– ಭಯೋತ್ಪಾದನೆ ತಡೆಗೆ ಪಾಕ್‌ನಲ್ಲಿ ಸ್ಥಾಪನೆಯಾಗಲಿದೆಯಂತೆ ಸ್ಪೆಷಲ್ ಕಮಾಂಡ್
– ಅಮೆರಿಕ-ಪಾಕ್ ನಡುವೆ ದ್ವಿಪಕ್ಷೀಪ ಒಪ್ಪಂದ
ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif), ಫೀಲ್ಡ್ ಮಾರ್ಷಲ್ ಅಸೀಮ್ ಮುನೀರ್ ಶ್ವೇತಭವನದ ಓವಲ್ ಕಚೇರಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ಭೇಟಿಯಾಗಿದ್ದು, ಸುಮಾರು 90 ನಿಮಿಷಗಳ ಕಾಲ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.
ವಿಶ್ವಸಂಸ್ಥೆಯ (United Nations) ಸಾಮಾನ್ಯ ಸಭೆಯ 80ನೇ ಅಧಿವೇಶನದಲ್ಲಿ ಭಾಗಿಯಾಗಲು ಅಮೆರಿಕ ಪ್ರವಾಸದಲ್ಲಿರುವ ಷರೀಫ್ ಅವರಿಂದು ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅದಕ್ಕೂ ಮುನ್ನವೇ ಸೇನಾ ಮುಖಸ್ಥರೊಟ್ಟಿಗೆ ಟ್ರಂಪ್ ಅವರನ್ನ ಭೇಟಿಯಾಗಿದ್ದು, ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆಂದು ತಿಳಿದುಬಂದಿದೆ. ಭದ್ರತೆ ಮತ್ತು ಆರ್ಥಿಕತೆಗೆ ಸಂಬಂಧಿಸಿದ ಅನೇಕ ಒಪ್ಪಂದಗಳಿಗೆ ಸಹಿ ಮಾಡಿದ್ದಾರೆ. ಭಯೋತ್ಪಾದನೆ ನಿಗ್ರಹ ಒಪ್ಪಂದಕ್ಕೂ ಸಹಿ ಮಾಡಲಾಗಿದ್ದು, ಪರಸ್ಪರ ಸಹಕಾರದೊಂದಿಗೆ ಮುಂದುವರಿಯಲು ಒಪ್ಪಿಕೊಂಡಿರುವುದಾಗಿ ತಿಳಿದುಬಂದಿದೆ. ಈ ಸಂದರ್ಭದಲ್ಲಿ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್, ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಕೂಡ ಉಪಸ್ಥಿತರಿದ್ದರು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಸುಂಕ ಸುಂಕ ಸುಂಕ; ಔಷಧಗಳ ಆಮದಿನ ಮೇಲೆ 100% ಸುಂಕ ಘೋಷಿಸಿದ ಟ್ರಂಪ್ – ಭಾರತಕ್ಕೇನು ಎಫೆಕ್ಟ್?
ಉಭಯ ದೇಶಗಳ ಒಪ್ಪಂದಗಳು ಭದ್ರತೆ, ಆರ್ಥಿಕತೆ, ಕಾರ್ಯತಂತ್ರದ ಪಾಲುದಾರಿಕೆ, ಭಯೋತ್ಪಾದನಾ ನಿಗ್ರಹ ಹಾಗೂ ಪಾಕ್‌ನಲ್ಲಿ (Pakistan) ಖನಿಜ ಸಂಪತ್ತಿನ ಶೋಧನೆ ತೈಲ ಪರಿಶೋಧನೆಯನ್ನು ಕೇಂದ್ರೀಕರಿಸಿತ್ತು. ಜೊತೆಗೆ ಬಾಗ್ರಾಮ್ ವಾಯುನೆಲೆ ಹಾಗೂ ಆ ಪ್ರದೇಶದಲ್ಲಿ ಹೆಚ್ಚುತ್ತಿರುವ ಚೀನಾ ಪ್ರಭಾವದ ಕುರಿತು ಚರ್ಚೆಗಳು ನಡೆದಿವೆ ಎನ್ನಲಾಗಿದೆ. ಇದನ್ನೂ ಓದಿ: ಟ್ರಂಪ್ H-1B ವೀಸಾ ಟಫ್ ರೂಲ್ಸ್ ನಡುವೆಯೂ ಭಾರತೀಯರಿಗೆ ಮಣೆ ಹಾಕಿದ ಕಂಪನಿಗಳು – ಮೈಸೂರಲ್ಲಿ ಓದಿದ್ದ ವ್ಯಕ್ತಿಗೆ ಸಿಇಒ ಪಟ್ಟ
ಪಾಕ್‌ನಲ್ಲಿ ಜಂಟಿ ಭಯೋತ್ಪಾದನಾ ನಿಗ್ರಹ ಘಟಕ ಸ್ಥಾಪನೆ
ಪಹಲ್ಗಾಮ್ ಉಗ್ರರಿಗೆ ಕುಮ್ಮಕ್ಕು ನೀಡಿದ್ದ ಪಾಕಿಸ್ತಾನ ಇದೀಗ ಅಮೆರಿಕದೊಟ್ಟಿಗೆ ಭಯೋತ್ಪಾದನೆ ನಿಗ್ರಹ ಒಪ್ಪಂದ ಮಾಡಿಕೊಂಡಿದೆ. ಅದಕ್ಕಾಗಿ ಪಾಕಿಸ್ತಾನದಲ್ಲಿ ಜಂಟಿ ಭಯೋತ್ಪಾದನಾ ನಿಗ್ರಹ ಘಟಕ ಸ್ಥಾಪಿಸುವ ನಿರ್ಧಾರವನ್ನೂ ಕೈಗೊಂಡಿದೆ. ಇದೇ ವೇಳೆ ಟ್ರಂಪ್ ಅಫ್ಘಾನ್‌ನಿಂದ ಬರುತ್ತಿರುವ ಉಗ್ರ ಬೆದರಿಕೆಗಳನ್ನು ಪರಿಹರಿಸುವುದಾಗಿ ಟ್ರಂಪ್ ಪಾಕ್ ಪ್ರಧಾನಿ, ಅಸಿಮ್ ಮುನೀರ್‌ಗೆ ಭರವಸೆ ನೀಡಿದ್ದಾರೆ.
ಇನ್ನೂ ಸಭೆಯ ಬಳಿಕ ಮಾತನಾಡಿದ ಟ್ರಂಪ್, ಭಾರತ ಪಾಕಿಸ್ತಾನ ನಡುವಿನ ಭೀಕರ ಯುದ್ಧ ನಿಲ್ಲಿಸಿದ್ದು ನಾನೇ ಅಂತ ಬಾಯಿ ಬಡಿದುಕೊಂಡಿದ್ದಾರೆ. ಇದನ್ನೂ ಓದಿ: ಭಾರತ ನಮ್ಮ ಶಿಬಿರವನ್ನ ನಾಶಮಾಡಿದೆ – ಜೈಶ್ ಬಳಿಕ ಆಪರೇಷನ್ ಸಿಂಧೂರ ಸತ್ಯ ಒಪ್ಪಿಕೊಂಡ ಲಷ್ಕರ್ ಉಗ್ರ
ಕದನ ವಿರಾಮ ಹೇಳಿಕೆಗೆ ಪಾಕ್ ಪ್ರಧಾನಿ ಪ್ರತಿಧ್ವನಿ
ಟ್ರಂಪ್ ಭೇಟಿ ಬಳಿಕ ಮಾತನಾಡಿದ ಷರೀಫ್, ಕದನ ವಿರಾಮ ಉಲ್ಲೇಖಿಸಿ ಟ್ರಂಪ್ ಅವರನ್ನ ಶ್ಲಾಘಿಸಿದ್ದಾರೆ. ಅಧ್ಯಕ್ಷ ಟ್ರಂಪ್ ಅವರ ದಿಟ್ಟತನ ಮತ್ತು ನಿರ್ಣಾಯಕ ನಾಯಕತ್ವ ಭಾರತ-ಪಾಕಿಸ್ತಾನ ಕದನ ವಿರಾಮಕ್ಕೆ ಅನುಕೂಲ ಮಾಡಿಕೊಟ್ಟಿತು. ಅಲ್ಲದೇ ಗಾಜಾದಲ್ಲಿನ ಸಂಘರ್ಷ ಕೊನೆಗೊಳಿಸಲು ಹಾಗೂ ಮಧ್ಯಪ್ರಾಚ್ಯದಲ್ಲಿ ಶಾಂತಿ ಪುನಸ್ಥಾಪಿಸುವ ನಿರ್ಧಾರ ಕೈಗೊಂಡಿರುವುದು ಶ್ಲಾಘನೀಯ ಎಂದು ಟ್ರಂಪ್ ಪರ ಹಾಡಿಹೊಗಳಿದರು.


