ತುಮಕೂರು: ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ್ ಚುನಾವಣೆಗೆ 6 ತಿಂಗಳು ಇರುವಾಗಲೇ ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ. ಕಳೆದ ಬಾರಿ ಸೋಲಿನ ರುಚಿ ಕಂಡ ಕೊರಟಗೆರೆ ಕ್ಷೇತ್ರದಲ್ಲಿ ಕಾರ್ಯಕರ್ತರ ಬೈಕಲ್ಲಿ ಸುತ್ತಾಡುವ ಮೂಲಕ ತಮ್ಮನ್ನು ಬೆಂಬಲಿಸುಂತೆ ಕೇಳಿಕೊಂಡಿದ್ದಾರೆ.
ತಮ್ಮ ಸ್ವಕ್ಷೇತ್ರ ಕೊರಟಗೆರೆಯಲ್ಲಿ ಜನರೊಟ್ಟಿಗೆ ಬೆರೆಯುತಿಲ್ಲ ಎನ್ನುವ ದೂರು ಜೋರಾಗಿಯೇ ಕೇಳಿಬಂದಿತ್ತು. ಆದರೆ ಪರಮೇಶ್ವರ್ ಸಾಹೇಬರು ಮಾತ್ರ ಇದೆಲ್ಲಾ ಸುಳ್ಳು ಎನ್ನುವ ಹಾಗೆ ಕಾರ್ಯಕರ್ತರ ಬೈಕ್ ನಲ್ಲೇ ಕುಳಿತು ಸವಾರಿ ನಡೆಸಿ ಭಾನುವಾರ ಹಲವು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.
ತಾಲೂಕಿನ ದೊಡ್ಡಪಾಲನಹಳ್ಳಿ ಸೇರಿ ಐದಾರು ಹಳ್ಳಿಗಳಿಗೆ ಭೇಟಿ ನೀಡಿದ್ದ ಪರಂ, ಕಾರ್ಯಕರ್ತರ ಬೈಕ್ ಗಳಲ್ಲೇ ಸಂಚರಿಸಿ ಜನರೊಂದಿಗೆ ಕಾಲ ಕಳೆದಿದ್ದಾರೆ. ನಮ್ ಬೈಕ್ ನಲ್ಲಿ ಹತ್ತಿ ನಮ್ ಬೈಕ್ ನಲ್ಲಿ ಹತ್ತಿ ಎಂದು ಹತ್ತಾರು ಮಂದಿ ಪರಮೇಶ್ವರ್ ಗೆ ದುಂಬಾಲು ಬಿದ್ದಿದ್ದರು.
ಯಾರಿಗೂ ನಿರಾಸೆ ಆಗಬಾರದು ಎಂದು ಪರಮೇಶ್ವರ್ ಅವರು ಎಲ್ಲರ ಬೈಕ್ ಏರಿ ಹಳ್ಳಿ ಹಳ್ಳಿಯಲ್ಲಿ ಜಾಲಿಯಾಗಿ ಸುತ್ತಾಡಿದ್ದಾರೆ. ಯಾವಾಗಲೂ ಸೆಕ್ಯೂರಿಟಿ, ಎಸ್ಕಾರ್ಟ್ ಎಂದು ಪರಮೇಶ್ವರ್ ಅವರ ಸುತ್ತಲೂ ಪೊಲೀಸರೇ ಇರುತ್ತಿದ್ದರು. ಆದರೆ ನಿನ್ನೆ ಮಾತ್ರ ಎಲ್ಲರನ್ನು ದೂರ ಕಳಿಸಿ ಜನರೊಂದಿಗೆನೇ ಪರಮೇಶ್ವರ್ ಅವರು ಸುಮಾರು ಹತ್ತು ಬೈಕ್ ನಲ್ಲೇ ಸುತ್ತಾಡಿ ಕ್ಷೇತ್ರದ ಜನರಿಗೆ ಹತ್ತಿರವಾಗಿದ್ದಾರೆ.