ವಿಜಯಪುರ: ಆರೋಗ್ಯ ಸಚಿವರ ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ಆಕ್ಸಿಜನ್ ಪೂರೈಕೆ ಮಾಡದ ಕಾರಣಕ್ಕೆ ರೋಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ವಿಜಯಪುರ ತಾಲೂಕಿನ ಉತ್ನಾಳ ಗ್ರಾಮದ ನಿವಾಸಿ ಅನಿಲ್ ದೊಡ್ಡಮನಿ(40) ಮೃತ ದುರ್ದೈವಿ. ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ಹಳದಿ ಕಾಮಣಿ ಕಾಯಿಲೆ ಚಿಕಿತ್ಸೆಗಾಗಿ ಅನಿಲ್ ದಾಖಲಾಗಿದ್ದರು. ಆದರೆ ಇಂದು ಬೆಳಗ್ಗೆಯಿಂದ ಅನಿಲ್‍ಗೆ ಸರಿಯಾಗಿ ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ನೀಡಿಲ್ಲವಂತೆ. ಅಲ್ಲದೆ ಉಸಿರಾಟ ತೊಂದರೆಯಿಂದ ರೋಗಿ ಒದ್ದಾಡುತ್ತಿದ್ದಾಗ ಆಕ್ಸಿಜನ್ ನೀಡಿ ಎಂದು ಪತ್ನಿ ಕಲ್ಪನಾ ಮತ್ತು ಕುಟುಂಬಸ್ಥರು ಸಿಬ್ಬಂದಿ ಬಳಿ ಗೋಳಾಡಿದರು ಯಾರು ಕ್ಯಾರೆ ಅಂದಿಲ್ಲ ಎಂದು ಆರೋಪಿಸಲಾಗಿದೆ.
ರೋಗಿಗೆ ಆಕ್ಸಿಜನ್ ಪೂರೈಕೆ ಮಾಡುವ ಬದಲು ಆಸ್ಪತ್ರೆ ಸಿಬ್ಬಂದಿ ನಮ್ಮಲ್ಲಿ ಆಕ್ಸಿಜನ್ ಕೊರತೆ ಇದೆ ಎಂದು ಹೇಳಿ ಸುಮ್ಮನ್ನಾಗಿದ್ದಾರೆ. ಸರಿಯಾದ ಸಮಯಕ್ಕೆ ನನ್ನ ಪತಿಗೆ ಆಕ್ಸಿಜನ್ ನೀಡಿದ್ದರೆ ಅವರು ಬದುಕುತ್ತಿದ್ದರು ಎಂದು ರೋಗಿಯ ಪತ್ನಿ ಕಣ್ಣೀರಿಟ್ಟಿದ್ದಾರೆ.
ಇದೇ ರೀತಿ ಆಕ್ಸಿಜನ್ ಕೊರತೆಯಿಂದ ಇಬ್ಬರು ರೋಗಿಗಳು ಸಾವನ್ನಪ್ಪಿದ್ದಾರೆ. ಆದರೂ ಕೂಡ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ನಿಭಾಯಿಸಲು ಸಾಧ್ಯವಾಗಿಲ್ಲ. ವೈದ್ಯರು ಹಾಗೂ ಸಿಬ್ಬಂದಿ ನಿರ್ಲಕ್ಷ್ಯದಿಂದ ತಮ್ಮವರನ್ನು ಕಳೆದುಕೊಂಡ ರೋಗಿಗಳ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.