‘ಪವನ್ ಕಲ್ಯಾಣ್ ಕೇವಲ ಪವನ್ ಅಷ್ಟೇ ಅಲ್ಲ.. ತೂಫಾನ್’.. ಇದು ಸ್ಟಾರ್ ನಟನೊಬ್ಬನ ಬಗ್ಗೆ ಪ್ರಧಾನಿ ಮೋದಿ ಆಡಿದ ಮಾತುಗಳು. ಪವನ್ ಕಲ್ಯಾಣ್ ತೆಲುಗು ಚಿತ್ರರಂಗದ ಖ್ಯಾತ ನಟ. ಈಗ ರಾಜಕೀಯದಲ್ಲೂ ಹೆಚ್ಚು ಸದ್ದು ಮಾಡ್ತಿದ್ದಾರೆ. ಎನ್‌ಡಿಎ ಸಭೆಯಲ್ಲಿ ಮೋದಿ ‘ತೂಫಾನ್’ ಎಂದು ಬಣ್ಣಿಸಿದಾಗಿನಿಂದ ಇಡೀ ಭಾರತ ಈ ಸ್ಟಾರ್ ನಟನ ಕಡೆ ತಿರುಗಿ ನೋಡುತ್ತಿದೆ.
2024ರ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಇಡೀ ದೇಶದ ಗಮನ ಸೆಳೆದ ರಾಜ್ಯ ಆಂಧ್ರಪ್ರದೇಶ. ಆಂಧ್ರದಲ್ಲಿ ಸಾರ್ವಭೌಮನಂತೆ ಮೆರೆಯುತ್ತಿದ್ದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿಯನ್ನು (Jagan Mohan Reddy) ಮಟ್ಟಹಾಕಬೇಕು ಎಂದು ಅನೇಕ ಪಕ್ಷಗಳು ಒಂದಾಗಿ ಅಖಾಡಕ್ಕಿಳಿದಿದ್ದವು. ಕೊನೆಗೆ ಯಶಸ್ವಿ ಕೂಡ ಆದವು. ರಾಜ್ಯದಲ್ಲಿ ಜಗನ್ ನೇತೃತ್ವದ ವೈಎಸ್‌ಆರ್‌ಸಿಪಿ ಹೀನಾಯವಾಗಿ ಸೋತಿತು. ಇದರಲ್ಲಿ ಸ್ಟಾರ್ ನಟ ಪವನ್ ಕಲ್ಯಾಣ್ ಪಾತ್ರ ಪ್ರಮುಖವಾದದ್ದು. ಸಿನಿಮಾದಂತೆಯೇ ರಾಜಕೀಯ ರಂಗದಲ್ಲೂ ‘ಪವರ್ ಸ್ಟಾರ್’ ಧೂಳೆಬ್ಬಿಸಿಯೇ ಬಿಟ್ಟರು.
Advertisement
Advertisement
ಜನಸೇನಾ ಪಕ್ಷದ (ಜೆಎಸ್‌ಪಿ) ಪವನ್ ಕಲ್ಯಾಣ್ (Pawan kalyan) ಇಲ್ಲದಿದ್ದರೆ ಆಂಧ್ರಪ್ರದೇಶದ ಗೆಲುವು ಎನ್‌ಡಿಎ ಬಣಕ್ಕೆ ಸಾಧ್ಯವಾಗುತ್ತಿರಲಿಲ್ಲ. ಆಂಧ್ರದಲ್ಲಿ ಎನ್‌ಡಿಎ ಅದ್ಭುತ ಪ್ರದರ್ಶನ ತೋರಿದೆ. ಈ ಬಾರಿ ಚುನಾವಣೆಯಲ್ಲಿ ಆಡಳಿತಾರೂಢ ವೈಎಸ್‌ಆರ್‌ಸಿಪಿ ಸೋಲಿಗೆ ಕಾರಣವಾಯಿದೆ. ಈ ಅಭೂತಪೂರ್ವ ಗೆಲುವಿನಲ್ಲಿ ಸ್ಟಾರ್ ನಟನ ಶ್ರಮ ಎದ್ದು