ಬೆಂಗಳೂರು: ರಾಜ್ಯ ಸರ್ಕಾರ (Karnataka Govt) ಇದೀಗ ಗ್ಯಾರಂಟಿ ಇಕ್ಕಟ್ಟಿನಲ್ಲಿ ಸಿಲುಕಿದೆ. ಸದ್ಯ ಗ್ಯಾರಂಟಿ ಪರಿಷ್ಕರಣೆ ನಡೆಯುತ್ತಿದ್ದು, ಇದೇ ಹೊತ್ತಲ್ಲಿ ಸರ್ಕಾರಿ ನೌಕರರನ್ನು ಗ್ಯಾರಂಟಿ ಯೋಜನೆಗಳಿಂದ ಹೊರಗಿಡಲು ಚಿಂತನೆ ನಡೆಸಿದೆ.
ಗ್ಯಾರಂಟಿ ಪ್ರಾಧಿಕಾರ ಈ ಬಗ್ಗೆ ಚಿಂತನೆ ನಡೆಸಿದ್ದು, ಸರ್ಕಾರಿ ನೌಕರರ ಕುಟುಂಬಗಳನ್ನು ಗ್ಯಾರಂಟಿ ಯೋಜನೆಗಳಿಂದ (Guarantee Scheme) ಕಡಿತಗೊಳಿಸುವ ಬಗ್ಗೆ ಚರ್ಚಿಸುತ್ತಿದೆ. ಸದ್ಯ ಪ್ರಾಧಿಕಾರವು ಸರ್ಕಾರಿ ನೌಕರರಿಗೆ ಸ್ವಯಂ ಪ್ರೇರಿತವಾಗಿ ಗ್ಯಾರಂಟಿ ಸೌಲಭ್ಯ ಬಿಟ್ಟುಕೊಡಿ ಎಂದು ಸಲಹೆ ನೀಡಿದೆ.
ಈ ಕುರಿತು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ ರೇವಣ್ಣ (HM Revanna) ಅವರು ʻಪಬ್ಲಿಕ್ ಟಿವಿʼ ಜೊತೆ ಮಾತನಾಡಿ, ಜಿಎಸ್‌ಟಿ ಬರುವವರಿಗೆ ಹಾಗೂ ಐಟಿ ಅವರಿಗೆ ಕೊಡಬಾರದು ಅಂತಿದೆ. ಈ ಕುರಿತು ಸರ್ಕಾರಿ ನೌಕರರ ಜೊತೆ ಚರ್ಚೆ ಮಾಡುತ್ತೇವೆ. ಸರ್ಕಾರದ ಗ್ಯಾರಂಟಿ ಯೋಜನೆಯ ಫಲಾನುಭವಿಗಳು ಸ್ವಯಂಪ್ರೇರಿತವಾಗಿ ಬಿಟ್ಟುಕೊಡಲು ಸರ್ಕಾರಿ ನೌಕರರ ಸಂಘ ಮತ್ತು ಇತರೆ ಸಂಘಗಳೊಂದಿಗೆ ಚರ್ಚೆ ನಡೆಸುವುದು ಕೂಡ ಗ್ಯಾರಂಟಿ ಪ್ರಾಧಿಕಾರದ ಅಜೆಂಡಾ ಆಗಿದೆ ಎಂದು ತಿಳಿಸಿದ್ದಾರೆ.
ಇದಕ್ಕೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ (Shadakshari) ಅವರು ಪ್ರತಿಕ್ರಿಯೆ ನೀಡಿದ್ದು, ಗ್ಯಾರಂಟಿ ಪ್ರಾಧಿಕಾರ ನಮ್ಮ ಬಳಿ ಚರ್ಚೆ ಮಾಡಿದ್ರೆ ನಮ್ಮ ಅಭಿಪ್ರಾಯ ತಿಳಿಸುತ್ತೇವೆ. ಗ್ಯಾರಂಟಿ ಕೊಡಿ ಅಂತಾ ನಾವು ಕೇಳಿರಲಿಲ್ಲ, ಅವರೇ ಕೊಟ್ಟಿದ್ದಾರೆ. ಈಗ ವಾಪಾಸ್ ತೆಗೆದುಕೊಳ್ಳುತ್ತೇವೆ ಅಂತಿದ್ದಾರೆ. ಶಕ್ತಿ ಯೋಜನೆಯಿಂದ ಮಹಿಳಾ ನೌಕರರಿಗೆ ಅನುಕೂಲ ಆಗುತ್ತಿದೆ. ನಮ್ಮ ಬಳಿ ಚರ್ಚೆ ಮಾಡಿದಾಗ ನಮ್ಮ ಅಭಿಪ್ರಾಯ ತಿಳಿಸುತ್ತೇವೆ ಎಂದಿದ್ದಾರೆ.
