ಬೆಂಗಳೂರು: ಮಕ್ಕಳ ಶೈಕ್ಷಣಿಕ ಗುಣಮಟ್ಟ ಅಳೆಯಲು ಇನ್ಮುಂದೆ 5 ಮತ್ತು 8ನೇ ತರಗತಿಗಳಿಗೂ ವಿಶೇಷ ವಾರ್ಷಿಕ ಪರೀಕ್ಷೆ (Annual Examination) ನಡೆಸಲು ಶಿಕ್ಷಣ ಇಲಾಖೆ ನಿರ್ಧಾರ ಮಾಡಿದೆ. ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆ (Education Department) ಅಧಿಕೃತ ಆದೇಶ ಹೊರಡಿಸಿದೆ.
ಮೌಲ್ಯಾಂಕನ ಪರೀಕ್ಷೆ ಹೆಸರಿನಲ್ಲಿ ಈ ಪರೀಕ್ಷೆ ನಡೆಯಲಿದೆ. ಮಕ್ಕಳ ಕಲಿಕಾ ಕೊರತೆ ನೀಗಿಸಲು ಕಲಿಕೆಯಲ್ಲಿ ಚೇತರಿಕೆ ಮೂಡಿಸಲು ಇಲಾಖೆ ಈ ನಿರ್ಧಾರ ಮಾಡಿದೆ. ಕ್ಲಸ್ಟರ್ ಹಂತದಲ್ಲಿ ಪರೀಕ್ಷಾ ವ್ಯವಸ್ಥೆಗಳು ನಡೆಯಲಿದೆ.
ಕರ್ನಾಟಕ ಶಾಲಾ ಪರೀಕ್ಷಾ (School Exams) ಮತ್ತು ಮೌಲ್ಯ ನಿರ್ಣಯ ಮಂಡಳಿ ಪರೀಕ್ಷೆಯ ಸಂಪೂರ್ಣ ಜವಾಬ್ದಾರಿ ವಹಿಸಲಿದೆ. ರಾಜ್ಯ ಪಠ್ಯ ಕ್ರಮದ ವಿದ್ಯಾರ್ಥಿಗಳ ಕಲಿಕಾ ಸಾಧನೆ ಯಾವ ರೀತಿ ಇದೆ ಎಂಬುದನ್ನು ಅಳೆಯಲು ಈ ವಾರ್ಷಿಕ ಪರೀಕ್ಷೆ ಮಾಡಲಾಗ್ತಿದೆ. ಇದನ್ನೂ ಓದಿ: ಅಕ್ರಮವಾಗಿ ಕಲ್ಲು ತುಂಬಿಕೊಂಡು ಹೋಗುತ್ತಿದ್ದ ಲಾರಿ ಹರಿದು ವಿದ್ಯಾರ್ಥಿ ಸ್ಥಳದಲ್ಲೇ ಸಾವು
ಯಾವುದೇ ವಿದ್ಯಾರ್ಥಿಗಳನ್ನ ಈ ಪರೀಕ್ಷೆಯಲ್ಲಿ ಫೇಲ್ ಮಾಡೋದಿಲ್ಲ. ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆಯೋ ವಿದ್ಯಾರ್ಥಿಗಳಿಗೆ (Students) ವಿಶೇಷ ತರಬೇತಿ ನೀಡುವ ವ್ಯವಸ್ಥೆ ಇಲಾಖೆ ಮಾಡಿಕೊಳ್ಳಲಿದೆ. ಮಕ್ಕಳ ಕಲಿಕೆ ಗುಣಮಟ್ಟ ಏನು? ಕೊರತೆಗಳೇನು? ಯಾವ ವಿಷಯಗಳಲ್ಲಿ ಹಿನ್ನಡೆಯಾಗಿದೆ ಎಂಬುದನ್ನು ತಿಳಿಯಲು ಈ ಪರೀಕ್ಷೆಯಿಂದ ಸಹಕಾರಿಯಾಗಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಪರೀಕ್ಷಾ ವ್ಯವಸ್ಥೆ ಹೇಗೆ?
ರೂಪಣಾತ್ಮಕ ಪರೀಕ್ಷೆ ಮತ್ತು ಸಂಕಲನಾತ್ಮಕ ಪರೀಕ್ಷೆ ವಿಧಾನದಲ್ಲಿ ಪರೀಕ್ಷೆ ನಡೆಯಲಿದೆ. ಕ್ಲಸ್ಟರ್ ಹಂತದಲ್ಲಿ ಈ ಪರೀಕ್ಷೆಗಳನ್ನ ನಡೆಸಲಾಗುತ್ತದೆ. ಪರೀಕ್ಷಾ ಪ್ರಕ್ರಿಯೆಗೆ ವಿದ್ಯಾರ್ಥಿಗಳಿಂದ ಯಾವುದೇ ಶುಲ್ಕ ಪಡೆಯುವಂತಿಲ್ಲ. ಇದನ್ನೂ ಓದಿ: ತಂದೆಯನ್ನ ಕೊಂದು 20 ತುಂಡು ಮಾಡಿ ಕೊಳವೆ ಬಾವಿಗೆ ಬಿಸಾಡಿದ ಪಾಪಿ ಮಗ
8ನೇ ತರಗತಿಗೆ ಒಂದು ಪರೀಕ್ಷಾ ಕೇಂದ್ರಕ್ಕೆ 50 ಮಕ್ಕಳು ಇರುವಂತೆ, 5ನೇ ತರಗತಿಗೆ 25 ಮಕ್ಕಳು ಒಂದು ಕೇಂದ್ರಕ್ಕೆ ಇರುವಂತೆ ಪರೀಕ್ಷಾ ಕೇಂದ್ರ ಸ್ಥಾಪನೆ ಮಾಡಬೇಕು. ಮಕ್ಕಳ ಸಂಖ್ಯೆ ಕಡಿಮೆಯಿದ್ದರೆ 2 ಕಿಮೀ ವ್ಯಾಪ್ತಿಯ ಶಾಲೆಗಳನ್ನ ಒಳಪಡಿಸಿಕೊಳ್ಳುವುದು. ಪರೀಕ್ಷಾ ಕೇಂದ್ರ ಸ್ಥಾಪನೆಗೆ ಡಯಟ್ ಪ್ರಾಂಶುಪಾಲರು, ಬಿಇಓಗಳು ಚರ್ಚಿಸಿ ನಿರ್ಧಾರ ಮಾಡಬೇಕು. ಕ್ಲಸ್ಟರ್ ವ್ಯಾಪ್ತಿಯಲ್ಲಿ ಶಿಕ್ಷಕರನ್ನ ಅದಲು ಬದಲು ಮಾಡಬೇಕು. ಶಾಲಾ ಹಂತದಲ್ಲಿ ಪರೀಕ್ಷೆ ಪ್ರವೇಶ ಪತ್ರಗಳನ್ನ ಮುಖ್ಯಶಿಕ್ಷಕರು ವಿತರಿಸಬೇಕು.
50 ಅಂಕಗಳ ಪರೀಕ್ಷೆ. 2 ಗಂಟೆ ಪರೀಕ್ಷೆ ಬರೆಯಲು ಅವಕಾಶ ಕೊಡಬೇಕು. 50 ಅಂಕದಲ್ಲಿ 40 ಅಂಕ ಲಿಖಿತ ಪರೀಕ್ಷೆ, 10 ಅಂಕ ಮೌಖಿಕ ಪರೀಕ್ಷೆ ನಡೆಸುವುದು. ಪ್ರಶ್ನೆ ಪತ್ರಿಕೆ ಮುದ್ರಣವನ್ನ ಕರ್ನಾಟಕ ಶಾಲಾ ಪರೀಕ್ಷಾ ಮತ್ತು ಮೌಲ್ಯ ನಿರ್ಣಯ ಮಂಡಳಿ ಮುದ್ರಿಸುತ್ತದೆ. ಜಿಲ್ಲಾ ಡಯಟ್ ಗಳಿಗೆ ಇದು ಹಂಚಿಕೆಯಾಗಲಿದೆ. ಇದರ ಉಸ್ತುವಾರಿ ಬಿಇಓ ಆಗಿರುತ್ತಾರೆ. ಸಂಕಲನಾತ್ಮಕ ಮತ್ತು ರೂಪಣಾತ್ಮಕ ಸೇರಿ 100 ಅಂಕಗಳಿಗೆ ಪರೀಕ್ಷೆ ಇರಲಿದೆ. 35 ಅಂಕ ಪಡೆದ ವಿದ್ಯಾರ್ಥಿ ಪ್ರಗತಿ ಸಾಧಿಸಿರುವ ವಿದ್ಯಾರ್ಥಿ ಅಂತ ಘೋಷಣೆ ಮಾಡಲಾಗುತ್ತದೆ. ಕಡಿಮೆ ಅಂಕ ಪಡೆದ ವಿದ್ಯಾರ್ಥಿ ಫೇಲ್ ಮಾಡದೇ ಪ್ರಗತಿ ಸಾಧಿಸಬೇಕಾದ ವಿದ್ಯಾರ್ಥಿ ಅಂತ ಪರಿಗಣಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದೆ.