ಮುಂಬೈ: ಮಹಾರಾಷ್ಟ್ರದ (Maharashtra) ಮಾಜಿ ಸಚಿವ ಬಾಬಾ ಸಿದ್ದಿಕಿ (Baba Siddique) ಹತ್ಯೆಗೆ ಪಾಕಿಸ್ತಾನದ ಡ್ರೋನ್‌ಗಳ (Pakistan Drones) ಮೂಲಕ ಗನ್ ಪೂರೈಕೆ ಮಾಡಲಾಗಿದೆ ಎಂದು ಮುಂಬೈ ಪೊಲೀಸರು (Mumbai Police) ಶಂಕೆ ವ್ಯಕ್ತಪಡಿಸಿದ್ದಾರೆ.
ಬಾಬಾ ಸಿದ್ದಿಕಿ ಹತ್ಯೆಗೆ 3 ಗನ್ ಬಳಸಲಾಗಿದೆ ಎನ್ನಲಾಗಿತ್ತು. ಆದರೆ 4 ಗನ್‌ಗಳನ್ನು ಬಳಸಲಾಗಿದೆ. ಈ ಗನ್‌ಗಳು ಪಾಕ್‌ನಿಂದ ಡ್ರೋನ್ ಮೂಲಕ ಪೂರೈಕೆಯಾಗಿವೆ ಎಂಬ ಶಂಕೆ ಇದೆ. ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರ ತಂಡ, ಹೆಚ್ಚಿನ ವಿವರಗಳಿಗಾಗಿ ಬಂದೂಕುಗಳ ಚಿತ್ರವನ್ನು ರಾಜಸ್ಥಾನ ಪೊಲೀಸರಿಗೆ ಕಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಬಾಬಾ ಸಿದ್ದಿಕಿ ಹತ್ಯೆ ಪ್ರಕರಣ: ರಾಯಗಢ ಜಲಪಾತದ ಬಳಿ ಶೂಟಿಂಗ್ ಅಭ್ಯಾಸ ನಡೆಸಿದ್ದ ಹಂತಕರು
ಬಾಬಾ ಸಿದ್ದಿಕಿ ಅವರನ್ನು ಅ.12 ರಂದು ಬಾಂದ್ರಾ ಪೂರ್ವದ ನಿರ್ಮಲ್ ನಗರದ ಅವರ ಪುತ್ರ ಶಾಸಕ ಜೀಶನ್ ಸಿದ್ದಿಕಿ ಅವರ ಕಚೇರಿ ಬಳಿ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೊಲೆಯ ಹೊಣೆಯನ್ನು ಹೊತ್ತುಕೊಂಡಿದೆ. ಪ್ರಕರಣದಲ್ಲಿ 14 ಮಂದಿಯನ್ನು ಬಂಧಿಸಲಾಗಿದ್ದು, ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಹತ್ಯೆ ಆರೋಪಿಗಳಾದ ಗುರ್ಮೈಲ್ ಬಲ್ಜಿತ್ ಸಿಂಗ್, ಧರ್ಮರಾಜ್ ಕಶ್ಯಪ್ ಮತ್ತು ವಾಂಟೆಡ್ ಆರೋಪಿ ಶಿವಕುಮಾರ್ ಗೌತಮ್ ಬಾಬಾ ಸಿದ್ದಿಕ್ ಮೇಲೆ ಗುಂಡು ಹಾರಿಸಿದ್ದರು. ಪುಣೆ ಮೂಲದ ಪ್ರವೀಣ್ ಲೊಂಕರ್ ಮತ್ತು ಇತರ ವಾಂಟೆಡ್ ಆರೋಪಿಗಳು ಹತ್ಯೆಗೆ ಸಂಚು ರೂಪಿಸಿದ್ದರು. ಅಲ್ಲದೇ ಶೂಟರ್‌ಗಳಿಗೆ ಬಂದೂಕುಗಳನ್ನು ಪೂರೈಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಪುಣೆಯ ಸ್ಕ್ರ್ಯಾಪ್ ಡೀಲರ್ ಹರೀಶ್ ಕುಮಾರ್ ನಿಸಾದ್ ಆರೋಪಿಗಳಿಗೆ ಆರ್ಥಿಕ ಸಹಾಯವನ್ನು ಒದಗಿಸಿದ್ದಾನೆ. ಪ್ರಮುಖ ಶೂಟರ್ ಶಿವಕುಮಾರ್ ಗೌತಮ್ ಹಾಗೂ ಪ್ರಮುಖ ಆರೋಪಿಗಳಾದ ಶುಭಂ ಲೋಂಕರ್ ಮತ್ತು ಮೊಹಮ್ಮದ್ ಜೀಶನ್ ಅಖ್ತರ್ ಸದ್ಯ ಪರಾರಿಯಾಗಿದ್ದಾರೆ.
ಪ್ರಮುಖ ಆರೋಪಿ ಜೀಶಾನ್ ಅಖ್ತರ್ ಇತರ ಎಲ್ಲಾ ಆರೋಪಿಗಳೊಂದಿಗೆ ಸಂಪರ್ಕದಲ್ಲಿದ್ದು, ಆರೋಪಿಗಳಿಗೆ ಕೃತ್ಯದ ಬಳಿಕ ದೊಡ್ಡ ಮೊತ್ತದ ಹಣ ಮತ್ತು ವಿದೇಶಿ ಪ್ರವಾಸದ ಭರವಸೆ ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಪ್ಯಾನ್ ಇಂಡಿಯಾ ರೇಡ್ – 4 ರಾಜ್ಯಗಳಲ್ಲಿ ಬಿಷ್ಣೋಯ್ ಗ್ಯಾಂಗ್‌ನ 7 ಶೂಟರ್ಸ್ ಅರೆಸ್ಟ್