ಎಮ್. ರಮೇಶ್ ರೆಡ್ಡಿ ನಿರ್ದೇಶನ ಮಾಡಿರುವ ಪಡ್ಡೆಹುಲಿ ಚಿತ್ರದ ಹಾಡುಗಳು ಸೃಷ್ಟಿಸಿರುವ ಕ್ರೇಜ್ ಕಡಿಮೆಯದ್ದೇನಲ್ಲ. ರವಿಚಂದ್ರನ್ ಸೃಷ್ಟಿಸಿದ್ದ ಪ್ರೇಮಲೋಕ ಮತ್ತೊಮ್ಮೆ ಸೃಷ್ಟಿಯಾದಂಥಾ ಸಂಭ್ರಮವೊಂದು ಈ ಹಾಡುಗಳ ಮೂಲಕವೇ ಪ್ರೇಕ್ಷಕರೆದೆಗೂ ದಾಟಿಕೊಂಡಿದೆ. ಇದುವರೆಗೂ ಒಂದೊಂದಾಗಿ ಹೊರ ಬಂದಿದ್ದ ಹಾಡುಗಳಿಗೆ ಪ್ರೇಕ್ಷಕರು ಫಿದಾ ಆಗಿದ್ದರು. ಆದರೀಗ ಪಡ್ಡೆ ಹುಲಿಯ ಅಷ್ಟೂ ಹಾಡುಗಳನ್ನು ಒಟ್ಟಿಗೆ ಕೇಳುವ ಸದಾವಕಾಶ ಕೂಡಿ ಬಂದಿದೆ.
ಯಾಕೆಂದರೆ, ಚಿತ್ರತಂಡ ಪಡ್ಡೆಹುಲಿ ಹಾಡುಗಳ ಜ್ಯೂಕ್ ಬಾಕ್ಸನ್ನು ಇದೀಗ ಅನಾವರಣಗೊಳಿಸಿದೆ. ಇದು ಕನ್ನಡ ಪ್ರೇಕ್ಷಕರ ಪಾಲಿಗೆ ಅಕ್ಷರಶಃ ಹಬ್ಬ. ಯಾಕೆಂದರೆ, ಹಿಟ್ ಹಾಡುಗಳ ಸರಮಾಲೆಯೇ ಈ ಜ್ಯೂಕ್ ಬಾಕ್ಸ್ ನಲ್ಲಿದೆ. ಒಂದು ಚಿತ್ರವೆಂದರೆ ಮೂರರಿಂದ ಆರು ಹಾಡುಗಳಿರೋದು ಮಾಮೂಲಿ. ಆದರೆ ಪಡ್ಡೆಹುಲಿ ಚಿತ್ರದ ಈ ಜ್ಯೂಕ್ ಬಾಕ್ಸ್ ನಲ್ಲಿ ಬರೋಬ್ಬರಿ ಹತ್ತು ಹಾಡುಗಳಿದ್ದಾವೆ. ಅವೆಲ್ಲವನ್ನೂ ಒಟ್ಟೊಟ್ಟಾಗಿ ಕೇಳೋ ಸದಾವಕಾಶವೊಂದು ಈಗ ಪ್ರೇಕ್ಷಕರ ಪಾಲಿಗೆ ಕೂಡಿ ಬಂದಿದೆ.
ನಾನ್ ತುಂಬಾ ಹೊಸಬ ಬಾಸು, ಯಂಡ ಯೆಂಡತಿ, ಬದುಕು ಜಟಕಾ ಬಂಡಿ, ಒಂದು ಮಾತಲ್ಲಿ, ನಿನ್ನ ಪ್ರೇಮದ ಪರಿಯ, ಚೂರ್ ಚೂರ್, ಕಳಬೇಡ ಕೊಲಬೇಡ, ಜೀ ಜೀ ಜೀ, ಹೇಳಿ ಹೋಗು ಕಾರಣ ಹಾಗೀ ಟೈಟಲ್ ಸಾಂಗ್ ಸೇರಿದಂತೆ ಒಟ್ಟು ಹತ್ತು ಹಾಡುಗಳು ಈ ಜ್ಯೂಕ್ ಬಾಕ್ಸ್ ನಲ್ಲಿವೆ. ನಿರ್ದೇಶಕ ಗುರುದೇಶಪಾಂಡೆಯವರ ಸಾರಥ್ಯದಲ್ಲಿ ಈ ಹಾಡುಗಳೆಲ್ಲವೂ ಕೂಡಾ ಈಗಾಗಲೇ ಹಿಟ್ ಆಗಿವೆ. ಈ ಮೂಲಕ ಭರತ್ ಬಿಜೆ ಸಂಗೀತ ಮೋಡಿ ಮಾಡಿದೆ.
ಇದೆಲ್ಲದಕ್ಕಿಂತಲೂ ವಿಶೇಷವಾಗಿ ಈ ಹಾಡುಗಳ ಮೂಲಕವೇ ನವನಾಯಕ ಶ್ರೇಯಸ್ ಅವರ ನಟನಾ ಚಾತುರ್ಯವೂ ಅನಾವರಣಗೊಂಡಿದೆ. ಖ್ಯಾತ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಈ ಚಿತ್ರಕ್ಕಾಗಿ ಎಂಥಾ ತಯಾರಿ ಮಾಡಿಕೊಂಡಿದ್ದಾರೆಂಬುದೂ ಹಾಡುಗಳ ಮೂಲಕವೇ ಜಾಹೀರಾಗಿದೆ. ಈ ಬಗ್ಗೆ ಪ್ರೇಕ್ಷಕರೂ ಕೂಡಾ ಮೆಚ್ಚುಗೆಯಿಂದಲೇ ಈ ಚಿತ್ರಕ್ಕಾಗಿ ಕಾತರದಿಂದ ಕಾಯಲಾರಂಭಿಸಿದ್ದಾರೆ.