ಲಕ್ನೋ: ಜೈಲಿಂದ ಜಾಮೀನಿನ ಮೇಲೆ ಹೊರ ಬಂದಿದ್ದ ಕೊಲೆ ಆರೋಪಿಯೊಬ್ಬ ಮನೆಯಲ್ಲಿ ಮಲಗಿದ್ದ ಪತ್ನಿ ಮತ್ತು ಮೂವರು ಮಕ್ಕಳನ್ನು ಗುಂಡಿಕ್ಕಿ ಕೊಂದ ಅಮಾನವೀಯ ಘಟನೆ ಉತ್ತರ ಪ್ರದೇಶದ (Uttar Pradesh) ವಾರಣಾಸಿಯ (Varanasi) ಭೈದಾನಿ ಪ್ರದೇಶದಲ್ಲಿ ನಡೆದಿದೆ.
ಹತ್ಯೆಗೀಡಾದವರನ್ನು ನೀತು ಗುಪ್ತಾ (43), ಅವರ ಪುತ್ರರಾದ ನವೇಂದ್ರ (25) ಮತ್ತು ಸುಬೇಂದ್ರ (15) ಮತ್ತು ಪುತ್ರಿ ಗೌರಂಗಿ (16) ಎಂದು ಗುರುತಿಸಲಾಗಿದೆ. ಮನೆಯಲ್ಲಿ ಹೆಂಡತಿ ಮತ್ತು ಮಕ್ಕಳು ಮಲಗಿದ್ದ ವೇಳೆ ಆರೋಪಿ ರಾಜೇಂದ್ರ ಗುಪ್ತಾ (45) ಈ ಕೃತ್ಯ ಎಸಗಿದ್ದಾನೆ.
ಘಟನೆಯ ನಂತರ ನಗರದ ರೊಹನಿಯಾ ಪ್ರದೇಶದಲ್ಲಿ ರಾಜೇಂದ್ರ ಗುಪ್ತಾ ಶವ ಪತ್ತೆಯಾಗಿದೆ. ಪ್ರಾಥಮಿಕ ತನಿಖೆಯ ವೇಳೆ ಪತ್ನಿ ಹಾಗೂ ಮೂವರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆಯ ಕುರಿತು ವಾರಾಣಸಿಯ ಡಿಸಿಪಿ ಗೌರವ್ ಬನ್ಸ್ವಾಲ್ ಮಾತನಾಡಿ, ರಾಜೇಂದ್ರ ಗುಪ್ತಾ ಹಾಗೂ ಆತನ ಕುಟುಂಬದ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನಾ ಅಥವಾ ಕೊಲೆಯಾಗಿದೆಯೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
1997ರಲ್ಲಿ ರಾಜೇಂದ್ರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿತ್ತು. ಆತ ಜಾಮೀನಿನ ಮೇಲೆ ಹೊರಬಂದಿದ್ದ ಎಂದು ಪೊಲೀಸರು (Police) ತಿಳಿಸಿದ್ದಾರೆ.