– ನಮ್ಮ ಮಕ್ಕಳು ಅಲ್ಲಿ ಸಾಯುತ್ತಿದ್ದಾರೆ
– ನೀವು ಇಲ್ಲಿ ಇಷ್ಟು ಖುಷಿಯಿಂದ ಹೇಗೆ ಇರಲು ಸಾಧ್ಯ?
– ಸತ್ತ ಮೇಲೂ ಮತ್ತೆ 3-4 ಬಾರಿ ಗುಂಡಿನಿಂದ ದಾಳಿ
– ಪಬ್ಲಿಕ್ ಟಿವಿಯಲ್ಲಿ ಉಗ್ರರ ಕ್ರೌರ್ಯ ಬಿಚ್ಚಿಟ್ಟ ಸುಜಾತ
ಬೆಂಗಳೂರು: “ಸಣ್ಣ ಮಗು ಇದೆ ಬಿಟ್ಟುಬಿಡಿ ಅಂತ ಕೈ ಮುಗಿದರೂ ಉಗ್ರರು ನನ್ನ ಪತಿ ಮೇಲೆ ಶೂಟ್ ಮಾಡಿದರು. ನೀವು ಇಲ್ಲಿ ಇಷ್ಟು ಖುಷಿಯಿಂದ ಹೇಗೆ ಇರಲು ಸಾಧ್ಯ ಅಂತ ಪ್ರಶ್ನಿಸಿ ಉಗ್ರರು ಜನರ ಮೇಲೆ ಗುಂಡು ಹಾರಿಸುತ್ತಿದ್ದರು” – ಇದು ಪಹಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಬಲಿಯಾದ ಭರತ್ ಭೂಷಣ್ (Bharath Bhushan) ಪತ್ನಿ ಡಾ.ಸುಜಾತ ಅವರ ಮಾತುಗಳು.
ಇಂದು ಬೆಳಗ್ಗೆ ಭರತ್ ಭೂಷಣ್ ಪಾರ್ಥಿವ ಶರೀರ ಇಂಡಿಗೋ ವಿಮಾನದಲ್ಲಿ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ಅಲ್ಲಿಂದ ಅಬುಲೆನ್ಸ್‌ನಲ್ಲಿ ಶವವನ್ನು ಮತ್ತೀಕೆರೆಯಲ್ಲಿರುವ ಸುಂದರ ನಗರಕ್ಕೆ ತರಲಾಯಿತು. ಮನೆಗೆ ಬಂದ ಬಳಿಕ ಸುಜಾತ (Dr. Sujatha) ಅವರು ಪಬ್ಲಿಕ್ ಟಿವಿಯಲ್ಲಿ (Pahalgam Terror Attack) ಉಗ್ರರ ಕರಾಳ ಮುಖವನ್ನು ಅನಾವರಣ ಮಾಡಿ ಕೊನೆಯ ಭಯಾನಕ ಕ್ಷಣಗಳನ್ನ ನೆನೆದು ಬಿಕ್ಕಿಬಿಕ್ಕಿ ಅತ್ತರು.
ಸುಜಾತ ಹೇಳಿದ್ದೇನು?
ನಾವು ಏ.18ಕ್ಕೆ ಕಾಶ್ಮೀರಕ್ಕೆ (Jammu Kashmir) ಹೋಗಿದ್ದೆವು. ಏ.22 ನಮ್ಮ ಪ್ರವಾಸದ ಕೊನೆಯ ದಿನ ಅಂದು ನಾವು ಪಹಲ್ಗಾಮ್ ಭೇಟಿ ನೀಡಿದ್ದೆವು. ಪಹಲ್ಗಾಮ್ ಬೈಸರನ್ ಹುಲ್ಲುಗಾವಲು ಇರುವ ಸುಂದರ ಪ್ರದೇಶವನ್ನು ಮಿನಿ ಸ್ವಿಜ್ಜರ್ಲ್ಯಾಂಡ್ ಎಂದು ಕರೆಯಲಾಗುತ್ತದೆ. ಈ ಕಾರಣಕ್ಕೆ ನಾವು ಆ ಜಾಗಕ್ಕೆ ಹೋಗಿದ್ದೆವು.
ಪಹಲ್ಗಾವ್‌ನಿಂದ 3-4 ಕಿ.ಮೀ ದೂರದವರೆಗೆ ಕುದುರೆಯಲ್ಲಿ ಬೈಸರನ್‌ಗೆ ಹೋಗಿದ್ದೆವು. ಆ ಬಯಲು ಪ್ರದೇಶದಲ್ಲಿ ಕುಳಿತು ಮಗುವಿನ ಜೊತೆ ಆಟ ಆಡುತ್ತಾ ಕುಳಿತಿದ್ದೆವು. ಮೈದಾನದಲ್ಲಿ ಇದ್ದ ಟೆಂಟ್‌ನಲ್ಲಿ ಕಾಶ್ಮೀರದ ದಿರಿಸು ಧರಿಸಿ ಫೋಟೋ ತೆಗೆಯಬಹುದಿತ್ತು. ಇದನ್ನೂ ಓದಿ: ಪಹಲ್ಗಾಮ್ ಉಗ್ರರ ದಾಳಿ – 65 ಸಾವಿರಕ್ಕೇರಿಸಿದ್ದ ಪ್ರಯಾಣ ದರ 15,000ಕ್ಕೆ ಇಳಿಕೆ
ನಾನು ಮತ್ತು ಇನ್ನೊಂದು ಕುಟುಂಬದವರು ಕೊನೆಯ ಎರಡು ದಿನದಿಂದ ಜೊತೆಯಾಗಿ ಓಡಾಡುತ್ತಿದ್ದೆವು. ಫೋಟೋ ಎಲ್ಲಾ ತೆಗೆದು ಮುಗಿಯುಷ್ಟರಲ್ಲಿ ಮಧ್ಯಾಹ್ನ 1:30 – 1:45 ಆಗಿರಬಹುದು. ಮಧ್ಯಾಹ್ನ ಆಗಿರುವ ಕಾರಣ ಊಟ ಮಾಡಲು ಮತ್ತೆ ಕೆಳಗೆ ಹೋಗಬೇಕಿತ್ತು. ಹೀಗಾಗಿ ನಾವು ಬೈಸರನ್‌ನಿಂದ ಹೊರಡಲು ಮುಂದಾಗುತ್ತಿದ್ದಾಗ ಜೋರಾಗಿ ಗುಂಡಿನ ಶಬ್ಧ ಕೇಳಿಸಿತು.
ಈ ಶಬ್ದ ಕೇಳಿದಾಗ ಪಕ್ಷಿ, ಪ್ರಾಣಿ ಓಡಿಸಲು ಗನ್‌ನಿಂದ ಶೂಟ್ ಮಾಡುತ್ತಿರಬಹುದು ಎಂದು ಭಾವಿಸಿದೆವು. ಆದರೆ ಶಬ್ಧದ ತೀವ್ರತೆ ಜಾಸ್ತಿ ಆಗುತ್ತಿದ್ದಂತೆ ಹತ್ತಿರದಲ್ಲೇ ಏನೋ ದಾಳಿ ನಡೆಯುತ್ತಿದೆ ಎನ್ನುವುದು ಗೊತ್ತಾಗಿ ನಾನು, ಪತಿ, ಮಗು ಟೆಂಟ್ ಹಿಂಭಾಗದಲ್ಲಿ ಅಡಗಿ ಕುಳಿತೆವು. ಹಿಂಭಾಗದಲ್ಲಿ ಅಡಗಿ ಕುಳಿತಿದ್ದಾಗ 100 ಅಡಿ ದೂರದಲ್ಲಿ ಉಗ್ರ ಒಬ್ಬರನ್ನು ಮಾತನಾಡಿಸಿ ಶೂಟ್ ಮಾಡಿದ. ನಂತರ ಒಬ್ಬರು ಹಿರಿಯರನ್ನು ಹಿಂದಿಯಲ್ಲಿ ಮಾತನಾಡಿಸಿ, “ನೀವು ಹೇಗೆ ಖುಷಿಯಲ್ಲಿ ಇದ್ದೀರಿ. ಅಲ್ಲಿ ನಮ್ಮ ಮಕ್ಕಳು ಸಾಯುತ್ತಿದ್ದಾರೆ. ಇಲ್ಲಿ ನೀವು ಮಕ್ಕಳೊಂದಿಗೆ ಹೇಗೆ ಆಟ ಆಡುತ್ತಾ ಖುಷಿಯಾಗಿದ್ದೀರಿ” ಎಂದು ಪ್ರಶ್ನಿಸಿದ. ಅದಕ್ಕೆ ಅವರು,”ನಾನು ಏನು ಮಾಡಬೇಕು? ಯಾವ ರೀತಿ ಸಹಾಯ ಮಾಡಬೇಕು” ಎಂದು ಕೇಳಿದರು. ಅವರ ಮಾತನ್ನು ಕೇಳದೇ ಅವನು ಶೂಟ್ ಮಾಡಿ ನೂಕಿದ. ಶೂಟ್ ಮಾಡಿದ ಬಳಿಕ ಮತ್ತೆ ಮೂರು-ನಾಲ್ಕು ಬಾರಿ ಗುಂಡು ಹಾರಿಸಿದ.
ನಮ್ಮ ಟೆಂಟ್ ಬಳಿ ಬಂದಾಗ ನಾನು ಮಗುವನ್ನು ಬಚ್ಚಿಟ್ಟುಕೊಂಡೆ. “ಸಣ್ಣ ಮಗು ಇದೆ ಬಿಟ್ಟುಬಿಡಿ ಅಂತ ಕೈ ಮುಗಿದು ನಮ್ಮನ್ನು ಏನು ಮಾಡಬೇಡಿ” ಎಂದು ಬೇಡಿಕೊಂಡೆ. ಉಗ್ರರು ನನ್ನ ಪತಿ ಭೂಷಣ್ ಮೇಲೆ ಶೂಟ್ ಮಾಡಿ ಹೋದ. ಉಗ್ರ ಹೋಗುತ್ತಿದ್ದಂತೆ ಅಲ್ಲಿದ್ದವರು ಓಡಿ ಹೋಗಲು ಮುಂದಾದರು. ನಾನು ಮಗುವನ್ನು ಎತ್ತಿಕೊಂಡು ಓಡಲು ಆರಂಭಿಸಿದೆ. ಇದನ್ನೂ ಓದಿ: ಏ.16ಕ್ಕೆ ಮದುವೆ, 22ಕ್ಕೆ ಪತಿ ಸಾವು – ಮದ್ವೆಯಾಗಿ ವಾರ ಕಳೆದಿಲ್ಲ, ಮೆಹಂದಿ ಬಣ್ಣ ಮಾಸಿಲ್ಲ: ಇದು ವಿನಯ್ ನರ್ವಾಲ್ – ಹಿಮಾಂಶಿ ದುರಂತ ಕಥೆ
ನಾನು ಓಡಿ ಬರುವಾಗ ಅಲ್ಲಿ ಹೆಣಗಳ ರಾಶಿ ಇತ್ತು. ನಮ್ಮನ್ನು ಅಟ್ಟಿಸಿಕೊಂಡು ಬಂದು ದಾಳಿ ಮಾಡಬಹುದು ಎಂಬ ಭಯದಿಂದ ನಾನು ಮಗುವನ್ನು ಎತ್ತಿಕೊಂಡು ಓಡತೊಡಗಿದೆ. ಈ ವೇಳೆ ಹಲವು ಮಂದಿ ಓಡಿಕೊಂಡು ಬರುತ್ತಿದ್ದರು. ಕೊನೆಗೆ ಕುದುರೆ ಸಿಕ್ಕಿತು. ಕುದುರೆಯಲ್ಲಿ ಕುಳಿತು ಸಿಆರ್‌ಪಿಎಫ್ ಮೆಸ್‌ಗೆ ಬಂದೆ.
ಮಗುವನ್ನು ಬಚ್ಚಿಟ್ಟುಕೊಂಡೆ:
ಕೊನೆಯದಾಗಿ ಭೂಷಣ್ ಅವರು ಏನು ಹೇಳಿದರು ಎಂದು ಕೇಳಿದ್ದಕ್ಕೆ, ಏನು ಆಗಲ್ಲ, ಧೈರ್ಯವಾಗಿರು ಎಂದು ನಮಗೆ ಧೈರ್ಯ ತುಂಬುತ್ತಿದ್ದರು. ಉಗ್ರರು ಪತಿಯ ಮೇಲೆ ಗುಂಡಿನ ದಾಳಿ ಮಾಡಿದ ಬಳಿಕ ನಾನು ತಲೆ ಎತ್ತಲೇ ಇಲ್ಲ. ಮಗುವನ್ನು ಬಚ್ಚಿಟ್ಟುಕೊಂಡೆ. ನನಗೆ ಬೇಕಾದರೆ ಗುಂಡು ಹೊಡೆಯಲಿ ಮಗುವಿಗೆ ಏನು ಆಗದೇ ಇರಲಿ ಎಂದು ಆತನನ್ನು ಕಾಪಾಡಲು ಮುಂದಾದೆ. ಉಗ್ರರು ಪತಿಯ ತಲೆಗೆ ಗುಂಡು ಹಾರಿಸಿದ್ದರು. ನಾನು ವೈದ್ಯೆಯಾಗಿರುವ ಕಾರಣ ಭೂಷಣ್ ಇನ್ನು ಬದುಕುವುದಿಲ್ಲ ಎನ್ನುವುದು ಗೊತ್ತಾಯಿತು. ಹೀಗಾಗಿ ನನ್ನ ಮೂರು ವರ್ಷದ ಮಗುವನ್ನು ಉಳಿಸಲು ನಾನು ಅಲ್ಲಿಂದ ಓಡಿಕೊಂಡು ಬಂದೆ ಎಂದು ಹೇಳಿ ಭಾವುಕರಾದರು.