ಕಾಣುತ್ತಿದೆ. ಸಿನಿಮಾದಲ್ಲಷ್ಟೇ ಅಲ್ಲ ರಾಜಕೀಯದಲ್ಲೂ ನಾನೊಬ್ಬ ಸ್ಟಾರ್ ಎಂಬುದನ್ನು ಪವನ್ ಸಾಬೀತುಪಡಿಸಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯಾದ್ಯಂತ ಪ್ರಚಾರ ನಡೆಸಿದರು. ಅವರು ಹೋದಲ್ಲೆಲ್ಲ ಲಕ್ಷಾಂತರ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ಪವನ್ ಕಲ್ಯಾಣ್‌ಗೆ ಖ್ಯಾತ ನಟ ಹಾಗೂ ಸಹೋದರನೂ ಆದ ಚಿರಂಜೀವಿ, ಅಲ್ಲು ಅರ್ಜುನ್ ಸೇರಿದಂತೆ ದೊಡ್ಡ ತಾರಾಗಣವೇ ಬೆಂಬಲಕ್ಕೆ ನಿಂತಿತು. ಈ ಎಲ್ಲಾ ಪರಿಶ್ರಮದ ಫಲ ಆಂಧ್ರ ಚುನಾವಣಾ ಫಲಿತಾಂಶದಲ್ಲಿ ಗೋಚರಿಸಿತು.
Advertisement
ಆಂಧ್ರ ಚುನಾವಣೆಯಲ್ಲಿ ಮಿಂಚಿದ ಕಲ್ಯಾಣ್: ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ 175 ಸ್ಥಾನಗಳ ಪೈಕಿ 135 ಸ್ಥಾನಗಳಲ್ಲಿ ಗೆದ್ದು ಟಿಡಿಪಿ ಬಹುಮತ ಗಳಿಸಿದೆ. ಪವನ್ ಕಲ್ಯಾಣ್ ನೇತೃತ್ವದ ಜೆಎಸ್‌ಪಿ ಈ ಬಾರಿ ತಾನು ಸ್ಪರ್ಧಿಸಿದ ಎಲ್ಲಾ 21 ವಿಧಾನಸಭಾ ಕ್ಷೇತ್ರಗಳಲ್ಲೂ ಗೆದ್ದಿದೆ. ಮಿತ್ರ ಪಕ್ಷ ಬಿಜೆಪಿ ಎಂಟು ಸ್ಥಾನಗಳಲ್ಲಿ ಗೆದ್ದು ಬೀಗಿದೆ. 2019 ರಲ್ಲಿ 151 ಸ್ಥಾನಗಳನ್ನು ಗೆದ್ದು ಮೆರೆದಾಡಿದ್ದ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ವೈಎಸ್‌ಆರ್‌ಸಿಪಿ ಈ ಸಲ ಕೇವಲ 11 ಕ್ಷೇತ್ರಗಳಲ್ಲಿ ಮಾತ್ರ ಗೆದ್ದು ಪಾತಾಳಕ್ಕೆ ಕುಸಿಯಿತು. 25 ಲೋಕಸಭಾ ಸ್ಥಾನಗಳಲ್ಲಿ ನಾಯ್ಡು ಅವರ ಟಿಡಿಪಿ 16 ಸ್ಥಾನಗಳನ್ನು ಗೆದ್ದುಕೊಂಡರೆ, ವೈಎಸ್‌ಆರ್‌ಸಿಪಿ ಕೇವಲ ನಾಲ್ಕಕ್ಕೆ ಕುಸಿಯಿತು. ಬಿಜೆಪಿ ಮೂರು ಮತ್ತು ಜನಸೇನಾ ಪಕ್ಷವು ಉಳಿದ ಎರಡು ಸ್ಥಾನಗಳನ್ನು ಗೆದ್ದುಕೊಂಡಿದೆ.
