ಮೈಸೂರು: ಜನರು ರಸ್ತೆಗಳಲ್ಲಿ ಕಸ ಹಾಕುವುದನ್ನು ತಡೆಯುವ ಉದ್ದೇಶದಿಂದ ಮೈಸೂರು ಮಹಾನಗರ ಪಾಲಿಕೆ ಸದಸ್ಯರೊಬ್ಬರು ಗಾಂಧಿಗಿರಿ ಶುರು ಮಾಡಿದ್ದಾರೆ.
ವಾರ್ಡ್ ನಂಬರ್ 10ರ ಪಾಲಿಕೆ ಸದಸ್ಯ ಸುನೀಲ್ ಎಂಬವರು ಜನರು ಹೆಚ್ಚಾಗಿ ಕಸ ಹಾಕುವ ಪ್ರದೇಶದಲ್ಲಿ ರಾತ್ರಿ-ಹಗಲು ಕುಳಿತು ಗಾಂಧಿಗಿರಿಯನ್ನು ಆರಂಭಿಸಿದ್ದಾರೆ. ಚೆನ್ನಾಗಿರುವ ಸ್ಥಳವನ್ನೇ ಕಸ ಹಾಕುವ ಜಾಗ ಮಾಡಿಕೊಂಡಿದ್ದ ಸ್ಥಳೀಯರಿಗೆ ಎಷ್ಟು ಬಾರಿ ಮನವಿ ಮಾಡಿದರೂ ಕಸ ಹಾಕುವುದನ್ನು ಮಾತ್ರ ನಿಲ್ಲಿಸಿಲ್ಲ. ಇದರಿಂದ ಗಾಂಧಿಗಿರಿ ಶುರು ಮಾಡಿದೆ ಎಂದು ಪಾಲಿಕೆ ಸದಸ್ಯ ಸುನೀಲ್ ಅವರು ಹೇಳಿದ್ದಾರೆ.
ನಗರದ ವಿದ್ಯಾರಣ್ಯಪುರಂನಲ್ಲಿ ಸಿಕ್ಕ-ಸಿಕ್ಕಲ್ಲಿ ಕಸ ಹಾಕುವ ಸ್ಥಳವನ್ನು ಸದಸ್ಯರೇ ಸಂಪೂರ್ಣವಾಗಿ ಸ್ವಚ್ಛ ಮಾಡಿ ರಂಗೋಲಿ ಬಿಡಿಸಿದ್ದಾರೆ. ನಂತರ ಅದೇ ಸ್ಥಳದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕಬೇಡಿ ಎಂದು ಬೋರ್ಡ್ ಹಿಡಿದು ಕುಳಿತಿದ್ದಾರೆ. ಸುನೀಲ್ ಅವರಿಗೂ ಕೆಲವು ಸ್ಥಳೀಯರು ಸಾಥ್ ನೀಡಿ ಜೊತೆಗೆ ಕುಳಿತಿದ್ದಾರೆ. ಬೆಳಗ್ಗೆಯಿಂದ ಅದೇ ಸ್ಥಳದಲ್ಲಿ ಕುಳಿತು ಜನರು ಕಸ ಹಾಕುವುದನ್ನು ತಪ್ಪಿಸುವ ಪ್ರಯತ್ನ ಆರಂಭಿಸಿದ್ದಾರೆ. ಈ ಪ್ರಯತ್ನ ಮಧ್ಯರಾತ್ರಿವರೆಗೂ ಮುಂದುವರಿಯಲಿದೆ.
ಇದನ್ನು ಓದಿ: ಮೈಸೂರಲ್ಲಿ ಸಾರ್ವಜನಿಕ ಸ್ಥಳದಲ್ಲಿ ಸುಸು ಮಾಡಿದವರಿಗೆ ಸನ್ಮಾನ – ಕ್ಲೀನ್ ಸಿಟಿ ಹೆಸರುಳಿಸಲು ಅಭಿಯಾನ