ಹೈದರಾಬಾದ್: ಕುಟುಂಬದ ಸದಸ್ಯರ ಜೊತೆ ಸೇರಿಕೊಂಡು ಅಂತರ್ಜಾತಿ ವಿವಾಹವಾಗಿದ್ದಕ್ಕೆ ಮಗಳನ್ನೇ ಪೋಷಕರು ಕೊಲೆ ಮಾಡಿರುವ ಅಮಾನವೀಯ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.
ಹೇಮಾವತಿ ಕೊಲೆಯಾದ ಯುವತಿ. ಎರಡು ವರ್ಷಗಳ ಹಿಂದೆ ಮದುವೆಯಾಗಿದ್ದರೂ ಹೇಮಾವತಿಯ ಅಂತರ್ಜಾತಿ ವಿವಾಹವನ್ನು ಪೋಷಕರು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ. ಹೀಗಾಗಿ ಮಗಳನ್ನು ಕೊಲೆ ಮಾಡಿ ನಂತರ ಆಕೆಯ ಶವವನ್ನು ಗ್ರಾಮದ ಹೊರಗಿನ ಬಾವಿಯಲ್ಲಿ ಎಸೆದಿದ್ದಾರೆ. ಇದೀಗ ಪೊಲೀಸರು ಆಕೆಯ ಪೋಷಕರು ಮತ್ತು ಸಹೋದರಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಏನಿದು ಪ್ರಕರಣ?
ಹೇಮಾವತಿ ಮತ್ತು ಕೇಶವುಲು ಪದವಿ ವ್ಯಾಸಂಗ ಮಾಡುತ್ತಿದ್ದಾಗ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಇವರಿಬ್ಬರ ಪ್ರೀತಿ ವಿಚಾರ ಮನೆಯಲ್ಲಿ ಗೊತ್ತಾಗಿದೆ. ಆದರೆ ಹುಡುಗ ಬೇರೆ ಜಾತಿಯಾಗಿದ್ದರಿಂದ ಕುಟುಂಬದವರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಕೊನೆಗೆ ಮನೆಯವರು ಮದುವೆ ಒಪ್ಪದಿದ್ದಕ್ಕೆ ಓಡಿಹೋಗಿ ಹೇಮಾವತಿ ಪ್ರೀತಿಸಿದ ಹುಡುಗನ ಜೊತೆ ಮದುವೆಯಾಗಿದ್ದಳು. ವಿವಾಹದ ನಂತರ ಹೇಮಾವತಿ ಮತ್ತು ಕೇಶವುಲು ಬೈರೆಡ್ಡಿಪಲ್ಲೆ ವಾಸಿಸುತ್ತಿದ್ದರು. ಕೇಶವುಲು ಆಟೋ ಚಾಲಕನಾಗಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ಹತ್ತು ದಿನಗಳ ಹಿಂದೆ ಹೇಮಾವತಿ ಮಗುವಿಗೆ ಜನ್ಮ ನೀಡಿದ್ದಳು. ಈ ಖುಷಿಯಲ್ಲಿ ಆಕೆ ತನ್ನ ತಂದೆ ಭಾಸ್ಕರ್ ನಾಯ್ಡು ಮತ್ತು ಇತರ ಕುಟುಂಬ ಸದಸ್ಯರು ಮಗುವಾಗಿರುವ ವಿಚಾರ ತಿಳಿದು ತನ್ನನ್ನು ನೋಡಲು ಬರುತ್ತಾರೆ ಎಂದು ಭಾವಿಸಿದ್ದಳು. ಆದರೆ ಶುಕ್ರವಾರ ಹೇಮಾವತಿ ಆಸ್ಪತ್ರೆಯಿಂದ ಹಿಂದಿರುಗುತ್ತಿದ್ದಾಗ ಆಕೆಯ ಪೋಷಕರು, ಸಹೋದರಿ ಮತ್ತು ಇತರ ಪುರುಷ ಸದಸ್ಯರು ಕೇಶವುಲುಗೆ ಹೊಡೆದು, ಮಗುವನ್ನು ಅಲ್ಲೆ ಬಿಟ್ಟು ಹೇಮಾವತಿಯನ್ನು ಬಲವಂತವಾಗಿ ಬೈಕ್ ಮೇಲೆ ಕೂರಿಸಿಕೊಂಡು ಕರೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಹೇಮಾವತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಕತ್ತು ಹಿಸುಕಿ ಕೊಲೆಮಾಡಿದ್ದಾರೆ. ನಂತರ ಮೃತ ದೇಹವನ್ನು ಬಾವಿಯಲ್ಲಿ ಎಸೆದು ಪರಾರಿಯಾಗಿದ್ದಾರೆ. ಇತ್ತ ಪತಿ ಕೇಶವುಲು ಪೊಲೀಸರಿಗೆ ನಡೆದ ಘಟನೆಯ ಬಗ್ಗೆ ತಿಳಿಸಿದ್ದಾನೆ. ತಕ್ಷಣ ಘಟನೆ ನಡೆದ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಆಗ ಬಾವಿಯಲ್ಲಿ ಹೇಮಾವತಿಯ ಮೃತದೇಹ ಪತ್ತೆಯಾಗಿದೆ. ಪೊಲೀಸರು ಮರಣೋತ್ತರ ಪರೀಕ್ಷೆಯ ನಂತರ ಹೇಮಾವತಿಯ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಿದ್ದಾರೆ.
ಈ ಘಟನೆ ತಿಳಿದ ಗ್ರಾಮಸ್ಥರು ಭಾಸ್ಕರ್ ನಾಯ್ಡು ಮನೆಯ ಮೇಲೆ ದಾಳಿ ನಡೆಸಿ, ಬೈಕಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಂತರ ಪೊಲೀಸರು ಹೆಚ್ಚುವರಿ ಪೊಲೀಸ್ ಪಡೆಯನ್ನು ಗ್ರಾಮಕ್ಕೆ ಕರೆಸಿಕೊಂಡು ಅಹಿತಕರ ಘಟನೆ ಸಂಭವಿಸದಂತೆ ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ.
ಸದ್ಯಕ್ಕೆ ಹೇಮಾವತಿ ಪತಿ ಕೇಶವುಲು ನೀಡಿದ ದೂರಿನ ಆಧಾರದ ಮೇರೆಗೆ ನಾವು ಈ ಕುರಿತು ಐಪಿಸಿ ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಈಗಾಗಲೇ ಪೋಷಕರು ಸೇರಿದಂತೆ ಕುಟುಂಬದವರನ್ನು ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರಿಸಿದ್ದೇವೆ ಎಂದು ಇನ್ಸ್ ಪೆಕ್ಟರ್ ತಿಳಿಸಿದ್ದಾರೆ.