ಗದಗ: ಸರ್ಕಾರಿ ಆಸ್ಪತ್ರೆಗಳು ಅಂದ್ರೆ ಬಡವರ ಪಾಲಿನ ಸಂಜೀವಿನಿ ಅಂತಾರೆ. ಆದರೆ ಸರ್ಕಾರಿ ಆಸ್ಪತ್ರೆಗಳಿಗೆ ಹೋದರೆ ನರಕ ದರ್ಶನವಾಗುತ್ತಿದೆ. ವೈದ್ಯೋ ನಾರಾಯಣ ಹರಿ ಅನ್ನೋದು ಈ ಆಸ್ಪತ್ರೆಯ ವೈದ್ಯರಿಗೆ ಇದು ಅಪವಾದಂತಿದೆ.
ಹೌದು. ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕು ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ರೋಗಿಗಳು ಪರದಾಡುತ್ತಿದ್ದಾರೆ. ಆಸ್ಪತ್ರೆ ಕಾರಿಡಾರ್‍ನ ನೆಲದ ಮೇಲೆಯೇ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಮೂಲಕ ರೋಗಿಗಳ ಜೀವದ ಜೊತೆ ವೈದ್ಯರ ಚೆಲ್ಲಾಟವಾಡುತ್ತಿದ್ದಾರೆ. ಪ್ರತಿನಿತ್ಯ ನೂರಾರು ರೋಗಿಗಳು ಬರೋ ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾತ್ರ ಮರೀಚಿಕೆಯಾಗಿದೆ. ಇನ್ನೂ ಬಡರೋಗಿಗಳ ಪಾಡಂತೂ ದೇವರೇ ಬಲ್ಲ. ಚಿಕನ್‍ಗುನ್ಯಾ, ಮಲೇರಿಯಾ, ವಾಂತಿ, ಜ್ವರದಿಂದ ಬಳಲ್ತಿರೋ ರೋಗಿಗಳಿಗೆ ನೆಲದ ಮೇಲೆಯೇ ಚಿಕಿತ್ಸೆ ಕೊಡುತ್ತಾರೆ.
ಆಸ್ಪತ್ರೆಯಲ್ಲಿ ಸರಿಯಾದ ಬೆಡ್, ಮಂಚ, ವ್ಹೀಲ್‍ಚೇರ್‍ಗಳಿಲ್ಲ. ಎಲ್ಲೆಂದರಲ್ಲಿ ಚಿಕಿತ್ಸೆ ನೀಡುತ್ತಾರೆ. ಕುರ್ಚಿ ಮೇಲೆ ಕೂರಿಸಿ ಡ್ರಿಪ್ ಹಾಕುತ್ತಾರೆ. ಸಿಬ್ಬಂದಿ ಹಾಗೂ ವೈದ್ಯರ ಕೊರತೆಯಿಂದ ರೋಗಿಗಳ ಸಂಬಂಧಿಕರೇ ಹಾಕಿರುವ ಡ್ರಿಪ್ ತೆಗೆಯುವುದು ಸಾಮಾನ್ಯವಾಗಿದೆ. ಇಷ್ಟೆಲ್ಲಾ ಅವ್ಯವಸ್ಥೆ ಇದ್ದರೂ ವೈದ್ಯಾಧಿಕಾರಿಗಳು ಕ್ಯಾರೇ ಅಂತಿಲ್ಲ. ವೈದ್ಯಾಧಿಕಾರಿಗಳ ಬೇಜಾವಾಬ್ದಾರಿಗೆ ರೋಗಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಬಡ ರೋಗಿಗಳ ಚಿಕಿತ್ಸೆಗೆ ಕೋಟಿ ಕೋಟಿ ಅನುದಾನ ಕೊಟ್ಟರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರಯೋಜನ ಆಗುತ್ತಿಲ್ಲ. ಸರ್ಕಾರಿ ಆಸ್ಪತ್ರೆ ಅಂದರೆ ಮೂಗುಮುರಿಯೋ ಮೊದಲು ಸಂಬಂಧಪಟ್ಟವರು ಸಮಸ್ಯೆ ಬಗೆಹರಿಸಿ ಬಡವರಿಗೆ ಅನುಕೂಲ ಮಾಡಿಕೊಡಬೇಕಿದೆ.