ಬ್ರಾಂಡೆಡ್ ಹೆಸರಿನ ಕೊಳಕು ಎಣ್ಣೆಯ ಪಾನಿಪೂರಿ – ಚಪ್ಪರಿಸಿ ತಿನ್ನೋರಿಗೆ ಕಾಯಿಲೆ ಗ್ಯಾರೆಂಟಿ

Public TV
3 Min Read
panipuri sting

ಬೆಂಗಳೂರು: ಚಪ್ಪರಿಸಿ ತಿನ್ನುವ ಗೋಲ್ಗಪ್ಪ, ಕಲರ್‌ಫುಲ್ ಆಗಿ ಕಾಣುವ ಮಸಾಲೆ ಪಾನಿಪೂರಿ, ನೋಡಿದ ತಕ್ಷಣ ಬಾಯಲ್ಲಿ ನೀರು ತರಿಸೋ ಸಮೋಸ ತಿನ್ನೋಕು ಮುಂಚೆ ಹುಷಾರಾಗಿರಿ. ನೀವು ಚಪ್ಪರಿಸಿ ತಿನ್ನುವ ಪಾನಿಪೂರಿ ಅಸಲಿಯತ್ತನ್ನ ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ಬಟಾಬಯಲು ಮಾಡಿದೆ.

ಬೇಸಿಗೆ ಶುರು ಆಯ್ತು ಬಾಯಿ ಸುಮ್ಮನಿರಲ್ಲ ಹಣ್ಣು, ಹಂಪಲು ತಿನ್ನಲು ಹೋದರೆ ಸ್ವಲ್ಪ ದುಬಾರಿ. ಅದಕ್ಕೆ ಸಂಜೆ ಆದ ಕೂಡಲೇ ಸ್ನಾಕ್ಸ್ ನೆನಪಿಗೆ ಬರತ್ತೆ. ಆಗ ತಿಂಡಿ ಪ್ರಿಯರು ಗೋಲ್ಗಪ್ಪ, ಪಾನಿಪುರಿ, ಸಮೋಸಾ ಅಂತ ಹುಡುಕಿಕೊಂಡು ಹೋಗುತ್ತಾರೆ. ಆದರೆ ಗೋಲ್ಗಪ್ಪ ಅದೇ ಮಡಿಕೆ ಪಾನಿ, ವಿಧವಿಧವಾಗಿ ಎಣ್ಣೆಯಲ್ಲಿ ಕರಿದ ಪೂರಿ ಜೊತೆಗೆ ನೋಡೋಕು ಸಖತ್ ಕಲರ್‌ಫುಲ್ ಆಗಿರುತ್ತೆ. ಆದರೆ ಅದೆಲ್ಲಿ ತಯಾರಾಗುತ್ತೆ? ಹೇಗೆ ತಯಾರಾಗುತ್ತೆ? ಯಾರು ತಯಾರು ಮಾಡ್ತಾರೆ? ಎನ್ನೋದನ್ನ ನೋಡಿದರೆ ಮತ್ತೆ ಬೇಡಪ್ಪ ಎನ್ನುತ್ತಿರ.

panipuri sting 2

ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆ ಮಾಡಿ ಪಾನಿಪೂರಿಗೆ ಬಳಸುವ ಪೂರಿ ಎಲ್ಲಿ ತಯಾರು ಮಾಡುತ್ತಾರೆ? ಹೇಗೆ ಮಾಡುತ್ತಾರೆ ಅನ್ನೋದನ್ನ ಬಿಚ್ಚಿಟ್ಟಿದೆ. ಪಬ್ಲಿಕ್ ಟಿವಿ ತಂಡ ಪೂರಿ ತಯಾರು ಮಾಡುವ ವ್ಯಾಪಾರಿ ಬಳಿ ಹೋಗಿ ಇದನ್ನು ಎಲ್ಲಿ ತಯಾರಿಸುತ್ತೀರಾ? ಯಾವ ಎಣ್ಣೆ ಹಾಕುತ್ತೀರಾ? ಬಿಳಿ ಪೂರಿಗಳು ಬೇಕಿತ್ತು ಎಂದು ಗ್ರಾಹಕರ ಸೋಗಿನಲ್ಲಿ ಹೋಗಿ ವಿಚಾರಿಸಿದರು. ಈ ವೇಳೆ ವ್ಯಾಪಾರಿ ನಾವು ಇಲ್ಲಿಯೇ ಪೂರಿ ತಯಾರಿಸುತ್ತೇವೆ. ಒಳ್ಳೆ ಎಣ್ಣೆ ಹಾಕಿ ಪೂರಿ ತಯಾರಿಸಲಾಗುತ್ತೆ ಎಂದಿರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.

