ಇಸ್ಲಾಮಾಬಾದ್: ಕಾಶ್ಮೀರದಲ್ಲಿ (Kashmir) ನಡೆದ ಹಿಂದೂಗಳ ನರಮೇಧಕ್ಕೆ ಭಾರತ ಪ್ರತೀಕಾರದ ದಾಳಿ ನಡೆಸಿದೆ. ʻಆಪರೇಷನ್ ಸಿಂಧೂರʼ ಹೆಸರಿನಡಿ ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ (PoK) 9 ಉಗ್ರ ನೆಲೆಗಳ ಮೇಲೆ ವಾಯುದಾಳಿ ನಡೆಸಿದೆ. ಆದ್ರೂ ಕುತಂತ್ರ ಬುದ್ದಿ ಬಿಡದ ಪಾಕ್ ಭಾರತದ ವಿರುದ್ಧ ಪ್ರತಿದಾಳಿಗೆ ಸಂಚು ರೂಪಿಸುತ್ತಿದೆ.
ಇಂದು ಮಧ್ಯಾಹ್ನದ ಬಳಿಕ ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಮಿತಿಯ ಸಭೆ ಕರೆದ ಪ್ರಧಾನಿ ಶೆಹಬಾಜ್ ಶರೀಫ್ (Shehbaz Sharif), ಭಾರತದ ಪ್ರತೀಕಾರದ ದಾಳಿಯನ್ನ ತೀವ್ರವಾಗಿ ಖಂಡಿಸಿದ್ದಾರೆ. ಅಪ್ರಚೋದಿತ ಮತ್ತು ಕಾನೂನುಬಾಹಿರ ಯುದ್ಧ ಕೃತ್ಯ ಎಂದು ಕರೆದಿದ್ದಾರೆ. ಅಲ್ಲದೇ ಭಾರತದ ವಿರುದ್ಧ ದಾಳಿಗೆ ಸೇನೆಗೆ (Pakistan Army) ಅಧಿಕಾರ ನೀಡಿದ್ದಾರೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿವೆ.
ಏನಿದು ʻಆಪರೇಷನ್ ಸಿಂಧೂರʼ?
ಕಳೆದ ಏಪ್ರಿಲ್ 22ರಂದು ಕಾಶ್ಮೀರದ ಪೆಹಲ್ಗಾಮ್ನ ಬೈಸರನ್ ಕಣಿವೆ ಪ್ರದೇಶದಲ್ಲಿ ನಾಲ್ವರು ಉಗ್ರರು ಓರ್ವ ವಿದೇಶಿ ಪ್ರಜೆ ಸೇರಿದಂತೆ 26 ಪ್ರವಾಸಿಗರನ್ನ ಗುಂಡಿಕ್ಕಿ ಕೊಂದಿದ್ದರು. ಇದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಪಣ ತೊಟ್ಟಿದ್ದ ಭಾರತ ಮಂಗಳವಾರ ತಡರಾತ್ರಿ 1:44 ಗಂಟೆ ಸುಮಾರಿಗೆ ಪಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದೆ. ದಾಳಿಯಲ್ಲಿ ಪಾಕ್ ಸೇನೆಯಾಗಲಿ ಅಥವಾ ನಾಗರಿಕರ ಮೇಲಾಗಲಿ ದಾಳಿ ಮಾಡದೇ ಉಗ್ರರ ನೆಲೆಗಳನ್ನು ಮಾತ್ರವೇ ಗುರಿಯಾಗಿಸಿ ದಾಳಿ ನಡೆಸಿದೆ.
ಮೋಸ್ಟ್ವಾಂಟೆಡ್ಗಳನ್ನ ತಯಾರು ಮಾಡ್ತಿದ್ದ ನೆಲೆಗಳು ಧ್ವಂಸ:
ಭಾರತ ಧ್ವಂಸ ಮಾಡಿರುವ ಈ ಉಗ್ರರ ನೆಲೆಗಳು ಮೋಸ್ಟ್ ಡೇಂಜರಸ್ ತಾಣಗಳು ಎಂದೇ ಗುರುತಿಸಿಕೊಂಡಿದ್ದು, ಇಡೀ ವಿಶ್ವಕ್ಕೆ ಕಂಟಕವಾಗಿದ್ದವು. ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಇಲ್ಲಿ ಅಡಗಿಸಿಡಲಾಗಿತ್ತು. ಜೊತೆಗೆ ವಿಶ್ವಾದ್ಯಂತ ವಿವಿಧೆಡೆಗೆ ಕಳುಹಿಸಲು ಉಗ್ರರಿಗೆ ಇಲ್ಲಿ ತರಬೇತಿ ನೀಡಲಾಗುತ್ತಿತ್ತು ಅನ್ನೋ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.
ಎಲ್ಲೆಲ್ಲಿ ದಾಳಿ ನಡೆದಿದೆ?
1) ಬಹವಾಲ್ಪುರ್: ಅಂತರರಾಷ್ಟ್ರೀಯ ಗಡಿಯಿಂದ ಸುಮಾರು 100 ಕಿ.ಮೀ ದೂರದಲ್ಲಿರುವ ಬಹವಾಲ್ಪುರ್ ಮೇಲೆ ದಾಳಿ ನಡೆದಿದೆ. ಇದು ಜೈಷ್ ಉಗ್ರ ಸಂಘಟನೆಯ ಪ್ರಧಾನ ಕಚೇರಿಯಾಗಿತ್ತು.
2) ಮುರಿಡ್ಕೆ: ಸಾಂಬಾ ಎದುರಿನ ಗಡಿಯಿಂದ 30 ಕಿ.ಮೀ ದೂರದಲ್ಲಿದ್ದು ಇದು ಲಷ್ಕರ್-ಎ-ತೈಬಾ ಸಂಘಟನೆ ಉಗ್ರರ ಶಿಬಿರ ನಡೆಸುತ್ತಿತ್ತು. ಮುಂಬೈ ದಾಳಿ ನಡೆಸಿದ ಉಗ್ರರಿಗೆ ಇಲ್ಲಿ ತರಬೇತಿ ನೀಡಲಾಗಿತ್ತು.
3) ಗುಲ್ಪುರ್ : ಗಡಿ ನಿಯಂತ್ರಣ ರೇಖೆ ಪೂಂಚ್-ರಾಜೌರಿಯಿಂದ 35 ಕಿ.ಮೀ ದೂರದಲ್ಲಿದೆ. ಪೂಂಚ್ನಲ್ಲಿ ಏಪ್ರಿಲ್ 20, 2023 ರಂದು ನಡೆದ ದಾಳಿ ಮತ್ತು ಜೂನ್ 24 ರಂದು ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಅಮಾಯಕ ಯಾತ್ರಿಕರ ಮೇಲೆ ಇಲ್ಲಿ ತರಬೇತಿ ಪಡೆದ ಉಗ್ರರು ದಾಳಿ ನಡೆಸಿದ್ದರು.
4) ಸವಾಯಿ: ಲಷ್ಕರ್ ಉಗ್ರರ ಕ್ಯಾಂಪ್ ಇದಾಗಿದ್ದು ಗಡಿ ನಿಯಂತ್ರಣ ರೇಖೆಯಿಂದ 30 ಕಿ.ಮೀ ದೂರದಲ್ಲಿದೆ. ಕಳೆದ ವರ್ಷ ಅಕ್ಟೋಬರ್ 20, 24 ರಂದು ಸೋನ್ಮಾರ್ಗ್, ಅಕ್ಟೋಬರ್ 24 ರಂದು ಗುಲ್ಮಾರ್ಗ್ ಮತ್ತು ಏಪ್ರಿಲ್ 22 ರಂದು ಪಹಲ್ಗಾಮ್ ಮೇಲೆ ದಾಳಿ ನಡೆಸಿದ ಉಗ್ರರು ಇಲ್ಲಿ ತರಬೇತಿ ಪಡೆದಿದ್ದರು.
5) ಬಿಲಾಲ್: ಉಗ್ರ ಸಂಘಟನೆ ಜೈಷ್–ಎ–ಮೊಹಮದ್ ಲಾಂಚ್ ಪ್ಯಾಡ್ ಇದಾಗಿದ್ದು ಉಗ್ರರು ಇಲ್ಲಿ ಕೊನೆಯ ಹಂತದ ತರಬೇತಿ ಪಡೆದು ಭಾರತಕ್ಕೆ ನುಗ್ಗುತ್ತಿದ್ದರು.
6) ಕೋಟ್ಲಿ: ಗಡಿ ನಿಯಂತ್ರಣ ರೇಖೆಯಿಂದ 15 ಕಿ.ಮೀ ದೂರದಲ್ಲಿದೆ. ಲಷ್ಕರ್ ಉಗ್ರರ ಕ್ಯಾಂಪ್ ಇದಾಗಿದ್ದು 50 ಉಗ್ರರಿಗೆ ತರಬೇತಿ ನೀಡುವ ಸಾಮರ್ಥ್ಯ ಹೊಂದಿತ್ತು.
7) ಬರ್ನಾಲಾ: ಭಾರತ ಗಡಿಯಿಂದ 10 ಕಿ.ಮೀ ದೂರದಲ್ಲಿದೆ. ಇಲ್ಲೂ ಲಷ್ಕರ್ ಉಗ್ರರಿಗೆ ತರಬೇತಿ ನೀಡಲಾಗುತ್ತಿತ್ತು.
8) ಸರ್ಜಲ್: ಸಾಂಬಾ ಕಟುವಾ ಬಳಿ ಅಂತಾರಾಷ್ಟ್ರೀಯ ಗಡಿಯಿಂದ 8 ಕಿಲೋಮೀಟರ್ ದೂರದಲ್ಲಿ ಜೈಶ್ ಎ ಮೊಹಮದ್ ಕ್ಯಾಂಪ್.
9) ಮಹಮೂನಾ: ಸಿಯಾಲ್ ಕೋಟ್ ಬಳಿಯ ಅಂತಾರಾಷ್ಟ್ರೀಯ ಗಡಿಯಿಂದ 15 ಕಿಲೋಮೀಟರ್ ದೂರದಲ್ಲಿ ಹಿಜ್ಬುಲ್ಲಾ ಟ್ರೈನಿಂಗ್ ಸೆಂಟರ್.