– ನಾಗಾಲ್ಯಾಂಡ್ ಗುಂಡಿನ ದಾಳಿ ಬಗ್ಗೆ ಸ್ಪಷ್ಟನೆ ನೀಡಿದ ಅಮಿತ್ ಶಾ
– ಅಮಿತ್ ಶಾ ಉತ್ತರ ನೀಡುತ್ತಿದ್ದಂತೆ ಸಭಾತ್ಯಾಗ ಮಾಡಿದ ವಿಪಕ್ಷಗಳು
ನವದೆಹಲಿ: ನಾಗಾಲ್ಯಾಂಡ್‍ನಲ್ಲಿ ನಡೆದ ಗುಂಡಿನ ದಾಳಿ ವಿಚಾರವಾಗಿ ಚಳಿಗಾಲದ ಅಧಿವೇಶನದಲ್ಲಿ ಗೃಹ ಸಚಿವ ಅಮಿತ್ ಶಾ ಸ್ಪಷ್ಟನೆ ನೀಡುತ್ತಿದ್ದಂತೆ ವಿರೋಧ ಪಕ್ಷಗಳು ಸಭಾತ್ಯಾಗ ಮಾಡಿದೆ.
ನಾಗಾಲ್ಯಾಂಡ್‍ನ ಮೋನ್ ಜಿಲ್ಲೆಯ ತಿರು ಗ್ರಾಮದಲ್ಲಿ ನಾಗಾರಿಕರ ಗುಂಪು ಕಲ್ಲಿದ್ದಲು ಗಣಿಯಿಂದ ಕೆಲಸ ಮುಗಿಸಿ ಟ್ರಕ್‍ನಲ್ಲಿ ಹಿಂದಿರುಗುತ್ತಿತ್ತು. ಈ ವೇಳೆ ಅಲ್ಲಿ ಉಗ್ರರ ವಿರುದ್ಧ ಕಾರ್ಯಚರಣೆಗಿಳಿದಿದ್ದ ಪ್ಯಾರಾ ಕಮಾಂಡೋಗಳು ಇವರನ್ನು ತಪ್ಪಾಗಿ ತಿಳಿದು ಗುಂಡಿನ ದಾಳಿ ನಡೆಸಿತ್ತು. ಪರಿಣಾಮ ಘಟನೆಯಲ್ಲಿ 14 ಮಂದಿ ನಾಗರಿಕರು ಮೃತಪಟ್ಟಿದ್ದರು. ಈ ಬಗ್ಗೆ ವಿರೋಧ ಪಕ್ಷಗಳು ಅಧಿವೇಶನದಲ್ಲಿ ಅಮಿತಾ ಶಾ ಸ್ಪಷ್ಟನೆ ಕೊಡಬೇಕೆಂದು ಪಟ್ಟು ಹಿಡಿದಿದ್ದರು. ಇದನ್ನೂ ಓದಿ: ದಂಗೆಕೋರರು ಎಂದು ಭಾವಿಸಿ ಗುಂಡಿನ ದಾಳಿ-13 ಮಂದಿ ದುರ್ಮರಣ
ಇಂದು ಅಮಿತ್ ಶಾ ಅಧಿವೇಶನದಲ್ಲಿ ಈ ಬಗ್ಗೆ ಸಂತಾಪ ಸೂಚಿಸಿ ಸ್ಪಷ್ಟನೆ ಕೊಡುತ್ತಿದ್ದಂತೆ ವಿರೋಧ ಪಕ್ಷಗಳಾದ ಕಾಂಗ್ರೆಸ್, ಡಿಎಂಕೆ, ಎಸ್‍ಪಿ, ಬಿಎಸ್‍ಪಿ, ಎನ್‍ಸಿಪಿ ಸಂಸದರು ಸಭಾತ್ಯಾಗ ಮಾಡಿದ್ದಾರೆ. ಇದನ್ನೂ ಓದಿ: ಗಡಿಭಾಗದಲ್ಲಿ ಜನಿಸಿದ ಮಗುವಿಗೆ ಬಾರ್ಡರ್ ಎಂದು ಹೆಸರಿಟ್ಟ ಹೆತ್ತವರು
ಅಮಿತ್ ಶಾ ಹೇಳಿದ್ದೇನು?
ನಾಗಾಲ್ಯಾಂಡ್ ಹತ್ಯೆಗೆ ಮೊದಲು ನಾನು ಸಂತಾಪ ಸೂಚಿಸುತ್ತೇನೆ. ಉಗ್ರರ ಇರುವಿಕೆಯ ಬಗ್ಗೆ ಮಾಹಿತಿ ಸಿಕ್ಕಿತ್ತು. ಹಾಗಾಗಿ ಕಮಾಂಡೋಗಳು ಅಡಗಿ ಕುಳಿತು ಶಂಕಿತ ಪ್ರದೇಶದಲ್ಲಿ ದಾಳಿಗೆ ಸಜ್ಜುಗೊಂಡಿದ್ದರು. ಅದೇ ಸಮಯಕ್ಕೆ ವಾಹನವೊಂದು ಅಲ್ಲಿಗೆ ಬಂದಿದೆ. ವಾಹನವನ್ನು ನಿಲ್ಲಿಸುವಂತೆ ಕಮಾಂಡೋಗಳು ಸೂಚಿಸಿದ್ದಾರೆ. ಅಷ್ಟೊತ್ತಿಗಾಗಲೇ ವಾಹನದಲ್ಲಿದ್ದವರು ಪರಾರಿಯಾಗಲು ಯತ್ನಿಸಿದ್ದಾರೆ. ಆಗ ಸೇನೆ ದಾಳಿ ನಡೆಸಿದೆ.
ಆ ಬಳಿಕ ಘಟನೆ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಗ್ರಾಮಸ್ಥರು ಸೇನೆಯನ್ನು ಸುತ್ತುವರೆದು ಎರಡು ವಾಹನಗಳಿಗೆ ಬೆಂಕಿ ಹಚ್ಚಿ ಸೇನಾ ಸಿಬ್ಬಂದಿ ಮೇಲೆ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಓರ್ವ ಯೋಧ ಸಾವನ್ನಪ್ಪಿದ್ದು ಹಲವು ಯೋಧರು ಗಾಯಗೊಂಡಿದ್ದಾರೆ. ಆತ್ಮರಕ್ಷಣೆಗಾಗಿ ಹಾಗೂ ಗುಂಪನ್ನು ಚದುರಿಸಲು ಭದ್ರತಾ ಪಡೆಗಳು ಗುಂಡಿನ ದಾಳಿಯ ಮೊರೆ ಹೋಗಬೇಕಾಯಿತು. ಈ ವೇಳೆ 7 ಮಂದಿ ನಾಗರಿಕರು ಸಾವನ್ನಪ್ಪಿದ್ದಾರೆ. ಈಗಾಗಲೇ ಈ ಬಗ್ಗೆ ಸೂಕ್ತ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು(ಎಸ್‍ಐಟಿ) ರಚಿಸಿದ್ದು, 30 ದಿನಗಳಲ್ಲಿ ಎಸ್‍ಐಟಿ ವರದಿ ಕೊಡಲಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ನೇಪಾಲದಲ್ಲಿ ಮೊದಲ ಬಾರಿಗೆ ಓಮಿಕ್ರಾನ್ ಪ್ರಕರಣ ಪತ್ತೆ – ಇಬ್ಬರಿಗೆ ಸೋಂಕು