ಇಂದಿನಿಂದ ಪಾಕಿಸ್ತಾನದಲ್ಲಿ ಮತ್ತೆ ಸ್ವಾತಂತ್ರ್ಯ ಹೋರಾಟ ಪ್ರಾರಂಭ: ಇಮ್ರಾನ್ ಖಾನ್

Public TV
3 Min Read
Imran Khan 2

ಇಸ್ಲಾಮಾಬಾದ್: ಪಾಕಿಸ್ತಾನ ಸಂಸತ್‍ನಲ್ಲಿ ವಿಶ್ವಾಸಮತ ಸಾಬೀತುಪಡಿಸುವಲ್ಲಿ ವಿಫಲರಾಗಿ ಅಧಿಕಾರ ಕಳೆದುಕೊಂಡ ಇಮ್ರಾನ್ ಖಾನ್ ಇಂದಿನಿಂದ ಪಾಕಿಸ್ತಾನದಲ್ಲಿ ಮತ್ತೆ ಸ್ವಾತಂತ್ರ್ಯ ಹೋರಾಟ ಪ್ರಾರಂಭವಾಗಿದೆ ಎಂದು ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

pakistan parliament A

ಅಧಿಕಾರ ಕಳೆದುಕೊಂಡ ಬಳಿಕ ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿರುವ ಇಮ್ರಾನ್ ಖಾನ್, 1947ರಲ್ಲಿ ಪಾಕಿಸ್ತಾನ ಸ್ವತಂತ್ರ ರಾಷ್ಟ್ರವಾಯಿತು. ಆದರೆ ಆಡಳಿತ ಬದಲಾವಣೆಯ ವಿದೇಶಿ ಷಡ್ಯಂತ್ರದ ವಿರುದ್ಧ ಸ್ವಾತಂತ್ರ್ಯ ಹೋರಾಟ ಇಂದು ಮತ್ತೆ ಪ್ರಾರಂಭವಾಗುತ್ತಿದೆ. ದೇಶದ ಜನರು ಯಾವಾಗಲೂ ತಮ್ಮ ಸಾರ್ವಭೌಮತ್ವ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸುತ್ತಾರೆ ಎಂದಿದ್ದಾರೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್‌ನಲ್ಲಿ ಇಮ್ರಾನ್‌ಗೆ ಸೋಲು- ಅವಿಶ್ವಾಸ ನಿರ್ಣಯ ಮತಕ್ಕೆ ಹಾಕಲು ಸೂಚನೆ

ಪಾಕಿಸ್ತಾನ ಸಂಸತ್‍ನಲ್ಲಿ ತಡರಾತ್ರಿ ವಿಶ್ವಾಸ ಮತಯಾಚಣೆ ನಡೆಯಿತು. ಇಮ್ರಾನ್ ಖಾನ್ ನೇತೃತ್ವದ ಆಡಳಿತಾರೂಢ ಪಕ್ಷ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ವಿಶ್ವಾಸ ಮತಯಾಚನೆಯಲ್ಲಿ ಸೋತು ಅಧಿಕಾರ ಕಳೆದುಕೊಳ್ಳಬೇಕಾಯಿತು. ನಾಳೆ ರಾಷ್ಟ್ರೀಯ ಅಸೆಂಬ್ಲಿಗೆ ಪಿಟಿಐ ರಾಜೀನಾಮೆ ನೀಡಲಿದೆ.

PAK

ಅಧಿಕಾರ ಉಳಿಸಿಕೊಳ್ಳಲು ಕೊನೆ ಕ್ಷಣದವರೆಗೂ ಕಸರತ್ತು ನಡೆಸಿದ್ದ ಇಮ್ರಾನ್ ಖಾನ್ 4 ವರ್ಷಗಳ ಅಧಿಕಾರವನ್ನು ಕಳೆದುಕೊಂಡಿದ್ದಾರೆ. ಈ ಮೂಲಕ ಇಮ್ರಾನ್ ಖಾನ್ ಅವಿಶ್ವಾಸ ಮತದಲ್ಲಿ ಸೋತ ಪಾಕಿಸ್ತಾನದ ಮೊದಲ ಪ್ರಧಾನಿಯಾಗಿದ್ದಾರೆ. ಸದನದಲ್ಲಿ ಹಾಜರಿದ್ದ ಪ್ರತಿಪಕ್ಷಗಳ 176 ಹಾಗೂ ಆಡಳಿತ ಪಕ್ಷದ 22 ಸದಸ್ಯರು ನಿರ್ಣಯದ ಪರವಾಗಿ ಮತ ಹಾಕಿದರು. ಇದಕ್ಕೂ ಮುನ್ನ ದಿನವಿಡೀ ಪಾಕಿಸ್ತಾನದಲ್ಲಿ ಹೈಡ್ರಾಮವೇ ನಡೆದಿದೆ. ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸಿ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕಲು ಸ್ಪೀಕರ್ ನಿರಾಕರಿಸಿದರು. ಅದೇ ವೇಳೆ, ಸ್ಪೀಕರ್ ಕ್ರಮದಿಂದ ಸಿಟ್ಟಿಗೆದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಾತ್ರೋರಾತ್ರಿ ಕಲಾಪ ಆರಂಭಿಸಿ, ಸ್ಪೀಕರ್ ಹಾಗೂ ಪ್ರಧಾನಿ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಲು ಮುಂದಾದರು. ಇದನ್ನೂ ಓದಿ: ಪಿಎಂ ಸ್ಥಾನದಿಂದ ಇಮ್ರಾನ್ ಕೆಳಗಿಳಿದ್ರೆ ಪಾಕ್‌ನ ಮುಂದಿನ ಪ್ರಧಾನಿ ಇವರೇ

