ಶಾರುಖ್ ಖಾನ್ (Shah Rukh Khan) ನಟನೆಯ ‘ಪಠಾಣ್’ (Pathan) ಸಿನಿಮಾದ ಟ್ರೈಲರ್ ಹಾಗೂ ಸಿನಿಮಾ ಅಂದುಕೊಂಡ ದಿನದಂದೇ ರಿಲೀಸ್ ಆಗಲಿವೆ. ಸೆನ್ಸಾರ್ ಸಮಸ್ಯೆಯಿಂದಾಗಿ ಚಿತ್ರದ ಟ್ರೈಲರ್ (Trailer) ಹಾಗೂ ಸಿನಿಮಾದ ರಿಲೀಸ್ ದಿನಾಂಕದಲ್ಲಿ ವ್ಯತ್ಯಾಸ ಆಗಬಹುದು ಎಂದು ಹೇಳಲಾಗಿತ್ತು. ಆದರೆ, ಮೊದಲೇ ಫಿಕ್ಸ್ ಮಾಡಿಕೊಂಡಂತೆ ಜನವರಿ 10 ರಂದು ಟ್ರೈಲರ್ ಮತ್ತು ಜನವರಿ 25 ರಂದು ವಿಶ್ವದಾದ್ಯಂತ ಸಿನಿಮಾವನ್ನು ರಿಲೀಸ್ ಮಾಡುವುದಾಗಿ ನಿರ್ಮಾಣ ಸಂಸ್ಥೆಯೇ ಘೋಷಿಸಿದೆ.
ಈ ನಡುವೆ ಚಿತ್ರಕ್ಕೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈ ಸಿನಿಮಾದ ಅಶ್ಲೀಲ ಕಂಟೆಂಟ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಕ್ಕಳ ಹಿತದೃಷ್ಟಿಯಿಂದ ಅವುಗಳನ್ನು ಸೋಷಿಯಲ್ ಮೀಡಿಯಾದಿಂದ ತೆಗೆದು ಹಾಕುವಂತೆ ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯು ಪೊಲೀಸ್ ಮಹಾ ನಿರ್ದೇಶಕರಿಗೆ ಪತ್ರ ಬರೆದಿದೆ. ಇದನ್ನೂ ಓದಿ: ನಾನಿಲ್ಲಿ ಗೆದ್ದಿರುವಂಥದ್ದು ನಿಮ್ಮಿಂದ, ನೀವು ನನ್ನನ್ನು ಗೆಲ್ಲಿಸಿದ್ದೀರಿ: ರೂಪೇಶ್ ಶೆಟ್ಟಿ
ಕಲ್ಯಾಣ ಸಮಿತಿಯು ಡಿಜಿಪಿಗೆ ಬರೆದ ಪತ್ರದಲ್ಲಿ, ‘ಪಠಾಣ್ ಸಿನಿಮಾದ ‘ಬೇಷರಂ ರಂಗ್’ ಗೀತೆಯಲ್ಲಿ ಅಶ್ಲೀಲ ಅನಿಸುವಂತಹ ಕಂಟೆಂಟ್ ಇದೆ. ಇದು ಬಾಲಾಪರಾಧಿ ಕಾಯಿದೆ ಪ್ರಕಾರ ಮಕ್ಕಳ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹಾಗಾಗಿ ಕೂಡಲೇ ಅವುಗಳನ್ನು ಸಾಮಾಜಿಕ ಮಾಧ್ಯಮದಿಂದ ತೆಗೆಸಬೇಕು’ ಎಂದು ಬರೆಯಲಾಗಿದೆ. ಆ ಪತ್ರಕ್ಕೆ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಶ್ರೀವಾಸ್ತವ ಮತ್ತು ಹಲವರು ಸಹಿ ಮಾಡಿದ್ದಾರೆ.
ಈಗಾಗಲೇ ಸೆನ್ಸಾರ್ ಮಂಡಳಿ ಕೂಡ ಕೆಲ ದೃಶ್ಯಗಳನ್ನು ತೋರಿಸಲು ಸಾಧ್ಯವೇ ಇಲ್ಲ ಎಂದೂ, ಅವುಗಳನ್ನು ಸಿನಿಮಾದಿಂದ ತೆಗೆದು ಹಾಕಬೇಕು ಎಂದೂ ನಿರ್ದೇಶನ ನೀಡಿದೆ. ಇನ್ನೂ ಹಲವರು ಈ ಚಿತ್ರಕ್ಕೆ ಪಠಾಣ್ ಎಂದು ಹೆಸರಿಡಲು ಬಿಡುವುದಿಲ್ಲ ಎಂದು ಪ್ರತಿಭಟಿಸುತ್ತಿದ್ದಾರೆ. ಬೇಷರಂ ರಂಗ್ ಕೂಡ ಹಿಂದೂ ಭಾವನೆಗಳಿಗೆ ಧಕ್ಕೆ ಮಾಡಿದೆ ಎನ್ನುವ ಆರೋಪವಿದೆ. ಈ ಎಲ್ಲ ಸಂಕಟಗಳ ಮಧ್ಯೆಯೂ ಚಿತ್ರದ ಟ್ರೈಲರ್ ಅನ್ನು ರಿಲೀಸ್ ಮಾಡುವ ಸಂಭ್ರಮದಲ್ಲಿದೆ ಚಿತ್ರತಂಡ.