Advertisement
ನಟನೆಯಿಂದ ರಾಜಕೀಯಕ್ಕೆ ರಂಗಪ್ರವೇಶ: ತೆಲುಗು ಚಿತ್ರರಂಗದಲ್ಲಿ ‘ಪವರ್ ಸ್ಟಾರ್’ ಎಂದೇ ಖ್ಯಾತಿ ಗಳಿಸಿದವರು ಪವನ್ ಕಲ್ಯಾಣ್. ಜನಪ್ರಿಯ ನಟರ ಕುಟುಂಬಕ್ಕೆ ಸೇರಿದ ವ್ಯಕ್ತಿ. ಸೂಪರ್‌ಸ್ಟಾರ್ ಚಿರಂಜೀವಿ ಅವರ ಕಿರಿಯ ಸಹೋದರ ಕಲ್ಯಾಣ್, 2008 ರಲ್ಲಿ ತಮ್ಮ ಸಹೋದರನ ಪಕ್ಷದೊಂದಿಗೆ ರಾಜಕೀಯಕ್ಕೆ ರಂಗಪ್ರವೇಶ ಮಾಡಿದರು. ಕಲ್ಯಾಣ್ 2014 ರಲ್ಲಿ ತಮ್ಮದೇ ಪಕ್ಷವನ್ನು (JSP) ಕಟ್ಟಿದರು. 2019 ರ ಚುನಾವಣೆಯಲ್ಲಿ JSP ಏಕಾಂಗಿಯಾಗಿ ಸ್ಪರ್ಧೆ ಮಾಡಿ ಹೀನಾಯ ಸೋಲನುಭವಿಸಿತ್ತು. ರಜೋಲ್ ಏಕೈಕ ಅಸೆಂಬ್ಲಿ ಸ್ಥಾನವನ್ನು ಗೆದ್ದಿತ್ತು. ಕಲ್ಯಾಣ್ ಅವರ ಪಕ್ಷವು ಲೋಕಸಭಾ ಚುನಾವಣೆಯಲ್ಲಿ ಖಾತೆ ತೆರೆಯಲೇ ಇಲ್ಲ. ವೈಎಸ್‌ಆರ್‌ಸಿಪಿ 22 ಸ್ಥಾನಗಳನ್ನು ಗೆದ್ದು ಬೀಗಿತು. ಆದರೆ ಟಿಡಿಪಿ ಕೇವಲ 3 ರಲ್ಲಿ ಮಾತ್ರ ಗೆಲುವು ಸಾಧಿಸಿತು. ಆ ಸಂದರ್ಭದಲ್ಲಿ ಬಿಎಸ್‌ಪಿ ಮತ್ತು ಎಡ ಪಕ್ಷಗಳ ಜೊತೆ ಜೆಎಸ್‌ಪಿ ಮೈತ್ರಿ ಮಾಡಿಕೊಂಡಿತ್ತು. ಹೀನಾಯವಾಗಿ ಸೋತರೂ ಪವನ್ ಎದೆಗುಂದಲಿಲ್ಲ. ಮತ್ತೆ ರಾಜಕೀಯದಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡರು.
