ಭಾರತದ ಬಳಿಯಿರುವಂತೆ ಅತ್ಯಾಧುನಿಕ ವಾಯುರಕ್ಷಣಾ ವ್ಯವಸ್ಥೆ ನಮಗೂ ಕೊಡಿ – ಅಮೆರಿಕಕ್ಕೆ ಪಾಕ್‌ ಬೇಡಿಕೆ

Public TV
3 Min Read
operation sindoor India intercepts Pakistans Fatah ballistic missile fired at Delhi

– ಮಿಲಿಟರಿ ಪ್ರಯೋಜನದ ಬಗ್ಗೆ ಶೆಹಬಾಜ್‌ ಸರ್ಕಾರ ಸುಳ್ಳು ಹಬ್ಬಿಸುತ್ತಿದೆ; ತಪ್ಪೊಪ್ಪಿಗೆ
– ಭಾರತ 80 ಫೈಟರ್‌ ಜೆಟ್‌ಗಳಿಂದ 400 ಕ್ಷಿಪಣಿ ಹಾರಿಸಿತ್ತು
– ಚೀನಾ ನಂಬಿ ಕೆಟ್ಟು ಈಗ ಅಮೆರಿಕದ ಬಳಿ ಭಿಕ್ಷೆ

ಇಸ್ಲಾಮಾಬಾದ್‌: ಆಪರೇಷನ್‌ ಸಿಂಧೂರ ಕಾರ್ಯಾಚರಣೆಯಲ್ಲಿ ಭಾರತದ (India) ಅಸ್ತ್ರಗಳನ್ನು ಭೇದಿಸಲು ವಿಫಲವಾದ ಪಾಕಿಸ್ತಾನ ಇದೀಗ ಅತ್ಯಾಧುನಿಕ ವಾಯುರಕ್ಷಣಾ ವ್ಯವಸ್ಥೆಗಾಗಿ (Air Defence System) ಅಮೆರಿಕದ ಬಳಿ ಬೇಡಿಕೊಂಡಿದೆ.

ಹೌದು. ಆಪರೇಷನ್ ಸಿಂಧೂರ ಸಮಯದಲ್ಲಿ ಭಾರತವು ಪಾಕಿಸ್ತಾನದ (Pakistan) ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿದ್ದ 9 ಉಗ್ರರ ಅಡಗು ತಾಣಗಳನ್ನು ಧ್ವಂಸಗೊಳಿಸಿತು. ಅಲ್ಲದೇ ಪಾಕ್‌ ದಾಳಿಗೆ ಪ್ರತೀಕಾರವಾಗಿ 11 ವಾಯುನೆಲೆಗಳನ್ನೂ ಧ್ವಂಸಗೊಳಿಸಿತ್ತು. ಇದಕ್ಕೂ ಮುನ್ನ ಪಾಕ್‌ ಭಾರತದ ಮೇಲೆ ನಡೆಸಿದ ದಾಳಿಗಳನ್ನೆಲ್ಲ ಎಸ್‌-400 ವಾಯುರಕ್ಷಣಾ ವ್ಯವಸ್ಥೆ ವಿಫಲಗೊಳಿಸಿತು. ಒಟ್ಟಿನಲ್ಲಿ ಭಾರತದ ಎದುರು ಮಂಡಿಯೂರಿದ ಪಾಕ್‌ ಕಾಡಿ ಬೇಡಿ ಕದನ ವಿರಾಮ ಮಾಡಿಕೊಂಡಿತು. ಭಾರತದ ಈ ಪರಾಕ್ರಮ ಕಂಡು ದಂಗಾಗಿರುವ ಪಾಕಿಸ್ತಾನ ಈಗ ತನಗೂ ಅತ್ಯಾಧುನಿಕ ವಾಯುರಕ್ಷಣಾ ವ್ಯವಸ್ಥೆ ಮತ್ತು ಫೈಟರ್‌ ಜೆಟ್‌ಗಳನ್ನು ಕಲ್ಪಿಸುವಂತೆ ಅಮೆರಿಕದ (America) ಬಳಿ ಬೇಡಿಕೊಂಡಿದೆ.

BrahMos

ಶೆಹಬಾಜ್‌ ಸರ್ಕಾರ ಸುಳ್ಳು ಹಬ್ಬಿಸುತ್ತಿದೆ
ಪಾಕಿಸ್ತಾನದ 13 ಸದಸ್ಯರ ನಿಯೋಗದ ಭಾಗವಾಗಿರುವ ಪಾಕ್‌ ಸಚಿವ ಮುಸಾದಿಕ್ ಮಲಿಕ್ ವಾಷಿಂಗ್ಟನ್‌ನಲ್ಲಿ ಮಾತನಾಡಿದ್ದಾರೆ. ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆ ಮತ್ತು ಯುದ್ಧ ವಿಮಾನಗಳನ್ನು ತನಗೆ ಮಾರಾಟ ಮಾಡುವಂತೆ ಮನವಿ ಮಾಡಿದ್ದಾರೆ. ಇದೇ ವೇಳೆ ಶೆಹಬಾಜ್‌ (Shehbaz Sharif) ಸರ್ಕಾರವು ತನ್ನ ಜನತೆಗೆ ಭಾರತಕ್ಕಿಂತ ಹೆಚ್ಚಿನ ಮಿಲಿಟರಿ ಪ್ರಯೋಜನ ಹೊಂದಿರುವುದಾಗಿ ಸುಳ್ಳು ಹಬ್ಬಿಸುತ್ತಿದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲೂ ವೈರಲ್‌ ಆಗಿದೆ.

