ಬೆಂಗಳೂರು: ಚುನಾವಣೆ ನೀತಿ ಸಂಹಿತೆ (Model Code of Conduct) ಇರುವುದರಿಂದ ಈಗ ಮೀಸಲಾತಿ (Reservation) ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಪಂಚಮಸಾಲಿಗಳಿಗೆ 2ಎ ಮೀಸಲಾತಿ ಬೇಡಿಕೆ ಇಟ್ಟ ನಿಯೋಗಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ತಿಳಿಸಿದ್ದಾರೆ.
ಜಯ ಮೃತ್ಯುಂಜಯ ಸ್ವಾಮೀಜಿ (Jaya Mrityunjaya Swamiji) ನೇತೃತ್ವದ ನಿಯೋಗ ಇಂದು ಸಿಎಂ ಸಿದ್ದರಾಮಯ್ಯ ಜೊತೆ ಸಭೆ ನಡೆಸಿತು. ಈ ವೇಳೆ ಮಾತನಾಡಿದ ಸಿಎಂ, ಪ್ರವರ್ಗ-2ಎ ಅಡಿ ಮೀಸಲಾತಿ ಒದಗಿಸುವಂತೆ ಪಂಚಮಸಾಲಿ ಲಿಂಗಾಯತ ಸಮುದಾಯದ ಬೇಡಿಕೆ ಕುರಿತು ಕಾನೂನು ಪ್ರಕಾರ, ಸಂವಿಧಾನದ ಆಶಯಕ್ಕೆ ಅನುಗುಣವಾಗಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಸರ್ಕಾರ ಮೀಸಲಾತಿ ವಿಷಯದಲ್ಲಿ ಮುಕ್ತ ಮನಸ್ಸು ಹೊಂದಿದೆ. ನಮ್ಮ ಸರ್ಕಾರ ಸಾಮಾಜಿಕ ನ್ಯಾಯದ ಪರವಾಗಿದೆ. ಎಲ್ಲಾ ದುರ್ಬಲ ವರ್ಗದವರಿಗೂ ನ್ಯಾಯ ದೊರೆಯಬೇಕು ಎಂಬುವುದು ನಮ್ಮ ಸರ್ಕಾರದ ನಿಲುವು. ಶಾಶ್ವತವಾದ ಹಿಂದುಳಿದ ವರ್ಗಗಳ ಆಯೋಗವಿದೆ. ಅದರ ಅಂತಿಮ ಶಿಫಾರಸ್ಸು ಇನ್ನೂ ನಮ್ಮ ಕೈಗೆ ತಲುಪಿಲ್ಲ. ಚುನಾವಣೆ ನೀತಿ ಸಂಹಿತೆ ಇರುವುದರಿಂದ ಮೀಸಲಾತಿ ಕುರಿತಾಗಿ ಅಡ್ವೊಕೇಟ್ ಜನರಲ್, ಕಾನೂನು ಇಲಾಖೆ, ತಜ್ಞರೊಂದಿಗೆ, ಸಂಪುಟದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಈಗಲೇ ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ ಎಂದರು. ಇದನ್ನೂ ಓದಿ: MUDA Scam| ಸಿಎಂ ತಕ್ಷಣ ರಾಜೀನಾಮೆ ನೀಡಬೇಕು, ಸಿಬಿಐಗೆ ನೀಡದಿದ್ರೆ ಕೇಸ್ ಮುಚ್ಚಿ ಹಾಕ್ತಾರೆ: ಛಲವಾದಿ ನಾರಾಯಣಸ್ವಾಮಿ
ಯಾವುದೇ ತೀರ್ಮಾನ ಕೈಗೊಳ್ಳುವುದಿದ್ದರೂ, ಕಾನೂನು ಪ್ರಕಾರ ಪ್ರಾಮಾಣಿಕವಾಗಿ ಕೈಗೊಳ್ಳಲಾಗುವುದು. ಮೀಸಲಾತಿ ಕುರಿತು ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಮುಂದೆ ಪ್ರಸ್ತಾವನೆ ಸಲ್ಲಿಸಬೇಕು. ಅದರ ಶಿಫಾರಸು ಅನ್ವಯ ಕ್ರಮ ಕೈಗೊಳ್ಳಬೇಕು ಎಂದು ಈ ಹಿಂದೆ ಪಂಚಮಸಾಲಿ ಸಮುದಾಯದ ಮುಖಂಡರು ಭೇಟಿಯಾದಾಗ ನಾನು ಸಲಹೆ ನೀಡಿದ್ದೆ. ಯಾವುದೇ ತೀರ್ಮಾನ ನ್ಯಾಯಯುತವಾಗಿ ಎಲ್ಲರಿಗೂ ಒಪ್ಪಿತವಾಗುವಂತೆ, ನ್ಯಾಯಾಲಯಕ್ಕೂ ಒಪ್ಪಿಗೆಯಾಗುವಂತಿರಬೇಕು ಎಂದು ಹೇಳಿದರು.
ಹಿಂದಿನ ಸರ್ಕಾರ ನಿಮ್ಮ ಮನವಿ ಮೇರೆಗೆ 2ಸಿ ಮತ್ತು 2ಡಿ ಹೊಸ ಪ್ರವರ್ಗ ಮಾಡಿತು. 3ಎ ನಲ್ಲಿರುವ ಒಕ್ಕಲಿಗರನ್ನು 2ಸಿಗೆ ಸೇರಿಸುವುದು. 3ಬಿಯಲ್ಲಿರುವ ಲಿಂಗಾಯತರನ್ನು 2ಡಿಗೆ ಸೇರಿಸುವ ಪ್ರಸ್ತಾಪ ಮುಂದುವರಿಸಿತು. ಮುಸ್ಲಿಮರ ಮೀಸಲಾತಿಯನ್ನು ತೆಗೆದು ಹಾಕಿತ್ತು. ಮುಸ್ಲಿಮರು ಇದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದಾಗ ಯಥಾಸ್ಥಿತಿ ಮುಂದುವರೆಸಲು ರಾಜ್ಯ ಸರ್ಕಾರ ಒಪ್ಪಿಕೊಂಡಿತ್ತು. ಆದ್ದರಿಂದ ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿದೆ. ಈಗ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ. ಆದರೆ ಪೂರ್ವ ನಿಗದಿಯಂತೆ ಸಮುದಾಯದ ಮುಖಂಡರೊಂದಿಗೆ ಇಂದು ಸಭೆ ನಡೆಸಲಾಗಿದೆ ಅಂತ ತಿಳಿಸಿದರು.