– ಪತ್ತೆಗೆ ಸಾರ್ವಜನಿಕರ ನೆರವು ಕೋರಿದ ಖಾಕಿ
ಪಾಟ್ನಾ: ಬಿಹಾರದ ರಾಜಧಾನಿ ಪಾಟ್ನಾದಲ್ಲಿ(Patna) ಜುಲೈ 22 ರಂದು ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಉಂಟಾದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪಾಟ್ನಾ ಪೊಲೀಸರು ಪ್ರಮುಖ ತನಿಖೆ ಚುರುಕುಗೊಳಿಸಿದ್ದಾರೆ.
ಕಲ್ಲು ತೂರಾಟ ಮತ್ತು ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆನ್ನಲಾದ 117 ಶಂಕಿತ ವ್ಯಕ್ತಿಗಳ ಫೋಟೋಗಳನ್ನು ಪೊಲೀಸರು (Police) ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಬಿಡುಗಡೆ ಮಾಡಿದ್ದು, ಅವರನ್ನು ಗುರುತಿಸಲು ಸಾರ್ವಜನಿಕರ ನೆರವು ಕೋರಿದ್ದಾರೆ.
ನೀಟ್ ಪರೀಕ್ಷಾ ಅಕ್ರಮದ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್(Dharmendra Pradhan) ಅವರು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು. ಸಾವಿರಾರು ವಿದ್ಯಾರ್ಥಿಗಳು ಗಾಂಧಿ ಮೈದಾನದಿಂದ ಬಿಹಾರ ವಿಧಾನಸಭೆಯತ್ತ ಮೆರವಣಿಗೆ ನಡೆಸಿದ್ದರು.
— Patna Police (@PatnaPolice24x7) July 23, 2026
ಮೆರವಣಿಗೆಯ ವೇಳೆ ಪ್ರತಿಭಟನಾಕಾರರ ಒಂದು ಗುಂಪು ಹಿಂಸಾಚಾರಕ್ಕೆ ಇಳಿದು, ಭದ್ರತಾ ಸಿಬ್ಬಂದಿ ಹಾಗೂ ಮಾಧ್ಯಮ ಪ್ರತಿನಿಧಿಗಳ ಮೇಲೆ ಕಲ್ಲು ತೂರಾಟ ನಡೆಸಿತು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಪೊಲೀಸರು ಮೊದಲು ವಾಟರ್ ಕ್ಯಾನನ್ (ನೀರಿನ ಸಿಂಚನ) ಬಳಸಿ ಗುಂಪನ್ನು ಚದುರಿಸಲು ಯತ್ನಿಸಿದರು. ಆದರೂ ನಿಯಂತ್ರಣಕ್ಕೆ ಬಾರದಿದ್ದಾಗ ಲಾಠಿಚಾರ್ಜ್ ನಡೆಸಿ ಜನಸಂದಣಿಯನ್ನು ಚದುರಿಸಿದರು.
ಪ್ರತಿಭಟನಾಕಾರರ ಗುಂಪೊಂದು ಸ್ಥಳೀಯ ಬಿಜೆಪಿ (BJP) ಕಚೇರಿಯ ತಲುಪಿ ಕಲ್ಲು ತೂರಾಟ ನಡೆಸಿತು. ಪೊಲೀಸರು ಹಾಗೂ ಸ್ಥಳೀಯರ ನೆರವಿನಿಂದ ಕಚೇರಿಯ ಬಳಿ ಪರಿಸ್ಥಿತಿಯನ್ನು ತಿಳಿಗೊಳಿಸಲಾಯಿತು.
सूची 02 pic.twitter.com/tkhoZ8Tn9z
— Patna Police (@PatnaPolice24x7) July 23, 2026
ಪ್ರತಿಭಟನೆಯ ವೇಳೆ ಸಿಸಿಟಿವಿ ಮತ್ತು ವೀಡಿಯೊಗಳಲ್ಲಿ ಸೆರೆಯಾದ ದೃಶ್ಯಗಳನ್ನು ಪರಿಶೀಲಿಸಿ 117 ಶಂಕಿತರನ್ನು ಗುರುತಿಸಲಾಗಿದೆ. ಸಾರ್ವಜನಿಕರ ಸಹಾಯದಿಂದ ಈ ವ್ಯಕ್ತಿಗಳ ಗುರುತು ಪತ್ತೆಯಾದ ತಕ್ಷಣವೇ ಅವರ ವಿರುದ್ಧ ಕಾನೂನುಬಾಹಿರ ಕೃತ್ಯ, ಸಾರ್ವಜನಿಕ ಆಸ್ತಿಪಾಸ್ತಿ ಹಾನಿ ಮತ್ತು ಗಲಭೆ ಎಬ್ಬಿಸಿದ ಆರೋಪದಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬಿಹಾರ ಪೊಲೀಸರು ತಿಳಿಸಿದ್ದಾರೆ.
ಈ ಘಟನೆಯು ಬಿಹಾರದ ರಾಜಕೀಯ ವಲಯದಲ್ಲೂ ಭಾರಿ ಸಂಚಲನ ಮೂಡಿಸಿದ್ದು, ಆಡಳಿತ ಹಾಗೂ ವಿರೋಧ ಪಕ್ಷಗಳ ನಡುವೆ ಪರ-ವಿರೋಧದ ಚರ್ಚೆಗೆ ಕಾರಣವಾಗಿದೆ.