s 500 air defence system

ನಾವೇ ನಾಶವಾಗಿಬಿಡ್ತಿದ್ವಿ
ಮುಂದುವರಿದು… ಭಾರತ 80 ವಿಮಾನಗಳೊಂದಿಗೆ 400 ಕ್ಷಿಪಣಿಗಳನ್ನ ಹಾರಿಸಿತ್ತು. ಯುದ್ಧದ ವೇಳೆ ನಮಗೆ ಏನಾಯ್ತು ಅನ್ನೋದನ್ನ ನೀವು ನೋಡಿರಬೇಕು, ನಾವೇ ನಾಶವಾಗಿಬಿಡುತ್ತಿದ್ದೆವು. ನಮ್ಮಲ್ಲಿ ಸೂಕ್ತ ವಾಯು ರಕ್ಷಣಾ ವ್ಯವಸ್ಥೆಗಳಿಲ್ಲದಿರುವುದೇ ಇದಕ್ಕೆ ಕಾರಣ. ಭಾರತ ಬಳಸುತ್ತಿದ್ದ ತಂತ್ರಜ್ಞಾನವು ಅತ್ಯಾಧುನಿಕವಾದುದು, ತುಂಬಾ ಮುಂದುವರಿದಿದೆ. ಆದ್ದರಿಂದ ಆ ರೀತಿಯ ತಂತ್ರಜ್ಞಾನವನ್ನ ನಮಗೆ ಕೊಡಿ. ನಾವು ಖರೀದಿಸಲು ಉತ್ಸುಕವಾಗಿದ್ದೇವೆ ಎಂದು ಸಹ ಪಾಕ್‌ ಸಚಿವ ಹೇಳಿದ್ದಾರೆ.

ಜೈಶ್‌ ಉಗ್ರ ಸಂಘಟನೆ ವಿರುದ್ಧ ಕ್ರಮ ತಗೊಳ್ಳಿ
ಓಂದು ದಿನದ ಹಿಂದೆಯಷ್ಟೇ ಅಮೆರಿಕ ಸಂಸದ ಬ್ರಾಡ್‌ ಶೆರ್ಮನ್ (Brad Sherman) ಜೈಶ್‌ ಎ ಮೊಹಮ್ಮದ್‌ (Jaish-e-Mohammed) ಭಯೋತ್ಪಾದಕ ಸಂಘಟನೆ ವಿರುದ್ಧ ನಿರ್ಣಾಯಕ ಕ್ರಮ ಕೈಗೊಳ್ಳುವಂತೆ ಪಾಕ್‌ಗೆ ಬಲವಾದ ಸಂದೇಶ ನೀಡಿದ್ದರು. 2002 ರಲ್ಲಿ ವಾಲ್ ಸ್ಟ್ರೀಟ್ ಜರ್ನಲ್‌ನ ಪತ್ರಕರ್ತ ಡೇನಿಯಲ್ ಪರ್ಲ್ (Daniel Pearl) ಅವರ ಹತ್ಯೆ ಸೇರಿದಂತೆ ಅನೇಕ ಘೋರ ಅಪರಾಧಗಳಿಗೆ ಈ ಗುಂಪು ಕಾರಣವಾಗಿದೆ. ಹಾಗಾಗಿ ಈ ಉಗ್ರ ಸಂಘಟನೆಯನ್ನು ಬುಡಸಮೇತ ನಿರ್ಮೂಲನೆ ಮಾಡಬೇಕು. ಭಯೋತ್ಪಾದನೆ ವಿರುದ್ಧ ಬಲವಾದ ಹೋರಾಟ ನಡೆಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಪಾಕಿಸ್ತಾನ ತೆಗೆದುಕೊಳ್ಳಬೇಕು ಎಂದು ಎಚ್ಚರಿಸಿದ್ದರು.

pasrus air defence radar

ಭಾರತದ ಐಡಿಯಾ ಕಾಪಿ
ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಬಳಿಕ ಪಾಕ್‌ ಪ್ರಾಯೋಜಿತ ಮುಖವಾಡವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಬಯಲು ಮಾಡಲು ಭಾರತ 7 ಸರ್ವಪಕ್ಷಗಳ ನಿಯೋಗವನ್ನು ವಿದೇಶಗಳಿಗೆ ಕಳುಹಿಸಿದೆ. ಇದೇ ಐಡಿಯಾ ಕಾಪಿ ಮಾಡಿರುವ ಪಾಕಿಸ್ತಾನ ಸಹ ತನ್ನ ದೇಶದ ನಿಯೋಗವನ್ನ ವಿದೇಶಗಳಿಗೆ ಕಳುಹಿಸಿದೆ. ಆದ್ರೆ ಪಾಕ್‌ ನಿಲುವಿಗೆ ವಿದೇಶಗಳಿಂದಲೂ ವಿರೋಧ ವ್ಯಕ್ತವಾಗುತ್ತಿದೆ.

Share This Article