panipuri sting 5

ನಾವು ತಿನ್ನುವ ಪೂರಿಯನ್ನು ಕರಿಯುವ ಎಣ್ಣೆ ಮತ್ತು ಎಣ್ಣೆ ತುಂಬಿಸೋ ಡ್ರಮ್‍ಗಳು, ಆ ಪೂರಿ ತುಂಬಿರೊ ಬ್ಯಾಗ್‍ಗಳನ್ನು ನೋಡಿದರೆ ಇನ್ನೊಂದು ಸಲ ತಿನ್ನಬೇಕು ಅನಿಸಲ್ಲ. ಆದರೆ ವ್ಯಾಪಾರಿ ಮಾತ್ರ ಇದು ಬ್ರಾಂಡೆಡ್ ಎಣ್ಣೆ ಎಂದು ವಾದಿಸುತ್ತಾನೆ. ಆ ಪೂರಿಯನ್ನ ಲಟ್ಟಿಸಿ ರೋಲ್ ಮಾಡೋ ಮಷಿನ್‍ಗೆ ಎಣ್ಣೆ ಸುರಿಯೋದನ್ನ ನೋಡಿಬಿಟ್ಟರೆ ಅಯ್ಯೋ ಶಿವನೆ ಇದನ್ನ ಇಷ್ಟು ದಿನ ತಿನ್ನುತ್ತಿದ್ದಿದ್ದು ಅನ್ನಿಸಿಬಿಡುತ್ತೆ.

ಅಯ್ಯೋ ಅದು ಬಿಡಿ ನಮಗೆ ಕೊಡ್ಬೇಕಾದ್ರೆ ಸ್ವಚ್ಛ ಜಾಗದಲ್ಲಿ, ಸ್ಚಚ್ಛ ಕೈ ಇದ್ದರೆ ಸಾಕು ಅನ್ನೋರು ಮಡಿಕೆ ಪಾನಿ ಮಾರಾಟ ಮಾಡೋ ಜಾಗ ನೋಡಿದರೆ ಸುಸ್ತಾಗುತ್ತೀರಿ.

panipuri sting 4

ಬೆಂಗಳೂರಿನ ಹೃದಯಭಾಗ ಅಂತ ಕರೆಸಿಕೊಳ್ಳೊ ಮೆಜೆಸ್ಟಿಕ್‍ನಲ್ಲಿ ಈ ತರದ ಸ್ನಾಕ್ಸ್ ಮಾರುವವರೂ ಕಡಿಮೆ ಇಲ್ಲ, ತಿನ್ನೋರಿಗೂ ಬರ ಇಲ್ಲ. ಏನ್ರೀ ಇಷ್ಟೊಂದು ಕೊಳಕು ಅಂತ ಪ್ರಶ್ನಿಸಿದರೆ ವ್ಯಾಪಾರಿ ಸುಳ್ಳಿನ ಕಂತೆಯನ್ನೆ ಕಟ್ಟುತ್ತಾರೆ. ತಿಂಡಿ ಪ್ಲೇಟ್‍ಗಳನ್ನು ತೊಳೆಯಲು ಬೇರೆ ಕಡೆ ವ್ಯವಸ್ಥೆ ಇದೆ. ನಾವು ಗ್ರಾಹಕರಿಗೆ ಕುಡಿಯಲು ಬಿಸ್ಲೆರಿ ನೀರು ಕೊಡ್ತೀವಿ. ಕುಡಿಯೋ ನೀರಲ್ಲಿ ಪ್ಲೇಟ್ ತೊಳೆಯೊಲ್ಲ. ಹಾಗೆ ಮಾಡಿದರೆ ಬರುವವರು ಬರಲ್ಲ. ನಮ್ಮ ಅಂಗಡಿ ಇದೆ ಅಲ್ಲೇ ನಾವು ಪ್ಲೇಟ್ ತೊಳೆಯುತ್ತೇವೆ, ಒಮ್ಮೊಮ್ಮೆ ಪ್ಲೇಟ್ ತೊಳಿಯೋಕೆ ಮಿನರಲ್‍ವಾಟರ್ ಬಳಸ್ತೀವಿ ಎಂದು ಕಥೆ ಬಿಡುತ್ತಾರೆ.

