ಬೆಳಗಾವಿ: ತಾಲೂಕಿನ ಸುವರ್ಣಸೌಧ (Suvarna Soudha) ಹೊರವಲಯದಲ್ಲಿ ಡಿಸೆಂಬರ್ 22 ರಂದು ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ (Panchamasali Reservation) ಆಗ್ರಹಿಸಿ ಅಂತಿಮ ಹಂತದ ಹೋರಾಟ ಹಿನ್ನೆಲೆ ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಸ್ವಾಮೀಜಿ (Jayamruthyunjaya Swamiji) ಸ್ಥಳ ಪರಿಶೀಲನೆ ನಡೆಸಿದರು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಡಿಸೆಂಬರ್ 19 ರೊಳಗೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಘೋಷಣೆ ಮಾಡುವಂತೆ ಮತ್ತೊಮ್ಮೆ ಆಗ್ರಹಿಸಿದ್ದಾರೆ. ಡಿಸೆಂಬರ್ 19 ರೊಳಗೆ ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ವರದಿ ಪಡೆದು ಮೀಸಲಾತಿ ಘೋಷಣೆ ಮಾಡಬೇಕು. ಒಂದು ವೇಳೆ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಘೋಷಿಸದಿದ್ರೆ ಡಿಸೆಂಬರ್ 22 ರಂದು ವಿರಾಟ್ ಪಂಚಶಕ್ತಿ ಸಮಾವೇಶ ಮಾಡಲಾಗುವುದಾಗಿ ಸ್ವಾಮೀಜಿ ತಿಳಿಸಿದ್ದಾರೆ. ಮೀಸಲಾತಿ ಘೋಷಿಸಿದ್ರೂ, ಘೋಷಿಸದಿದ್ದರೂ 25 ಲಕ್ಷ ಪಂಚಮಸಾಲಿ ಸಮುದಾಯದ ಜನರ ಸೇರಿಸಲು ಸಿದ್ಧತೆ ನಡೆಸಲಾಗಿದ್ದು, ಸುವರ್ಣಸೌಧ ಬಳಿ ನೂರು ಎಕರೆ ಸ್ಥಳದಲ್ಲಿ ಪಂಚಮಸಾಲಿ ಸಮಾವೇಶಕ್ಕೆ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಇದನ್ನೂ ಓದಿ: ಗಡಿ ವಿವಾದದ ನಡುವೆಯೂ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಭೇಟಿ
ಮೀಸಲಾತಿ ನೀಡಿದರೆ ಡಿಸೆಂಬರ್ 22 ರಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಅವರಿಗೆ ಸನ್ಮಾನ ಮಾಡಲಾಗುವುದು. ಇಲ್ಲವಾದಲ್ಲಿ ಡಿಸೆಂಬರ್ 22 ರಂದು ಅಂತಿಮ ಹಂತದ ಹೋರಾಟ ನಡೆಸುವುದಾಗಿ ಎಚ್ಚರಿಕೆಯನ್ನು ರವಾನಿಸಿದ್ದಾರೆ. ಡಿಸೆಂಬರ್ 19ರ ಸಂಜೆ ಸವದತ್ತಿಯಲ್ಲಿ ಪಂಚಮಸಾಲಿ ಸಮಾವೇಶ ನಡೆಯಲಿದ್ದು, ಅಂದೇ ಸವದತ್ತಿಯಿಂದ ಪಾದಯಾತ್ರೆ ಮೂಲಕ ಬೆಳಗಾವಿಯ ಸುವರ್ಣಸೌಧಕ್ಕೆ ಬರಲು ನಿರ್ಧರಿಸಿರುವುದಾಗಿ ಬಸವ ಜಯಮೃತ್ಯುಂಜಯ ಸ್ಚಾಮೀಜಿ ಹೇಳಿದರು. ಇದನ್ನೂ ಓದಿ: 5 ಮತ್ತು 8ನೇ ತರಗತಿಗಳಿಗೂ ವಿಶೇಷ ವಾರ್ಷಿಕ ಪರೀಕ್ಷೆ – ಶಿಕ್ಷಣ ಇಲಾಖೆ ಆದೇಶ
ಡಿಸೆಂಬರ್ 19ರ ರಾತ್ರಿಯಿಂದ ಡಿಸೆಂಬರ್ 22ರ ಬೆಳಗ್ಗೆವರೆಗೆ ಸ್ವಾಮೀಜಿ ಅವರ ನೇತೃತ್ವದಲ್ಲಿ ಪಾದಯಾತ್ರೆ ನಡೆಯಲಿದ್ದು, ಈ ಮೂಲಕ ಸುವರ್ಣಸೌಧಕ್ಕೆ ಆಗಮಿಸುವುದಾಗಿ ತಿಳಿಸಿದ್ದಾರೆ. ಅಲ್ಲದೇ ಡಿಸೆಂಬರ್ 22ರಂದು 25 ಲಕ್ಷ ಜನರ ಸೇರಿಸಲು ತಯಾರಿ ನಡೆಸುತ್ತಿರುವುದಾಗಿ ಹೇಳಿದ ಅವರು, ಕಮಕಾರಟ್ಟಿ ಗ್ರಾಮದ ಬಳಿ 60 ಎಕರೆ ವಿಸ್ತೀರ್ಣದಲ್ಲಿರುವ ನಿರ್ಮಾಣ ಹಂತದ ರಾಘವೇಂದ್ರ ಬಡಾವಣೆಯಲ್ಲಿ ಸಮಾವೇಶಕ್ಕೆ ತಯಾರಿ ನಡೆಸಿದ್ದಾಗಿ ಮಾಹಿತಿ ನೀಡಿದ್ದಾರೆ. ವಿರಾಟ್ ಪಂಚಶಕ್ತಿ ಸಮಾವೇಶದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಮಾಜಿ ಸಚಿವ ಎಂ.ಬಿ.ಪಾಟೀಲ್, ಕಾರ್ಯಾಧ್ಯಕ್ಷರಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಕೋಶಾಧ್ಯಕ್ಷರಾಗಿ ಈರಣ್ಣ ಕಡಾಡಿ ಅವರನ್ನು ನೇಮಕ ಮಾಡಲಾಗಿದೆ. ಅಲ್ಲದೇ ಸಮುದಾಯದ ಹಾಲಿ ಮತ್ತು ಮಾಜಿ ಶಾಸಕರಿಗೆ ವಿವಿಧ ಜವಾಬ್ದಾರಿ ಹಂಚಿಕೆಗಳನ್ನು ಈಗಾಗಲೇ ನೀಡಲಾಗಿದೆ ಎಂದರು.