– ವಿಶ್ವಸಂಸ್ಥೆಯಲ್ಲಿ ಪಾಕ್ ಪ್ರಧಾನಿ ಮತ್ತೆ ʻಕಾಶ್ಮೀರ ರಾಗʼ
– ಭಾರತ – ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ನಾನೇ – ಮತ್ತೆ ಪುಂಗಿದ ಟ್ರಂಪ್
ವಾಷಿಂಗ್ಟನ್: 2025ರ ಭಾರತ–ಪಾಕಿಸ್ತಾನ ಸಂಘರ್ಷದ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಮಧ್ಯಸ್ಥಿಕೆಯನ್ನ ಪಾಕಿಸ್ತಾನ ಪ್ರಧಾನಿ ಮತ್ತೆ ಕೊಂಡಾಡಿದ್ದಾರೆ. ಟ್ರಂಪ್ ಅವರ ‘ಸಮಯೋಚಿತ ಮಧ್ಯಸ್ಥಿಕೆ’ ದಕ್ಷಿಣ ಏಷ್ಯಾದಲ್ಲಿ ಭಾರೀ ಪ್ರಮಾಣದ ಪ್ರಾಣಹಾನಿ ತಪ್ಪಿಸಿತು ಎಂದು ಶೆಹಬಾಜ್ ಶರೀಫ್ (Shehbaz Sharif) ಹೇಳಿದ್ದಾರೆ.
ವಿಶ್ವಸಂಸ್ಥೆಯ 81ನೇ ಸಾಮಾನ್ಯ ಸಭೆ (UNGA)ಯಲ್ಲಿ ಮಾತನಾಡಿದ ಶರೀಫ್, ಸುಮಾರು 23 ನಿಮಿಷಗಳ ಕಾಲ ಭಾಷಣ ಮಾಡಿದರು. ಭಾರತ ಮತ್ತು ಪಾಕಿಸ್ತಾನ ನಡುವಿನ 2025ರ ಸಂಘರ್ಷ ಉಲ್ಬಣಗೊಳ್ಳುವ ಹಂತದಲ್ಲಿದ್ದಾಗ ಟ್ರಂಪ್ ಅವರ ಮಧ್ಯಸ್ಥಿಕೆ ನಿರ್ಣಾಯಕವಾಗಿತ್ತು. ಟ್ರಂಪ್ ಅವರ ನಾಯಕತ್ವ ‘ದೃಢ ಮತ್ತು ದೂರದೃಷ್ಟಿಯ’ ನಾಯಕತ್ವವಾಗಿತ್ತು. ಅವರ ಮಧ್ಯಸ್ಥಿಕೆಯಿಂದ ದಕ್ಷಿಣ ಏಷ್ಯಾದ ಕೋಟ್ಯಂತರ ಜನರ ಜೀವ ಉಳಿಯಲು ನೆರವಾಯಿತು ಎಂದು ಶ್ಲಾಘಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಟ್ರಂಪ್ ಕೂಡ ಈ ವಾರ ವಿಶ್ವಸಂಸ್ಥೆಯಲ್ಲಿ ಮಾತನಾಡುವ ವೇಳೆ, 2025ರ ಭಾರತ–ಪಾಕಿಸ್ತಾನ (India Vs Pakistan) ಸಂಘರ್ಷವನ್ನ ತಾನು ತಡೆಯಲು ನೆರವಾಗಿದ್ದೇನೆ ಎಂದು ಮತ್ತೆ ಪುನರುಚ್ಚರಿಸಿದ್ದರು. ಆದ್ರೆ ಭಾರತವು ಕದನ ವಿರಾಮಕ್ಕೆ ಯಾವುದೇ 3ನೇ ದೇಶದ ಮಧ್ಯಸ್ಥಿಕೆ ಇತ್ತು ಎಂಬ ಹೇಳಿಕೆಯನ್ನ ಸಾರಾಸಗಟಾಗಿ ತಳ್ಳಿಹಾಕಿದೆ.
ಆಪರೇಷನ್ ಸಿಂಧೂರ್ ಬಳಿಕ ಏನಾಗಿತ್ತು?
