ಚಿಕ್ಕಮಗಳೂರು: ಕೊಬ್ಬರಿ ತುಂಬಿದ್ದ ಲಾರಿ ಸೇತುವೆಗೆ ಡಿಕ್ಕಿ ಹೊಡೆದು ಪಲ್ಟಿಯಾಗಿರುವ ಘಟನೆ ಜಿಲ್ಲೆಯ ತರೀಕೆರೆಯ ಎಪಿಎಂಸಿ ಯಾರ್ಡ್ ಬಳಿ ನಡೆದಿದೆ.
ಹಾಸನದ ಅರಸೀಕೆರೆಯಲ್ಲಿ ಕೊಬ್ಬರಿ ಲೋಡ್ ಮಾಡಿಕೊಂಡ ಲಾರಿ ಮಹಾರಾಷ್ಟ್ರದತ್ತ ಹೊರಟಿತ್ತು. ಇಂದು ಬೆಳಗ್ಗಿನ ಜಾವ ತರೀಕೆರೆಗೆ ಬರುತ್ತಿದ್ದಂತೆ ಲಾರಿ ಚಾಲಕ ನಿದ್ರೆ ಮಂಪರಿನಲ್ಲಿದ್ದ ಪರಿಣಾಮ ಲಾರಿ ಪಲ್ಟಿಯಾಗಿದೆ ಎಂದು ಹೇಳಲಾಗುತ್ತಿದೆ.
ಪಲ್ಟಿಯಾದ ರಭಸಕ್ಕೆ ಒಂದೇ ಒಂದು ಟೈರ್ ಕೂಡ ಲಾರಿಯಲ್ಲಿ ಇಲ್ಲ. ಅಷ್ಟೇ ಅಲ್ಲದೇ ಸೇತುವೆಯಿಂದ ಪಲ್ಪಿಯಾದ ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಅದೃಷ್ಟವತಾಶ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಲಾರಿ ಚಾಲಕನಿಗೆ ಸಣ್ಣ-ಪುಟ್ಟ ಗಾಯಗಳಾಗಿದ್ದು, ಅವರನ್ನು ತರೀಕೆರೆ ಸರ್ಕಾರಿ ಆಸ್ಪತೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ನಡೆದ ಸ್ಥಳಕ್ಕೆ ತರೀಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ.