ಇಸ್ಲಾಮಾಬಾದ್: ಭಾರತ (India) ಸಿಂಧೂ ನದಿ ನೀರು ಒಪ್ಪಂದವನ್ನು ರದ್ದುಗೊಳಿಸಿದ್ರೆ ನಾವು ಯುದ್ಧಕ್ಕೆ ಸಿದ್ಧರಿದ್ದೇವೆ ಎಂದು ಪಾಕಿಸ್ತಾನದ ಗೃಹ ಸಚಿವ ಮೊಹ್ಸಿನ್ ನಖ್ವಿ (Mohsin Naqvi) ಬೆದರಿಕೆ ಹಾಕಿದ್ದಾರೆ.
ಪಹಲ್ಗಾಮ್ ದಾಳಿಯ ಬಳಿಕ ಭಾರತ ಮತ್ತು ಪಾಕ್ ನಡುವೆ ಉದ್ವಿಗ್ನತೆ ವ್ಯಾಪಕವಾಗುತ್ತಿದೆ. ಸಿಂಧೂ ಜಲ ಒಪ್ಪಂದ ರದ್ದುಗೊಳಿಸುವುದು ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಭಾರತ ಸರ್ಕಾರ ತೆಗೆದುಕೊಂಡ ಬಳಿಕ ಪಾಕಿಸ್ತಾನದ ಒಬ್ಬೊಬ್ಬರು ಸಚಿವರು ಬಾಲ ಬಿಚ್ಚುತ್ತಿದ್ದಾರೆ. ಸಿಂಧೂ ನೀರು ಪಾಕ್‌ಗೆ ಹರಿಯಬೇಕು, ಇಲ್ಲದಿದ್ರೆ ಭಾರತೀಯರ ರಕ್ತ ಹರಿಯುತ್ತೆ ಎಂದು ಪಾಕಿಸ್ತಾನ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಬಿಲಾವಲ್ ಭುಟ್ಟೋ ಹೇಳಿದ್ದರು. ಇದೀಗ ನಖ್ವಿ ಯುದ್ಧಕ್ಕೆ ಸಿದ್ಧ ಎಂದು ಬುಸುಗುಟ್ಟಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತವು ಸಿಂಧೂ ಜಲ ಒಪ್ಪಂದವನ್ನ ಏಕಪಕ್ಷೀಯವಾಗಿ ಕೊನೆಗೊಳಿಸಲು ಸಾಧ್ಯವಿಲ್ಲ. ಏಕೆಂದರೆ ವಿಶ್ವಬ್ಯಾಂಕ್ (World Bank) ಈ ಒಪ್ಪಂದದ ಮಧ್ಯಸ್ಥಿಕೆ ವಹಿಸಿದೆ. ಅಂತಹ ಯಾವುದೇ ಕ್ರಮ ಕೈಗೊಂಡರೆ, ಪಾಕಿಸ್ತಾನ ಯುದ್ಧಕ್ಕೆ ಸಿದ್ಧವಾಗಿದೆ ಎಂದು ನಖ್ವಿ ಎಚ್ಚರಿಕೆ ನೀಡಿದ್ದಾರೆ.
ಇದಕ್ಕೂ ಮುನ್ನ ಮಾತನಾಡಿದ್ದ ಬಿಲಾವಲ್ ಭುಟ್ಟೋ, ಸಿಂಧೂ ನಮ್ಮದು. ಅದು ನಮ್ಮದೇ ಆಗಿರುತ್ತದೆ ಎಂದು ನಾನು ಭಾರತಕ್ಕೆ ಹೇಳಲು ಬಯಸುತ್ತೇನೆ. ನಮ್ಮ ನೀರು ಅದರ ಮೂಲಕ ಹರಿಯುತ್ತದೆ. ಇಲ್ಲದಿದ್ದರೆ ಅವರ ರಕ್ತ ಹರಿಯುತ್ತದೆ ಎಂದು ಹೇಳಿದ್ದರು.