panipuri sting 3

ಇತ್ತ ಮಲ್ಲೇಶ್ವರಂ ಹೈಟೆಕ್ ಏರಿಯಾ, ಆದರೆ ಅಲ್ಲಿಯೂ ಅಷ್ಟೇ ಕೈಗೆ ಗ್ಲೌಸ್ ಹಾಕಲ್ಲ, ಅಂಗಡಿ ಹಾಕಿರುವ ಸ್ಥಳ ಸ್ವಚ್ಛ ಇರಲ್ಲ. ಪಾನಿಗೆ ಕೈ ಹಾಕಿ ಹಾಕಿ ಕೊಳೆಯಾಗಿಯೇ ಕಾಯಿಲೆ ತರೋ ಪೂರಿ ಕೊಡ್ತಾರೆ. ಕಸದ ರಾಶಿ ಪಕ್ಕನೇ ಪಾನಿಪೂರಿಯನ್ನ ಗ್ರಾಹಕರಿ ಸವಿಯಬೇಕಿದೆ.

ಪಾನಿ ಮೊದಲೇ ಬಿಸಿ ಇರಲ್ಲ. ಹಾಗಾಗಿ ರೋಗಾಣುಗಳು ಬೇಗ ಸೇರಿಕೊಂಡು ಬಿಡುತ್ತವೆ. ಅಲ್ಲದೇ ಗೋಲ್ಗಪ್ಪ ತಿನ್ನುವಾಗ ಗಮನಿಸಿ, ಸರಿಯಾಗಿ ಪೂರಿಗಳನ್ನ ಮುಚ್ಚಿರಲ್ಲ, ಪಾನಿ ಡಬ್ಬ ಓಪನ್ ಆಗಿ ಧೂಳು ಬಂದು ಸೇರಿ ಬಿಟ್ಟಿರುತ್ತದೆ. ಸ್ವಚ್ಛತೆ ಇಲ್ಲದಿದ್ದರೂ ಇದನ್ನ ತಿನ್ನೊರ ಸಂಖ್ಯೆಯನ್ನು ಕಡಿಮೆ ಆಗಿಲ್ಲ. ಇನ್ನೂ ನಾವೇ ತಿಂದಿರೋ ಸ್ನಾಕ್ಸ್ ಪ್ಲೇಟನ್ನು ಎಲ್ಲಿ ತೊಳೆಯುತ್ತಾರೆ ಅನ್ನೋದನ್ನ ನೋಡಿದರೆ ಬೆಚ್ಚಿ ಬೀಳ್ತೀರಿ. ಒಂದು ಬಕೆಟ್‍ನಲ್ಲಿ ನೀರಿಟ್ಟು ಅದರಲ್ಲೇ ಮತ್ತೆ ಮತ್ತೆ ಪ್ಲೇಟ್‍ಗಳನ್ನು ತೊಳೆಯುತ್ತಾರೆ.

panipuri sting 1

ನೀರು, ಸ್ವಚ್ಛತೆ ಕೊರತೆಯೇ ಮನುಷ್ಯರ ಕಾಯಿಲೆಗಳಿಗೆ ಕಾರಣವಾಗಿದೆ. ಈ ರೀತಿ ಸ್ವಚ್ಛವಿಲ್ಲದ ಪೂರಿ ರುಚಿ ನಿಮಗೆ ಹಲವು ಕಾಯಿಲೆಗಳನ್ನ ತರುತ್ತೆ ಎಂದು ವೈದ್ಯರು ಹೇಳಿದ್ದಾರೆ. ಜಾಂಡೀಸ್, ಟೈಫಾಯ್ಡ್, ಕಾಲರಾ, ಹೊಟ್ಟೆ ನೋವು, ಗ್ಯಾಸ್‍ಸ್ಟ್ರಿಕ್ ಸಮಸ್ಯೆ, ಅಲರ್ಜಿ, ಸೋಂಕುಗಳು ಬೇಗ ಹರಡುತ್ತೆ. ವಾಂತಿ, ಬೇಧಿ, ದೊಡ್ಡ – ಸಣ್ಣ ಕರುಳು ತೊಂದರೆ ಉಂಟಾಗುತ್ತೆ.

Share This Article
Leave a Comment

Leave a Reply

Your email address will not be published. Required fields are marked *