ಎನ್‌ಡಿಎ ಗೆಲುವಲ್ಲಿ ‘ಪವರ್ ಸ್ಟಾರ್’ ಪಾತ್ರ: 2024 ರಲ್ಲಿ ಪವನ್ ಕಲ್ಯಾಣ್ ಲಕ್ ಬದಲಾಯಿತು. ಕಳೆದ ಚುನಾವಣೆಯ ಸೋಲಿನ್ನು ಗೆಲುವು ಪರಿವರ್ತಿಸುವಲ್ಲಿ ಪವರ್ ಸ್ಟಾರ್ ಯಶಸ್ವಿಯಾದರು. ಟಿಡಿಪಿ ಮತ್ತು ಬಿಜೆಪಿ ನಡುವಿನ ಮೈತ್ರಿಯ ಶ್ರೇಯಸ್ಸು ಕಲ್ಯಾಣ್ ಅವರಿಗೆ ಸಲ್ಲಬೇಕು. ಇದನ್ನೂ ಓದಿ: ಟೀ ಮಾರಾಟ.. ಅಧ್ಯಾತ್ಮದ ನೆಲೆಯಿಂದ ಪ್ರಧಾನಿ ಗಾದಿವರೆಗೆ ಮೋದಿ ನಡೆದು ಬಂದ ದಾರಿ
ಕೌಶಲ್ಯಾಭಿವೃದ್ಧಿ ಹಗರಣ ಪ್ರಕರಣದಲ್ಲಿ ತೆಲುಗು ದೇಶಂ ಪಾರ್ಟಿ (TDP) ಮುಖ್ಯಸ್ಥ ಚಂದ್ರಬಾಬು ನಾಯ್ಡು ಜೈಲಿನಲ್ಲಿದ್ದ ದಿನಗಳವು. ನಾಯ್ಡು ಜೈಲಿಗೆ ಸೇರಲು ವೈಎಸ್‌ಆರ್‌ಸಿಪಿ ನೇತೃತ್ವದ ಸರ್ಕಾರ ಕಾರಣವಾಗಿತ್ತು. ಸುಪ್ರೀಂ ಕೋರ್ಟ್‌ನಿಂದ ಜಾಮೀನು ಸಿಗುವ ವರೆಗೂ 50 ದಿನಗಳ ಕಾಲ ನಾಯ್ಡು ಜೈಲಿನಲ್ಲಿದ್ದರು. ಆಗಿನ ಸಂದರ್ಭದಲ್ಲಿ ಟಿಡಿಪಿ ಮತ್ತು ಬಿಜೆಪಿ ಜೊತೆಗೆ ಮೈತ್ರಿ ಯಶಸ್ವಿಗೊಳಿಸುವಲ್ಲಿ ಪವನ್ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದರು.
ಟಿಡಿಪಿ ರಾಜಕೀಯ ಭವಿಷ್ಯ ಮುಗಿದೇ ಹೋಯಿತು ಎಂಬಂತಿದ್ದ ಸನ್ನಿವೇಶದಲ್ಲಿ, ಟಿಡಿಪಿ ಕಾರ್ಯಕರ್ತರ ನೈತಿಕತೆಯನ್ನು ಹೆಚ್ಚಿಸಲು ಮೈತ್ರಿ ನಡೆ ಸಹಾಯ ಮಾಡಿತು. ಎನ್‌ಡಿಎ ಮಿತ್ರ ಪಕ್ಷವಾಗಿದ್ದ ಕಲ್ಯಾಣ್, 2024ರ ಚುನಾವಣೆಗೆ ಟಿಡಿಪಿಯೊಂದಿಗೆ ಕೈಜೋಡಿಸುವಂತೆ ಬಿಜೆಪಿಗೆ ಮನವರಿಕೆ ಮಾಡಿದರು. ಎನ್‌ಡಿಎ ಮೈತ್ರಿಕೂಟದ ಜೊತೆಗಿನ ಒಪ್ಪಂದದಂತೆ ಕಲ್ಯಾಣ್ ಪಕ್ಷವು ರಾಜ್ಯದಲ್ಲಿ ಸ್ಪರ್ಧಿಸಿದ್ದ ಎಲ್ಲಾ ಲೋಕಸಭೆ ಮತ್ತು ಅಸೆಂಬ್ಲಿ ಸ್ಥಾನಗಳನ್ನು ಗೆದ್ದುಕೊಂಡಿತು. ವೈಎಸ್‌ಆರ್‌ಸಿಪಿಯ ವಂಗ ಗೀತಾ ಅವರನ್ನು ಪವನ್ ಕಲ್ಯಾಣ್ ಪಿಠಾಪುರಂ ವಿಧಾನಸಭಾ ಕ್ಷೇತ್ರದಿಂದ 70,279 ಮತಗಳ ಅಂತರದಿಂದ ಮಣಿಸಿದರು.
ಕಾಪುಗಳು ಮತ್ತು ಕಮ್ಮಸ್ ಎರಡೂ ಸಮುದಾಯಗಳ ಮತದಾರರನ್ನು ಒಟ್ಟುಗೂಡಿಸುವಲ್ಲಿ ಕಲ್ಯಾಣ್ ಪ್ರಮುಖ ಪಾತ್ರ ವಹಿಸಿದರು. ಇದರಿಂದ ಆಂಧ್ರದಲ್ಲಿ ಎನ್‌ಡಿಎಗೆ ಪ್ರಯೋಜನವಾಯಿತು. 1980ರ ದಶಕದಿಂದಲೂ ಎರಡು ಸಮುದಾಯಗಳು ಪರಸ್ಪರ ಜಗಳವಾಡುತ್ತಿವೆ. ಆಂಧ್ರಪ್ರದೇಶದ ಜನಸಂಖ್ಯೆಯಲ್ಲಿ ಕಾಪುಗಳು 18% ಇದ್ದರೆ, ರಾಜಕೀಯವಾಗಿ ಬಲಿಷ್ಠವಾಗಿರುವ ಕಮ್ಮಗಳು ಕೇವಲ ಆರು ಪ್ರತಿಶತದಷ್ಟಿದ್ದಾರೆ. ಎರಡು ಸಮುದಾಯಗಳ ನಡುವಿನ ಪೈಪೋಟಿಯ ನಂತರ, ಕಾಪುಗಳು ಸಾಂಪ್ರದಾಯಿಕವಾಗಿ ಟಿಡಿಪಿಯಿಂದ ದೂರ ಉಳಿದಿದ್ದರು. ಪರಿಣಾಮವಾಗಿ 2014 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸೋಲಿನ ನಂತರ ವೈಎಸ್ಆರ್ ಕಾಂಗ್ರೆಸ್ ಪಕ್ಷವು ಭಾಗಶಃ ಈ ಸಮುದಾಯದ ಮತಗಳನ್ನು ಗಳಿಸಿತ್ತು. ಆದರೆ ಈ ಬಾರಿ ಕಾಪು ಸಮುದಾಯ ಪವನ್ ಕಲ್ಯಾಣ್‌ಗೆ ಬೆಂಬಲವಾಗಿ ನಿಂತಿತು. ಇದು ಟಿಡಿಪಿ-ಬಿಜೆಪಿ ಮೈತ್ರಿಗೆ ಸಹಾಯ ಮಾಡಿತು.
ಚುನಾವಣೆ ಸಂದರ್ಭದಲ್ಲಿ ಪವನ್ ಕಲ್ಯಾಣ್ ಅವರನ್ನು ಕಾಲ್ ಶೀಟ್ ರಾಜಕಾರಣಿ ಎಂದು ವೈಎಸ್‌ಆರ್‌ಸಿಪಿ ಲೇವಡಿ ಮಾಡಿತ್ತು. ಈಗ ಅದೇ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆಯುವಲ್ಲಿ ‘ಪವರ್ ಸ್ಟಾರ್’ ಪ್ರಮುಖ ಪಾತ್ರ ವಹಿಸಿದ್ದಾರೆ. ಈಗ ಕೇಂದ್ರದಲ್ಲಿ ಮೋದಿ ನಾಯಕತ್ವದಲ್ಲಿ ಎನ್‌ಡಿಎ ಅಧಿಕಾರದ ಗದ್ದುಗೆ ಏರಿದೆ. ಬಿಜೆಪಿ ಸತತ ಮೂರನೇ ಅವಧಿಗೆ ಸರ್ಕಾರ ರಚಿಸಲು ಟಿಡಿಪಿ ನಿರ್ಣಾಯಕವಾಗಿದೆ. ಚಂದ್ರಬಾಬು ನಾಯ್ಡು ಈಗ ಕೇಂದ್ರದಲ್ಲಿ ಕಿಂಗ್‌ಮೇಕರ್ ಆಗಿ ಹೊರಹೊಮ್ಮಿದ್ದಾರೆ. ಇದಕ್ಕೆಲ್ಲ ಬೆನ್ನೆಲುಬಾಗಿ ನಿಂತು ಕೆಲಸ ಮಾಡಿದ ಶ್ರೇಯ ಪವನ್ ಕಲ್ಯಾಣ್‌ಗೆ ಸಲ್ಲಬೇಕು.