ಇಸ್ಲಾಮಾಬಾದ್: ಇಂದಿನ ದಿನಗಳಲ್ಲಿ ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ಅವರು ಅತ್ಯುತ್ತಮ ಬ್ಯಾಟ್ಸ್‌ಮನ್‍ಗಳು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಸ್ಮಿತ್ ಅವರು ಅಗ್ರಸ್ಥಾನದಲ್ಲಿದ್ದರೆ ವಿರಾಟ್ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‍ನಲ್ಲಿ ವಿರಾಟ್ ಅಗ್ರ ಸ್ಥಾನದಲ್ಲಿದ್ದಾರೆ.
ಅದೇನೇ ಇದ್ದರೂ ಎಲ್ಲಾ ಸ್ವರೂಪಗಳಲ್ಲೂ ಉತ್ತಮವಾದ ಪ್ರದರ್ಶನ ಯಾರು ನೀಡಿದ್ದಾರೆ ಎಂಬ ಚರ್ಚೆ ಇದ್ದೆ ಇರುತ್ತದೆ. ಈ ನಿಟ್ಟಿನಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟರ್, ದಂತಕಥೆ ಜಹೀರ್ ಅಬ್ಬಾಸ್ ಅವರಿಗೂ ಇದೇ ಪ್ರಶ್ನೆಯನ್ನು ಕೇಳಿದಾಗ ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
”ಟೆಸ್ಟ್ ಕ್ರಿಕೆಟ್‍ನಲ್ಲಿ ವಿರಾಟ್ ಕೊಹ್ಲಿ ಅವರಿಗಿಂತ ಸ್ಟೀವ್ ಸ್ಮಿತ್ ಹೆಚ್ಚು ಸ್ಥಿರತೆ ಹೊಂದಿದ್ದಾರೆ. ಅವರು ಆಡುವ ಪ್ರತಿಯೊಂದು ಸರಣಿಯಲ್ಲೂ ಅವರು ಉತ್ತಮ ಸ್ಕೋರ್ ಮಾಡುತ್ತಾರೆ. ಜೊತೆಗೆ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಕೂಡ ಉತ್ತಮ ಬ್ಯಾಟಿಂಗ್ ಪ್ರರ್ದಶನ ನೀಡುತ್ತಿದ್ದಾರೆ. ಆದರೆ ನಾನು ಹೇಳುವುದೇನೆಂದರೆ ಬ್ಯಾಟ್ಸ್‌ಮನ್ ಎಲ್ಲಾ ಸ್ವರೂಪಗಳಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗುತ್ತದೆ. ಆ ಅರ್ಥದಲ್ಲಿ ಹೇಳುವುದಾದರೆ ವಿರಾಟ್ ಕೊಹ್ಲಿ ಎಲ್ಲಾ ಮೂರು ಸ್ವರೂಪದಲ್ಲೂ ಸ್ಥಿರ ಪ್ರದರ್ಶನ ನೀಡುತ್ತಾ ಬಂದಿದ್ದಾರೆ” ಎಂದು ಜಹೀರ್ ಅಬ್ಬಾಸ್ ತಿಳಿಸಿದ್ದಾರೆ.
2018 ರಲ್ಲಿ ಏಕದಿನ ಸ್ವರೂಪದಲ್ಲಿ ವಿರಾಟ್ ಕೊಹ್ಲಿ 10,000 ರನ್ ಗಳಿಸಿದ ವೇಗದ ಆಟಗಾರರಾದರು. ಅಂತರರಾಷ್ಟ್ರೀಯ ಟಿ20ಯಲ್ಲಿ ವಿರಾಟ್ ಈವರಗೂ ಶತಕ ಗಳಿಸಿಲ್ಲ. ಆದರೆ 24 ಅರ್ಧಶತಕಗಳನ್ನು ಸಿಡಿಸಿದ್ದಾರೆ. ರನ್ ಮತ್ತು ಶತಕಗಳಿಗೆ ಸಂಬಂಧಿಸಿದಂತೆ ಟೆಸ್ಟ್ ಪಂದ್ಯಗಳಲ್ಲಿ ಟೀಂ ಇಂಡಿಯಾ ಕ್ಯಾಪ್ಟನ್ ಕೂಡ ಅಗ್ರ ಸ್ಥಾನದಲ್ಲಿದ್ದಾರೆ. ಆದರೆ ಸ್ಮಿತ್ ಅವರು ಏಕಾಗ್ರತೆ ಮತ್ತು ಶತಕಗಳಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ ಎಂದು ಹೇಳಿದರು.
”ಕೊಹ್ಲಿ ಸಾಧಿಸಿದ್ದನ್ನು ಗಮನಿಸಿ. ಆದರೆ ಅವರು ಯಂತ್ರವಲ್ಲ. ಒಂದು ಯಂತ್ರ ಕೂಡ ಕೆಲವೊಮ್ಮೆ ಸರಿಯಾಗಿ ಕಾರ್ಯನಿರ್ವಹಿಸಲ್ಲ. ಈ ಕ್ಷಣದಲ್ಲಿ ಕೊಹ್ಲಿ ಅವರಿಗೆ ಸಮವಾಗಿ ಕಾರ್ಯನಿರ್ವಹಿಸುವವರು ಯಾರೂ ಇಲ್ಲ. ವಿರಾಟ್ ರನ್ ಮಳೆ ಸುರಿಸುವುದನ್ನು ಮುಂದುವರಿಸುತ್ತಾರೆ ಹಾಗೂ ಮತ್ತಷ್ಟು ಎತ್ತರಕ್ಕೆ ಬೆಳೆಯುತ್ತಾರೆ ಎಂಬ ಭರವಸೆಯಿದೆ ಎಂದು ತಿಳಿಸಿದರು.
ಟಿ20 ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಬಾಬರ್ ಅಜಮ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಅವರು ಕೂಡ ಅಂತರರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಮೈಲಿಗಲ್ಲು ನಿರ್ಮಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಜಹೀರ್ ಅಬ್ಬಾಸ್ ಹೇಳಿದರು.
ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಎಲ್ಲಾ ಕ್ರಿಕೆಟ್ ಟೂರ್ನಿಗಳನ್ನು ಮುಂದೂಡಲಾಗಿದೆ ಅಥವಾ ರದ್ದುಗೊಳಿಸಲಾಗಿದೆ. ಸದ್ಯಕ್ಕೆ ಎಲ್ಲಾ ಆಟಗಾರರು ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಮೂರೂ ಸ್ವರೂಪದಲ್ಲಿ ಅಗ್ರ ಸ್ಥಾನದಲ್ಲಿರುವ (ಏಕದಿನ- ವಿರಾಟ್ ಕೊಹ್ಲಿ, ಟೆಸ್ಟ್-ಸ್ಟೀವ್ ಸ್ಮಿತ್ ಹಾಗೂ ಟಿ20- ಬಾಬರ್ ಅಜಮ್) ಕೊರೊನಾ ಆತಂಕದ ಬಳಿಕ ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.