ ಗದ್ದಲದ ನಡುವೆಯೂ ಸಭಾಪತಿಗಳು ಪ್ರಶ್ನೋತ್ತರ ಕಲಾಪ ಆರಂಭಿಸಿದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು ಸದನದ ಬಾವಿಯಲ್ಲಿ ಧರಣಿ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಕಾಂಗ್ರೆಸ್ ಮಾಸ್ಕ್ ಗೆ ಪ್ರತಿಯಾಗಿ ಭಿತ್ತಿ ಪತ್ರ ಪ್ರದರ್ಶನ ಮಾಡಿದ ಬಿಜೆಪಿ ಸದಸ್ಯರು, ಪೊಲೀಸ್ ನೇಮಕಾತಿ, ಶಿಕ್ಷಕರ ನೇಮಕಾತಿ ಹಗರಣ, ಕೆಪಿಎಸ್ಸಿ ಹಗರಣ, ಬಿಟ್ ಕಾಯಿನ್ ಹಗರಣದ ಭಿತ್ತಿಪತ್ರ ಪ್ರದರ್ಶನ ಮಾಡಿದರು. ಕಾಂಗ್ರೆಸ್ ಸದಸ್ಯರ ವಿರುದ್ಧ ಬಿಜೆಪಿ ಸದಸ್ಯರು ಘೋಷಣೆ ಕೂಗಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸದಸ್ಯರೂ ಭಿತ್ತಿಪತ್ರ ಪ್ರದರ್ಶಿಸಿದರು.
ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ಗದ್ದಲದ ನಡುವೆ ಪ್ರಶ್ನೋತ್ತರ, ಲಿಖಿತ ಮೂಲಕ ಉತ್ತರ, ಶೂನ್ಯವೇಳೆ ಮುಗಿಸಿದ ಸಭಾಪತಿಗಳು ಶಾಸನ ರಚನೆ ಕಲಾಪ ಕೈಗೆತ್ತಿಕೊಂಡರು. ಕರ್ನಾಟಕ ವಿಶ್ವ ವಿದ್ಯಾಲಯಗಳ ತಿದ್ದುಪಡಿ ವಿಧೇಯಕ ಮಂಡಿಸಿದ ಮಾಧುಸ್ವಾಮಿ ಅಂಗೀಕಾರಕ್ಕೆ ಮನವಿ ಮಾಡಿದರು. ಕಾಂಗ್ರೆಸ್ ಗದ್ದಲದ ನಡುವೆ ಯಾವುದೇ ಚರ್ಚೆ ಇಲ್ಲದೇ ಧ್ವನಿಮತದ ಮೂಲಕ ಅಂಗೀಕರಿಸಿದರು.
ಈ ವೇಳೆ ಗದ್ದಲದಲ್ಲಿ ವಿಧೇಯಕ ಅಂಗೀಕಾರಕ್ಕೆ ಕಾಂಗ್ರೆಸ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಜೆಡಿಎಸ್‌ನ ಮರಿತಿಬ್ಬೇಗೌಡ, ಕಾಂಗ್ರೆಸ್ ನ ಸಲೀಂ ಅಹಮದ್ ತಾವು ಕುಳಿತುಕೊಳ್ಳುವ ಪೀಠದ ಮೇಲೆ ನಿಂತು ಪ್ರತಿಭಟನೆ ನಡೆಸಿದರು. ವಿಧೇಯಕ ಅಂಗೀಕಾರದ ವೇಳೆ ಕಾಂಗ್ರೆಸ್ ಸದಸ್ಯರು ಸಭಾಪತಿ ಪೀಠದ ಬಳಿ ಬಂದು ಪೀಠ ಬಡಿದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಮಾರ್ಷಲ್ ಗಳು ಸಭಾಪತಿಗಳ ಪೀಠದ ಸುತ್ತುವರಿದು ರಕ್ಷಣೆ ನೀಡಿದರು. ನಂತರ ಕಲಾಪವನ್ನು ಸಭಾಪತಿ ಮಧ್ಯಾಹ್ನಕ್ಕೆ ಮುಂದೂಡಿಕೆ ಮಾಡಿದರು. ಕಲಾಪ ಮುಂದೂಡಿಕೆ ಆದರೂ ಸದನದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಪರಸ್ಪರ ಭಿತ್ತಿಪತ್ರ ಪ್ರದರ್ಶನ ನಡೆಸಿದರು. ಪರ ವಿರೋಧ ಘೋಷಣೆ ಕೂಗಿದರು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಮಾರ್ಷಲ್ ಗಳ ದಂಡನಾಯಕರು ಮಾರ್ಷಲ್ ಗಳಿಗೆ ನಿರ್ದೇಶನ ನೀಡಿದರು. ಬಳಿಕ ಪ್ರತಿಭಟನೆ ನಡೆಸುತ್ತಿದ್ದ ಸದಸ್ಯರನ್ನು ಹೊರ ಕಳಿಸಲಾಯಿತು.