IMRAN KHAN

ಸಿಜೆ ನೇತೃತ್ವದ ಪಂಚ ಸದಸ್ಯರ ಪೀಠದ ಆದೇಶದಂತೆ ಶನಿವಾರ ಅವಿಶ್ವಾಸ ನಿಲುವಳಿಯನ್ನು ಮತಕ್ಕೆ ಹಾಕಬೇಕಿತ್ತು. ಅದರಂತೆ ಶನಿವಾರ ಮಧ್ಯಾಹ್ನ ರಾಷ್ಟ್ರೀಯ ಅಸೆಂಬ್ಲಿ ಕಲಾಪ ಆರಂಭವಾಯಿತು. ಪ್ರತಿಪಕ್ಷ ನಾಯಕ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಬಿಲಾವಲ್ ಭುಟ್ಟೊ ಜರ್ದಾರಿ, ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿದರು. ಸ್ಪೀಕರ್ ಅಸಾದ್ ಕ್ವೈಸಾರ್ ಮತ ಹಾಕಲು ನಿರಾಕರಿಸಿದರು. ಹಲವು ಸಲ ಕಲಾಪ ಮುಂದೂಡಲಾಯಿತಾದರೂ, ಇಫ್ತಿಹಾರ್ ಭೋಜನದ ಬಳಿಕ ರಾತ್ರಿ 10.30ಕ್ಕೆ ಕಲಾಪ ಆರಂಭಿಸಲು ನಿರ್ಧರಿಸಲಾಯಿತು. ಸ್ಪೀಕರ್ ರಾಜೀನಾಮೆ ನಿರ್ಧಾರ ಪ್ರಕಟಿಸಿ ಪೀಠದಿಂದ ಕೆಳಗಿಳಿದರು. ಆ ಮೂಲಕ ನ್ಯಾಯಾಂಗ ನಿಂದನೆಯ ಆರೋಪದಿಂದ ಪಾರಾದರು. ಅದರ ಬೆನ್ನಲ್ಲಿಯೇ ಆಡಳಿತಾರೂಢ ಪಕ್ಷ ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಸದಸ್ಯರು ಸಭಾತ್ಯಾಗ ಮಾಡಿದರು. ಸುಪ್ರೀಂ ಕೋರ್ಟ್ ಆದೇಶಕ್ಕೆ ಗೌರವ ನೀಡುತ್ತೇವೆ ಎಂದು ಘೋಷಿಸಿದ ಪ್ರತಿಪಕ್ಷಗಳು ಕಲಾಪ ಮುಂದುವರಿಸಲು ನಿರ್ಧರಿಸಿದವು. ಇದನ್ನೂ ಓದಿ: ಪಾಕ್‌ ಪ್ರಧಾನಿಯಾಗ್ತಾರೆ ಅಂತ ಭವಿಷ್ಯ ನುಡಿದಿದ್ದ ಬುಶ್ರಾ ಬೀಬಿಗೆ ಇಮ್ರಾನ್‌ ಈಗ ಡಿವೋರ್ಸ್‌ ನೀಡಬಹುದು: ತಸ್ಲೀಮಾ

ಡೆಪ್ಯೂಟಿ ಸ್ಪೀಕರ್ ಖಾಸಿಮ್ ಸುರಿ ಗೈರಾಗಿದ್ದರು. ಹೀಗಾಗಿ ಸ್ಪೀಕರ್‌ಗಳ ಪ್ಯಾನೆಲ್ ಪಟ್ಟಿಯಲ್ಲಿ ಮೂರನೇಯವರಾದ ನವಾಜ್ ಷರೀಫ್ ಅವರ ಪಾಕಿಸ್ತಾನ ಮುಸ್ಲಿಂ ಲೀಗ್ (ನವಾಜ್) ಪಕ್ಷದ ಹಿರಿಯ ಸದಸ್ಯ ಅಯಾಜ್ ಸಾದಿಕ್ ಹಂಗಾಮಿ ಸ್ಪೀಕರ್ ಆಗಿ ಆಯ್ಕೆಯಾದರು. ಹೊರ ಹೋಗಿರುವ ಆಡಳಿತ ಪಕ್ಷದ ಸದಸ್ಯರು ಒಳಬರಲು ಐದು ನಿಮಿಷ ಅವಕಾಶವನ್ನು ಸಾದಿಕ್ ನೀಡಿದ್ದರು. ವಿಶ್ವಾಸಮತ ಕಳೆದುಕೊಳ್ಳುತ್ತಿದ್ದಂತೆಯೇ ಇಮ್ರಾನ್ ಖಾನ್ ಅವರು ಪ್ರಧಾನಿ ಕಚೇರಿಯಿಂದ ನಿರ್ಗಮಿಸಿದರು. ನಾಳೆ ಹೊಸ ಪ್ರಧಾನಿ ಆಯ್ಕೆ ನಡೆಯಲಿದ್ದು, ಬಹುತೇಕ ಶಹಬಾಜ್ ಷರೀಫ್ ಮುಂದಿನ ಪ್ರಧಾನಿ ಆಗುವ ಸಾಧ್ಯತೆಗಳಿದೆ.

Share This Article
Leave a Comment

Leave a Reply

Your email address will not be published. Required fields are marked *