ಬೆಂಗಳೂರು: ಭಾರೀ ಮಳೆಗೆ ಈಜಿಪುರದ ಐದಂತಸ್ತಿನ ಕಟ್ಟಡ ವಾಲಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಾಯದ ಅಂಚಿನಲ್ಲಿರುವ ಕಟ್ಟಡ ತೆರವಿಗೆ ಬಿಬಿಎಂಪಿ ನಿರಾಕರಿಸಿದೆ.
ಎರಡು ದಿನ ಕಳೆದ್ರೂ ಸ್ಥಳಕ್ಕೆ ಬಾರದ ಕಟ್ಟಡ ಮಾಲೀಕ ರಮೇಶ್ ಪ್ರೈವೇಟ್ ಏಜೆನ್ಸಿಯಿಂದ ಡೆಮಾಲಿಷನ್ ಕಾರ್ಯ ನಡೆಸ್ತಿದ್ದಾರೆ. ಬಿಬಿಎಂಪಿ ತಮ್ಮ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂಬ ಭೀತಿಯಲ್ಲಿರುವ ರಮೇಶ್ ತೆರೆಮರೆಯಲ್ಲಿದ್ದುಕೊಂಡೇ ಡೆಮಾಲಿಷನ್ ಮಾಡಿಸುತ್ತಿದ್ದಾರೆ. ಚೇತನ ಸರ್ವಿಸ್ ಪ್ರೈವೇಟ್ ಏಜೆನ್ಸಿಗೆ ಡೆಮಾಲಿಷನ್ ಕಾರ್ಯದ ಹೊಣೆಯನ್ನ ವಹಿಸಿದ್ದಾರೆ.
ಈಗಾಗಲೇ ನಾಲ್ಕು ಹಾಗೂ ಐದನೇ ಮಹಡಿಯ ಡೆಮಾಲಿಷನ್ ಕಾರ್ಯ ಪ್ರಾರಂಭವಾಗಿದೆ. ನಾಲ್ಕು ಹಾಗೂ ಐದನೇ ಮಹಡಿಯನ್ನು ಯಾವುದೇ ಮಷೀನ್ ಬಳಸದೇ ಡೆಮಾಲಿಷನ್ ಮಾಡಿ ನಂತರ ಉಳಿದ ಮಹಡಿಗಳನ್ನು ಮಷೀನ್ ಬಳಸಿ ಡೆಮಾಲಿಷನ್ ಮಾಡಲಾಗುತ್ತದೆ.
ಬೆಂಗಳೂರಿನ ಈಜಿಪುರದಲ್ಲಿ ನಿರ್ಮಾಣ ಹಂತದಲ್ಲಿದ್ದ ಐದು ಅಂತಸ್ತಿನ ಕಟ್ಟಡ ದಿಢೀರ್ ಎಂಬಂತೆ ಎಡಭಾಗಕ್ಕೆ ವಾಲಿ ಆತಂಕ ಹುಟ್ಟಿಸಿತ್ತು. ಕಟ್ಟಡದ ಪಿಲ್ಲರ್‍ನಲ್ಲಿ ಕೂಡ ಸಂಪೂರ್ಣ ಬಿರುಕು ಕಾಣಿಸಿಕೊಂಡಿದ್ದು ತೆರವು ಕಾರ್ಯವನ್ನ ರಾತ್ರಿ ನಿಲ್ಲಿಸಲಾಗಿತ್ತು. ಈಗ ಮತ್ತೆ ತೆರವು ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಅಕ್ಕಪಕ್ಕದ ನಿವಾಸಿಗಳನ್ನು ಆ ಕಟ್ಟಡದಿಂದ ಬೇರೆಡೆ ಸ್ಥಳಾಂತರಿಸಿದ್ದಾರೆ.
ಕಟ್ಟಡದ ಪಕ್ಕದ ಮನೆಯಲ್ಲಿ ಬಾಡಿಗೆಗಿದ್ದವರು ಅಳಲು ತೋಡಿಕೊಂಡಿದ್ದಾರೆ. ನಮಗೆ ಉಳಿದುಕೊಳ್ಳಲು ಯಾವುದೇ ವ್ಯವಸ್ಥೆ ಮಾಡಿಲ್ಲ. ಊಟ ತಿಂಡಿಗೂ ಪರದಾಡುತ್ತಿದ್ದೇವೆ. ನಾವು ಬದುಕಿದ್ದೇ ಹೆಚ್ಚು. ನಮ್ಮ ಮನೆಯಲ್ಲಿದ್ದ ಸಾಮಾನುಗಳೆಲ್ಲಾ ಜಖಂ ಆಗಿವೆ. ಮುಂದೇನು ಮಾಡಬೇಕೆಂದು ತೋಚುತ್ತಿಲ್ಲ ಎಂದು ಇಲ್ಲಿನ ನಿವಾಸಿ ಶಾಕೀರಾ ಬೇಗಂ ಕಣ್ಣೀರು ಹಾಕಿದ್ದಾರೆ. ಪಕ್ಕದ ಮನೆಯಲ್ಲಿದ್ದ ಎರಡು ಕುಟುಂಬಕ್ಕೂ ಉಳಿದುಕೊಳ್ಳಲು ವ್ಯವಸ್ಥೆಯಿಲ್ಲವಾದ್ದರಿಂದ ನಿನ್ನೆಯಿಂದಲೂ ಬಾಡಿಗೆದಾರರು ಪರದಾಡುತ್ತಿದ್ದಾರೆ. ಎರಡು ಕುಟುಂಬದಿಂದ ಸೇರಿ ಒಟ್ಟು 8 ಜನ ಇಲ್ಲಿ ವಾಸವಿದ್ರು.