ಭುವನೇಶ್ವರ: ಆಸ್ಪತ್ರೆಯ ಆವರಣದಲ್ಲೇ ಆಂಬ್ಯುಲೆನ್ಸ್ನಲ್ಲಿದ್ದ ಆಕ್ಸಿಜನ್ (Ambulance Blast) ಸಿಲಿಂಡರ್ ಸ್ಫೋಟಗೊಂಡು ರೋಗಿಯೊಬ್ಬರು ಸಾವನ್ನಪ್ಪಿರುವ ಘಟನೆ ಮಯೂರ್ಭಂಜ್ ಜಿಲ್ಲೆಯ ಉಡಾಲಾ ಉಪವಿಭಾಗೀಯ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರನ್ನು ಉಡಾಲಾ ಪೊಲೀಸ್ ವ್ಯಾಪ್ತಿಯ ಕುಂದಬಾಯಿ ಗ್ರಾಮದ 46 ವರ್ಷದ ಸುಜೋಗ್ ಬಾರಿಕ್ ಎಂದು ಗುರುತಿಸಲಾಗಿದೆ.
ಉಸಿರಾಟದ ತೊಂದರೆ ಮತ್ತು ಜ್ವರದಿಂದ ಬಳಲುತ್ತಿದ್ದ ಸುಜೋಗ್ ಅವರನ್ನು ಬೆಳಿಗ್ಗೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಅವರ ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಭುವನೇಶ್ವರಕ್ಕೆ ಕರೆದೊಯ್ಯುವಂತೆ ವೈದ್ಯರು ಕುಟುಂಬದವರಿಗೆ ಸೂಚಿಸಿದ್ದರು.
ಕುಟುಂಬದವರು ಗುರುವಾರ ರಾತ್ರಿ ಖಾಸಗಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ಸುಜೋಗ್ ಅವರನ್ನು ಭುವನೇಶ್ವರಕ್ಕೆ ಕರೆದೊಯ್ಯಲು ಸಿದ್ಧತೆ ನಡೆಸಿದ್ದರು. ಈ ವೇಳೆ ಆಂಬ್ಯುಲೆನ್ಸ್ನಲ್ಲಿದ್ದ ಆಕ್ಸಿಜನ್ ಸಿಲಿಂಡರ್ ಏಕಾಏಕಿ ಬೆಂಕಿ ಹೊತ್ತಿಕೊಂಡು ಸ್ಫೋಟಗೊಂಡಿದೆ.
ಸಿಲಿಂಡರ್ ಸ್ಫೋಟದ ತೀವ್ರತೆಗೆ ಆಂಬ್ಯುಲೆನ್ಸ್ನ ಮೇಲಿನ ಭಾಗ ಹಾರಿಹೋಗಿ, ಹತ್ತಿರದಲ್ಲಿದ್ದ ಜನರ ಮೇಲೆ ಬಿದ್ದಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಸಾರ್ವಜನಿಕರು ಉರಿಯುತ್ತಿದ್ದ ಆಂಬ್ಯುಲೆನ್ಸ್ನಿಂದ ಸುಜೋಗ್ ಅವರನ್ನು ಹೊರಗೆ ಕರೆತಂದಿದ್ದಾರೆ. ಆದರೆ, ತೀವ್ರ ಸುಟ್ಟ ಗಾಯಗಳಿಂದ ಅವರು ಮೃತಪಟ್ಟಿದ್ದಾರೆ.ಇದನ್ನೂ ಓದಿ: ಸರೋವರಕ್ಕೆ ಅಪ್ಪಳಿಸಿದ ಹೆಲಿಕಾಪ್ಟರ್ – ಇಬ್ಬರು ನಾಪತ್ತೆ, ಐವರ ರಕ್ಷಣೆ
ಘಟನೆಯಲ್ಲಿ ಸುಜೋಗ್ ಅವರೊಂದಿಗೆ ಇದ್ದ ಇಬ್ಬರು ಸಹಾಯಕರು ಕೂಡ ಗಂಭೀರವಾಗಿ ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. ಗಾಯಾಳುಗಳನ್ನು ಉಡಾಲಾ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆಕ್ಸಿಜನ್ ಸಿಲಿಂಡರ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣವೇನು ಎಂಬುದನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.ಇದನ್ನೂ ಓದಿ: ವಿರಾಜಪೇಟೆ | ಹೇರೂರು ಎಸ್ಟೇಟ್ ಬಳಿ ಹುಲಿ ಪ್ರತ್ಯಕ್ಷ – ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಎಚ್ಚರಿಕೆ

