ನವದೆಹಲಿ: ಪಹಲ್ಗಾಮ್ ದಾಳಿಯ ಬಳಿಕ ಭಾರತಕ್ಕೆ (India) ಬಿಸಿ ಮುಟ್ಟಿಸಲು ಹೋಗಿ ಪಾಕಿಸ್ತಾನ (Pakistan) ಮತ್ತೆ ತನ್ನ ಕೈ ಸುಟ್ಟುಕೊಂಡಿದೆ.
ಭಾರತದ ವಿಮಾನಯಾನ ಕಂಪನಿಗಳಿಗೆ ಪಾಕಿಸ್ತಾನ ತನ್ನ ವಾಯುಸೀಮೆಯನ್ನು ಬಳಸದಂತೆ ನಿರ್ಬಂಧ ಹೇರಿತ್ತು. ಆದರೆ ಈಗ ವಿದೇಶಿ ವಿಮಾನಯಾನ ಕಂಪನಿಗಳು ಪಾಕ್ ವಾಯುಸೀಮೆಯನ್ನು (Airspace) ಬಳಸದೇ ಇರಲು ಮುಂದಾಗಿದೆ.
ಹೌದು. ಭಾರತಕ್ಕೆ ನಿರ್ಬಂಧ ಹೇರಿದಂತೆ ಪಾಕಿಸ್ತಾನ ವಿದೇಶಿ ಏರ್‌ಲೈನ್ಸ್ ಕಂಪನಿಗಳಿಗೆ ಯಾವುದೇ ನಿರ್ಬಂಧ ಹೇರಿಲ್ಲ. ಆದರೆ ವಿದೇಶಿ ಕಂಪನಿಗಳು ಸ್ವಯಂಪ್ರೇರಿತವಾಗಿ ಪಾಕ್ ವಾಯುಸೀಮೆಯನ್ನು ಬಳಸದೇ ಇರಲು ನಿರ್ಧರಿಸಿದೆ. ಇದನ್ನೂ ಓದಿ: ಪಾಕಿಸ್ತಾನದ ಭಯೋತ್ಪಾದಕ ಸಂಪರ್ಕಗಳು ರಹಸ್ಯವೇನಲ್ಲ: ಬಿಲಾವಲ್ ಭುಟ್ಟೋ
ಪಾಕ್ ವಾಯುಮಾರ್ಗ ಬಂದ್ ಆಗಿರುವ ಕಾರಣ ಯುರೋಪ್ ಕಡೆ ಹೋಗುವ ಭಾರತೀಯ ವಿಮಾನಗಳು ಹೆಚ್ಚಿನ ಸಮಯ ಹಾರಾಟ ನಡೆಸಬೇಕಾಗುತ್ತದೆ ಎಂದು ಪ್ರಯಾಣ ದುಬಾರಿ ಆಗುತ್ತಿದೆ.
ಪಾಕಿಸ್ತಾನದ ಏರೋಸ್ಪೇಸ್ ಪ್ರಾಧಿಕಾರವು ತನ್ನ ವಾಯುಪ್ರದೇಶವನ್ನು ಬಳಸಿದ್ದಕ್ಕೆ ವಿಮಾನಯಾನ ಸಂಸ್ಥೆಗಳಿಂದ ಓವರ್‌ಫ್ಲೈಟ್ ಶುಲ್ಕಕ್ಕಾಗಿ ಪ್ರತಿ ತಿಂಗಳು ಲಕ್ಷಾಂತರ ಡಾಲರ್ ಪಡೆಯುತ್ತಿತ್ತು. ಕಳೆದ ಎರಡು ದಿನಗಳಿಂದ ಲುಫ್ಥಾನ್ಸ, ಬ್ರಿಟಿಷ್ ಏರ್‌ವೇಸ್, ಸ್ವಿಸ್, ಏರ್ ಫ್ರಾನ್ಸ್, ಇಟಲಿಯ ಐಟಿಎ ಮತ್ತು ಪೋಲೆಂಡ್‌ನ ಲಾಟ್ ಕಂಪನಿಗಳು ಪಾಕ್ ವಾಯುಸೀಮೆಯನ್ನು ಬಳಸದೇ ಟರ್ಕಿ, ಸಿರಿಯಾ, ಸೌದಿ ಅರೇಬಿಯಾ ಮಾರ್ಗವನ್ನು ಬಳಸಿ ಭಾರತಕ್ಕೆ ಬರುತ್ತಿವೆ.
ಫೆಬ್ರವರಿ 2019 ರಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಾಲಕೋಟ್‌ನಲ್ಲಿರುವ ಭಯೋತ್ಪಾದಕ ಶಿಬಿರದ ಮೇಲೆ ಭಾರತ ನಡೆಸಿದ ವೈಮಾನಿಕ ದಾಳಿಯ ನಂತರ ವಿಮಾನಯಾನ ಸಂಸ್ಥೆಗಳಿಗೆ ವಾಯುಪ್ರದೇಶವನ್ನು ನಿಷೇಧಿಸಿತ್ತು. ನಿಷೇಧದಿಂದಾಗಿ ಪಾಕಿಸ್ತಾನ ಪ್ರಾಧಿಕಾರವು ಐದು ತಿಂಗಳ ಅವಧಿಯಲ್ಲಿ ಕನಿಷ್ಠ 100 ಮಿಲಿಯನ್ ಡಾಲರ್‌ಗಳನ್ನು ಕಳೆದುಕೊಂಡಿತ್ತು.