ನವದೆಹಲಿ/ಇಸ್ಲಾಮಾಬಾದ್: ಪಹಲ್ಗಾಮ್‌ನಲ್ಲಿ 26 ಜನರ ಬಲಿ ಪಡೆದ ಪಾಕಿಸ್ತಾನ ಪ್ರಾಯೋಜಿತ ಉಗ್ರರ ದಾಳಿಗೆ (Pahalgam Terror Attack) ದಿನ ಕಳೆದಿದೆ. ಸೇನೆಗೆ ಪರಮಾಧಿಕಾರ ಕೊಟ್ಟು ಪ್ರತೀಕಾರಕ್ಕೆ ಭಾರತ (India) ಸಿದ್ಧತೆ ನಡೆಸಿರುವ ಹೊತ್ತಲ್ಲೇ ರಣಹೇಡಿ ಪಾಕಿಸ್ತಾನವು (Pakistan) ಅಮೆರಿಕ, ಚೀನಾಗೆ ಮೊರೆಯಿಟ್ಟಿದೆ.
ಯುದ್ಧ ಮಾಡದಂತೆ ಭಾರತದ ಮೇಲೆ ಒತ್ತಡ ಹೇರುವಂತೆ ಅಮೆರಿಕಕ್ಕೆ (USA) ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಗೋಗರೆದಿದ್ದಾರೆ. ಈ ಬೆನ್ನಲ್ಲೇ, ಅಣ್ವಸ್ತ್ರ, ರಾಷ್ಟ್ರಗಳಾದ ಭಾರತ-ಪಾಕಿಸ್ತಾನ ಜೊತೆ ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರೂಬಿಯೋ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.
ಭಾರತದ ವಿದೇಶಾಂಗ ಸಚಿವ ಜೈಶಂಕರ್ (Jaishankar) ಹಾಗೂ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ (Shahbaz Sharif) ಜೊತೆ ಪ್ರತ್ಯೇಕ ಫೋನ್ ಸಂಭಾಷಣೆ ನಡೆಸಿ, ಎರಡೂ ದೇಶಗಳು ಪರಿಸ್ಥಿತಿ ಮತ್ತಷ್ಟು ಉಲ್ಬಣಗೊಳಿಸಿಕೊಳ್ಳದಂತೆ ಮನವಿ ಮಾಡಿದ್ದಾರೆ. ಅಮೆರಿಕದಿಂದ ಸಕಾರಾತ್ಮಕ ಬೆಂಬಲ ಸಿಗದ ಹಿನ್ನೆಲೆಯಲ್ಲಿ ಈಗ ಪಾಕಿಸ್ತಾನ ಚೀನಾಗೆ ಮೊರೆಯಿಟ್ಟಿದೆ. ಪಾಕಿಸ್ತಾನದಲ್ಲಿರುವ ಚೀನಾ ರಾಯಭಾರಿ ಜೊತೆ ಪಾಕ್ ಪ್ರಧಾನಿ ಸಭೆ ನಡೆಸಿದ್ದಾರೆ. ಇದನ್ನೂ ಓದಿ: ನೀವು ಬರೋದು ಬೇಡ – ತನ್ನ ಪ್ರಜೆಗಳನ್ನೇ ದೇಶಕ್ಕೆ ಸೇರಿಸದ ಪಾಕ್
ಇಸ್ಲಾಮಾಬಾದ್‌ನಲ್ಲಿ ಚೀನಾ ನಿಯೋಗದ ಜೊತೆ ಪಾಕ್ ಪಿಎಂ ಶೆಹಬಾಜ್ ಷರೀಫ್ ಮಾತುಕತೆ ನಡೆಸಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕೂಡ ಅಮೆರಿಕ ರಕ್ಷಣಾ ಸಚಿವ ಪೀಟ್ ಹೆಗ್‌ಸೆತ್ ಜೊತೆಗೂ ಮಾತಾಡಿದ್ದಾರೆ. ಭಾರತದ ರಕ್ಷಣಾ ಹಕ್ಕನ್ನು ಅಮೆರಿಕ ಬೆಂಬಲಿಸುತ್ತದೆ ಅಂತ ಪೀಟ್ ಹೇಳಿದ್ದಾರೆ. ಇದನ್ನೂ ಓದಿ: ಆಯ್ಕೆ ಮಾಡಿದ್ದು 4, ಟಾರ್ಗೆಟ್ 1 – ದಾಳಿಗೆ ಪಕ್ಕಾ ಪ್ಲ್ಯಾನ್ ಮಾಡಿದ್ದ ಉಗ್ರರು
ಭಾರತ- ಅಮೆರಿಕ ಮಾತುಕತೆ ಏನು?
ಪಹಲ್ಗಾಮ್‌ನಲ್ಲಿ 26 ಜನರ ಹತ್ಯೆಯನ್ನು ಅಮೆರಿಕ ಉಗ್ರವಾಗಿ ಖಂಡಿಸುತ್ತದೆ. `ಭಯಾನಕ’ ಉಗ್ರ ದಾಳಿಯಲ್ಲಿ ಸಾವನ್ನಪ್ಪಿದವರಿಗೆ ಸಂತಾಪ ಇದೆ. ಭಯೋತ್ಪಾದನೆಯ ವಿರುದ್ಧ ಭಾರತದೊಂದಿಗೆ ಸಹಕರಿಸಲು ಬದ್ಧವಾಗಿದೆ ಎಂದು ಮಾರ್ಕೊ ರೂಬಿಯೋ ಹೇಳಿದರು.
ಇದಕ್ಕೆ ಜೈಶಂಕರ್, ದಕ್ಷಿಣ ಏಷ್ಯಾದಲ್ಲಿ ಶಾಂತಿ, ಭದ್ರತೆಯನ್ನು ಕಾಪಾಡಿಕೊಳ್ಳಬೇಕು. ಪಹಲ್ಗಾಮ್ ದಾಳಿಯಲ್ಲಿ ಪಾಕಿಸ್ತಾನದ ನೇರ ಕೈವಾಡವಿದ್ದು ದಾಳಿಕೋರರು, ಬೆಂಬಲಿಗರು, ಸಂಚುಕೋರರು ಕಟಕಟೆಗೆ ಬರಬೇಕು. ಅಲ್ಲಿವರೆಗೆ ಉದ್ವಿಗ್ನತೆ ಶಮನಗೊಳಿಸುವ ಮಾತೇ ಇಲ್ಲ ಎಂದು ಮಾರ್ಕ್ ರೂಬಿಯೋಗೆ ಜೈಶಂಕರ್ ಕಡ್ಡಿಮುರಿದಂತೆ ಹೇಳಿದ್ದಾರೆ.
ಪಾಕಿಸ್ಥಾನ-ಅಮೆರಿಕ ಮಾತುಕತೆ ಏನು?
ಪಹಲ್ಗಾಮ್ ದಾಳಿಯನ್ನು ಸಾರ್ವಜನಿಕವಾಗಿ ಖಂಡಿಸುವಂತೆ ಅಮೆರಿಕ ತಾಕೀತು ಮಾಡಿದೆ. ಇದಕ್ಕೆ ಪಾಕ್ ಪ್ರಧಾನಿ, ಪಹಲ್ಗಾಮ್ ದಾಳಿಯಲ್ಲಿ ನಮ್ಮ ಕೈವಾಡ ಇಲ್ಲ. ಭಾರತ ಬೇಕಂತಲೇ ಪಾಕ್ ನಂಟು ಬೆಸೆಯುತ್ತಿದೆ. ಹೀಗಾಗಿ ಸ್ವತಂತ್ರ ಸಂಸ್ಥೆಯಿಂದಲೇ ಪಹಲ್ಗಾಮ್ ದಾಳಿಯ ತನಿಖೆ ನಡೆಯಲಿ ಎಂದಿದ್ದಾರೆ. ಇದಕ್ಕೆ ರುಬಿಯೋ ತನಿಖೆಗೆ ಭಾರತದ ಜೊತೆ ಸಹಕರಿಸುವಂತೆ ಷರೀಫ್‌ಗೆ ಸೂಚನೆ ನೀಡಿದ್ದಾರೆ.