2025ರ ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರ ಮಾರಣಹೋಮ ನಡೆದಿತ್ತು. ಇದಕ್ಕೆ ಪ್ರತೀಕಾರವಾಗಿ ಭಾರತವು ಮೇ 7 ಎಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕ ಮೂಲಸೌಕರ್ಯಗಳನ್ನ ಗುರಿಯಾಗಿಸಿಕೊಂಡು ʻಆಪರೇಷನ್ ಸಿಂಧೂರ್ʼ ಕಾರ್ಯಾಚರಣೆ ಆರಂಭಿಸಿತ್ತು. ಈ ಸಂಘರ್ಷದ ಅಂತ್ಯದಲ್ಲಿ ಅಮೆರಿಕದ ಮಧ್ಯಸ್ಥಿಕೆಯ ಪಾತ್ರವಿತ್ತು ಎಂಬುದು ಟ್ರಂಪ್ ಅವರ ನಿರಂತರ ಪ್ರತಿಪಾದನೆಯಾಗಿದೆ. ಆದ್ರೆ ಭಾರತ 3ನೇ ವ್ಯಕ್ತಿಯ ಮಧ್ಯಸ್ಥಿತಿಕೆಯನ್ನು ನಿರಂತರವಾಗಿ ನಿರಾಕರಿಸಿದೆ.

ವಿಶ್ವಸಂಸ್ಥೆಯಲ್ಲಿ ಮತ್ತೆ ಕಾಶ್ಮೀರ ರಾಗ
ಶೆಹಬಾಜ್ ಶರೀಫ್ ತಮ್ಮ ಭಾಷಣದಲ್ಲಿ ಕಾಶ್ಮೀರ ವಿಚಾರವನ್ನೂ ಮತ್ತೆ ಪ್ರಸ್ತಾಪಿಸಿದ್ದಾರೆ. 2025 ರಂತಹ ಪರಿಸ್ಥಿತಿ ದಕ್ಷಿಣ ಏಷ್ಯಾದಲ್ಲಿ ಮತ್ತೆ ಎದುರಾಗದಂತೆ ನೋಡಿಕೊಳ್ಳಬೇಕಾದರೆ ಕಾಶ್ಮೀರ ಸಮಸ್ಯೆಗೆ ನ್ಯಾಯಯುತ ಮತ್ತು ನ್ಯಾಯಸಮ್ಮತವಾದ ಪರಿಹಾರ ಅಗತ್ಯ ಎಂದು ಪ್ರತಿಪಾದಿಸಿದ್ದಾರೆ.
ಮುಂದುವರಿದು.. ಸಿಂಧು ಜಲ ಒಪ್ಪಂದ (IWT) ವಿಚಾರವನ್ನೂ ಪ್ರಸ್ತಾಪಿಸಿದ ಶರೀಫ್, ಪಾಕಿಸ್ತಾನದ ಪಾಲಿನ ನೀರನ್ನ ತಡೆಯುವ ಅಥವಾ ತಿರುಗಿಸುವ ಯಾವುದೇ ಪ್ರಯತ್ನವನ್ನ ಗಂಭೀರವಾಗಿ ಪರಿಗಣಿಸುತ್ತೇವೆ. ಪಾಕಿಸ್ತಾನದ ಅಧಿಕೃತ ಹೇಳಿಕೆಯ ಪ್ರಕಾರ, ಇಂತಹ ಕ್ರಮವನ್ನು ‘ಯುದ್ಧದ ಕೃತ್ಯ’ವೆಂದು ಪರಿಗಣಿಸುವುದಾಗಿ ಶಹಬಾಜ್ ಹೇಳಿದ್ದಾರೆ.
ಪಹಲ್ಗಾಮ್ ದಾಳಿಯ ನಂತರ ಭಾರತವು ಸಿಂಧೂ ಜಲ ಒಪ್ಪಂದವನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು. ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಎಲ್ಲ ರೀತಿಯ ಭಯೋತ್ಪಾದನೆಗೆ ಪಾಕಿಸ್ತಾನ ಬೆಂಬಲ ನೀಡುವುದನ್ನ ವಿಶ್ವಾಸಾರ್ಹ ಹಾಗೂ ಶಾಶ್ವತವಾಗಿ ನಿಲ್ಲಿಸುವವರೆಗೆ ಒಪ್ಪಂದವನ್ನು ಸ್ಥಗಿತದಲ್ಲೇ ಇರಿಸಲಾಗುವುದು ಎಂಬುದು ಭಾರತದ ನಿಲುವಾಗಿದೆ.

