ಬೆಂಗಳೂರು: ರಾಜ್ಯದ ವಿವಿಧ ಭಾಗಗಳಲ್ಲಿ ಶನಿವಾರ ರಾತ್ರಿಯಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿದೆ. ಬೆಳಗಾವಿ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಕಳೆದ ರಾತ್ರಿಯಿಂದ ಬಿಟ್ಟು ಬಿಡದೆ ಸುರಿಯುತ್ತಿದೆ. ರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಅಲ್ಲದೆ ಬೆಳಗಾವಿಯ ಮಾರುತಿ ಗಲ್ಲಿಯ 20ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಮನೆಯ ಮುಂಭಾಗದ ರಸ್ತೆಗಳು ನದಿಯಂತಾಗಿದ್ದು, ಹೊರಬರಲು ಜನರು ಹರಸಾಹಸ ಪಡುತ್ತಿದ್ದಾರೆ.
ಬೆಳಗಾವಿಯಲ್ಲಿ ಮುಂಗಾರು ಮಳೆಯ ಅಬ್ಬರ ಜೋರಾಗಿದ್ದು, ಕಳೆದ ರಾತ್ರಿ ಸುರಿದ ಭಾರೀ ಮಳೆಯಿಂದ ರಸ್ತೆ ಮೇಲೆ ನೀರು ಹರಿದಾಡುತ್ತಿದೆ. ಬೆಳಗಾವಿ ಜಿಲ್ಲೆಯಾದ್ಯಂತ ಸುರಿದ ಭಾರೀ ಮಳೆಗೆ ಪಟ್ಟಣದ ಮಾರುತಿ ನಗರದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಸದ್ಯ ನೀರನ್ನು ಹೊರಹಾಕಲು ಜನರು ಶ್ರಮಪಡುತ್ತಿದ್ದಾರೆ. ಮಳೆಯಿಂದಾಗಿ ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಇಂದು ಬೆಳಗ್ಗಿನಿಂದ ಕೂಡ ತುಂತುರು ಮಳೆ ಸುರಿಯುತ್ತಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.
Advertisement
Advertisement
ಧಾರವಾಡದಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಶನಿವಾರ ಸಂಜೆಯಿಂದ ರಾತ್ರಿಯಿಡೀ ಮಳೆಯ ಅಬ್ಬರ ನಿಂತಿಲ್ಲ. ಬೆಳಗ್ಗೆಯೂ ವರುಣ ತನ್ನ ಅಬ್ಬರವನ್ನು ಮುಂದುವರಿಸಿದ್ದಾನೆ. ಮಳೆಯಿಂದಾಗಿ ಬಹುತೇಕ ಕಡೆ ರಾತ್ರಿಯಿಂದಲೇ ವಿದ್ಯುತ್ ಕಡಿತಗೊಂಡಿದೆ. ತಂಪು ಗಾಳಿ ಸಹಿತ ಮಳೆ ಸುರಿಯುತ್ತಿದೆ.
Advertisement
Advertisement
ಕಳೆದ ವಾರ ರಾಜ್ಯದ ನಾನಾ ಭಾಗಗಳಲ್ಲಿ ಉತ್ತಮ ಮಳೆ ಆಗಿತ್ತು. ಆದರೆ ಹಾವೇರಿ ಜಿಲ್ಲೆಯಲ್ಲಿ ಮಳೆರಾಯನ ಅವಕೃಪೆಯಿಂದ ಜನರಲ್ಲಿ ಆತಂಕ ಮನೆ ಮಾಡಿತ್ತು. ಇಂದು ಹಾವೇರಿ ಜಿಲ್ಲೆಯ ಹಲವು ಭಾಗಗಳಲ್ಲಿ ಉತ್ತಮ ಮಳೆ ಆಗಿದೆ. ಜಿಲ್ಲೆಯ ಬ್ಯಾಡಗಿ, ಹಾನಗಲ್ ತಾಲೂಕು ಸೇರಿದಂತೆ ವಿವಿಧ ಭಾಗದಲ್ಲಿ ಮಳೆ ಆಗಿದೆ. ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ರೈತರು ಆತಂಕಕ್ಕೆ ಒಳಗಾಗಿದ್ದರು. ಒಂದು ಗಂಟೆಗಳ ಕಾಲ ಧಾರಕಾರವಾಗಿ ಮಳೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಜನರಿಗೆ ಸಂತಸವಾಗಿದೆ. ಜನರು ಹೆಚ್ಚಿನ ಮಳೆಯ ನಿರೀಕ್ಷೆಯಲ್ಲಿ ಇದ್ದಾರೆ. ಇದು ಸ್ವಲ್ಪ ಮಟ್ಟಿಗೆ ರೈತರ ಆತಂಕವನ್ನು ದೂರ ಮಾಡಿದೆ.
ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮಳೆರಾಯನ ಆರ್ಭಟ ಮುಂದುವರಿದಿದೆ. ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಒಟ್ಟು 524.7 ಮಿ.ಮೀ ಮಳೆಯಾಗಿದೆ. ಮಳೆಯಿಂದಾಗಿ ಕಾರವಾರದ ಹಲವು ಭಾಗದಲ್ಲಿ ಚರಂಡಿಯಲ್ಲಿ ಕಸ ಕಟ್ಟಿ ರಸ್ತೆಗಳಲ್ಲಿ ನೀರು ತುಂಬಿ ಹರಿಯುತ್ತಿದೆ. ಹಲವು ಜನವಸತಿ ಪ್ರದೇಶಗಳಲ್ಲಿ ರಸ್ತೆಗಳ ಮೇಲೆ ನೀರು ಹರಿಯುತ್ತಿದ್ದು ಸಂಚಾರಕ್ಕೆ ತೊಂದರೆಗಳಾಗಿವೆ. ಜಿಲ್ಲೆಯಾದ್ಯಂತ ಮಳೆ ಮುಂದುವರಿದಿದ್ದು ಮಂಡಗೋಡು ಭಾಗ ಹೊರತುಪಡಿಸಿ ಉಳಿದ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ.